ಸಿದ್ದಾಪುರ, ಜೂ. ೧೨: ನೆಲ್ಲಿಹುದಿಕೇರಿ ಗ್ರಾಮದ ನದಿ ತೀರದ ಸಂಭವನೀಯ ಪ್ರವಾಹ ಪೀಡಿತ ಪ್ರದೇಶದ ನಿವಾಸಿಗಳಿಗೆ ಮಳೆಗಾಲದ ಮುಂಜಾಗ್ರತಾ ಕ್ರಮವಾಗಿ ಕಂದಾಯ ಇಲಾಖೆ ವತಿಯಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ನೋಟೀಸ್ ಜಾರಿ ಮಾಡಲಾಗಿದೆ.

ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿ ತೀರದ ಪ್ರವಾಹ ಪೀಡಿತ ಪ್ರದೇಶಗಳಾದ ಬೆಟ್ಟದ ಕಾಡು, ಕುಂಬಾರಗುAಡಿ, ನಲ್ವತ್ತೇಕರೆ, ಬರಡಿ ಭಾಗದ ನೂರಾರು ಮನೆಗಳಿಗೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಕುಶಾಲನಗರ ತಾಲೂಕು ಕಂದಾಯ ಪರಿವೀಕ್ಷಕ ಸಂತೋಷ್ ಅವರ ನೇತೃತ್ವದಲ್ಲಿ ಗ್ರಾಮ ಆಡಳಿತ ಅಧಿಕಾರಿ ಎಸ್.ಕೆ. ಸಂತೋಷ್ ಹಾಗೂ ಗ್ರಾಮ ಸಹಾಯಕ ಸ್ವಾಮಿ ಅವರು ನೋಟಿಸ್ ಜಾರಿ ಮಾಡಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂಜುAಡಸ್ವಾಮಿ ಹಾಜರಿದ್ದರು. ಈ ವೇಳೆ ಮಾತನಾಡಿದ ಕುಶಾಲನಗರ ತಾಲೂಕು ಕಂದಾಯ ಪರಿವೀಕ್ಷಕ ಸಂತೋಷ್ ಮಳೆಗಾಲದಲ್ಲಿ ಪ್ರವಾಹದ ನೀರು ಏರಿಕೆಯಾದ ಸಂದರ್ಭ ಸಂತ್ರಸ್ತ ಕುಟುಂಬಗಳಿಗೆ ತಾತ್ಕಾಲಿಕ ಆಶ್ರಯ ಪಡೆಯಲು ಈಗಾಗಲೇ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮುದಾಯ ಭವನ ಹಾಗೂ ಸರಕಾರಿ ಶಾಲೆಗಳನ್ನು ಗುರುತಿಸಲಾಗಿದೆ.

ಕುಶಾಲನಗರ ತಾಲೂಕಿನ ಸಂಭವನೀಯ ಪ್ರವಾಹ ಪೀಡಿತ ಪ್ರದೇಶಗಳಾದ ವಾಲ್ನೂರು - ತ್ಯಾಗತ್ತೂರು, ನಂಜರಾಯಪಟ್ಟಣ, ದುಬಾರೆ, ನೆಲ್ಲಿಹುದಿಕೇರಿ ಗ್ರಾಮದಲ್ಲಿ ಕಂದಾಯ ಇಲಾಖೆ ವತಿಯಿಂದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.