ಮಡಿಕೇರಿ, ಜೂ. ೧೧: ಮೂರ್ನಾಡು ಕಡೆಯಿಂದ ಮಡಿಕೇರಿಯತ್ತ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಘಟನೆ ನಡೆದಿದೆ.

ನಗರದ ಜನರಲ್ ತಿಮ್ಮಯ್ಯ ಸರ್ಕಲ್‌ನಿಂದ ಅನತಿ ದೂರದಲ್ಲಿರುವ ಆಲ್ವೇಸ್ ಸರ್ವಿಸ್ ಸ್ಟೇಷನ್ ಬಳಿ ಘಟನೆ ಸಂಭವಿಸಿದೆ. ಕಡಂಗ ನಿವಾಸಿ ಕೆ.ಎಂ ತಮ್ಮಯ್ಯ ಅವರು ಚಾಲನೆ ಮಾಡುತ್ತಿದ್ದ ಕಾರು ಏಕಾಏಕಿ ನಿಯಂತ್ರಣ ತಪ್ಪಿ ರಸ್ತೆಯ ಎಡ ಬದಿಗೆ ಮಗುಚಿದೆ. ಪರಿಣಾಮ ೪೦ ಅಡಿ ಆಳಕ್ಕೆ ಕಾರ್ ಪಲ್ಟಿ ಹೊಡೆದಿದೆ. ಮನ್ಸೂರ್ ಎಂಬವರ ಮನೆಯ ಹಿಂಬದಿಯೇ ಘಟನೆ ನಡೆದಿದ್ದು, ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಸ್ಥಳೀಯರು ದೌಡಾಯಿಸಿ ಚಾಲಕನ ರಕ್ಷಣೆಗೆ ನಿಂತರು. ಅಡ್ಡಲಾಗಿದ್ದ ಮರದ ಕೊಂಬೆಯನ್ನು ಕಡಿದು, ಹಗ್ಗ ಕಟ್ಟಿ ಕಾರನ್ನು ಎಳೆದು, ಕಾರಿನ ಹಿಂಬದಿಯ ಗ್ಲಾಸ್ ಒಡೆದು ಚಾಲಕನನ್ನು ಕಾರಿನಿಂದ ಹೊರಗೆಳೆದು ರಕ್ಷಿಸಲಾಯಿತು.

ಅದೃಷ್ಟವಶಾತ್ ಚಾಲಕ ತಮ್ಮಯ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಲ ಕಿವಿ ಮತ್ತು ಭುಜದ ಭಾಗಕ್ಕೆ ಪೆಟ್ಟಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಘಟನೆ ನಡೆದ ಭಾಗದಲ್ಲಿ ತಡೆಗೋಡೆ ಇದ್ದಿದ್ದರೆ ಅವಘಡ ತಪ್ಪಿಸಬಹುದಿತ್ತು ಎಂದು ಸ್ಥಳೀಯರು ತಿಳಿಸಿದ್ದು, ಬ್ಯಾರಿಕೇಡ್ ಅಳವಡಿಸಿ ಮುಂಜಾಗ್ರತೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.