ಮಡಿಕೇರಿ, ಜೂ. ೧೨: ಕೊಡಗಿನವರಾದ ಮುಕ್ಕಾಟಿರ ಶಿಲ್ಪ ನಂಜಪ್ಪ ಅವರಿಗೆ ಪ್ರತಿಷ್ಠಿತ ಉಸ್ತಾದ್ ಬಿಸ್ಮಿಲ್ಹಾ ಖಾನ್ ಯುವ ಪುರಸ್ಕಾರ ಲಭಿಸಿದೆ. ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಸಂಗೀತ್ ನಾಟಕ್ ಅಕಾಡಮಿ ಕೊಡಮಾಡುವ ಈ ಪುರಸ್ಕಾರಕ್ಕೆ ಶಿಲ್ಪ ನಂಜಪ್ಪ ಅವರು ಭಾಜನರಾಗಿದ್ದಾರೆ. ಈ ಪ್ರಶಸ್ತಿಯು ದೇಶದ ಅತ್ಯಂತ ಶ್ರೇಷ್ಠ ಯುವ ಪುರಸ್ಕಾರವಾಗಿದ್ದು, ಶಿಲ್ಪ ಅವರು ಕಳೆದ ದಶಕದಿಂದ ಕೊಡವ ಸಂಸ್ಕೃತಿಯ ಬೆಳವಣಿಗೆಗೆ ನಡೆಸಿದ ಸಂಶೋಧನೆಗೆ ಅನುಗುಣವಾಗಿ ೨೦೨೪ನೇ ಸಾಲಿನ ಪುರಸ್ಕಾರವನ್ನು ನೀಡಲಾಗಿದೆ. ಇವರು ಮೂಲತಃ ಕಕ್ಕಬ್ಬೆ ನಿವಾಸಿ ಅಲ್ಲಾರಂಡ ಉತ್ತಪ್ಪ ಮತ್ತು ಕಾವೇರಿಯಮ್ಮ ದಂಪತಿಯ ಪುತ್ರಿಯಾಗಿದ್ದು, ಮುಕ್ಕಾಟಿರ ನಂಜಪ್ಪ ಅವರ ಪತ್ನಿ.