ಸೋಮವಾರಪೇಟೆ, ಜೂ. ೧೧: ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಗೆ ಒಳಪಡುವ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಮೂಲಕ ರೂ. ೧೯.೮೩ ಕೋಟಿ ವೆಚ್ಚದಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಪ್ರಗತಿಯಲ್ಲಿರುವ ಆಲೇಕಟ್ಟೆ-ಇನಕನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿ ನಿರೀಕ್ಷಿತ ಸಮಯದಲ್ಲಿ ಪೂರ್ಣಗೊಳ್ಳದ ಹಿನ್ನೆಲೆ ಸಾರ್ವಜನಿಕರ ಪರದಾಟ ನಿರಂತರ ಎಂಬAತಾಗಿದೆ.

ಡಾAಬರು ರಸ್ತೆ ಬಹುತೇಕ ಪೂರ್ಣಗೊಂಡಿದ್ದರೂ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಮಾತ್ರ ಆಮೆನಡಿಗೆಯನ್ನೂ ಮೀರಿಸುವಂತಿದೆ. ಯೋಜನೆಯಂತೆ ಕಾಮಗಾರಿ ನಡೆದಿದ್ದರೆ ಕಳೆದ ೬ ತಿಂಗಳ ಹಿಂದೆಯೇ ಈ ರಸ್ತೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗುತ್ತಿತ್ತು.

ಆದರೆ ನಿರೀಕ್ಷೆಯಂತೆ ಕಾಮಗಾರಿ ನಡೆಯದ ಹಿನ್ನೆಲೆ ಸಾರ್ವಜನಿಕರು ಸಮಸ್ಯೆಗೆ ಸಿಲುಕುವಂತಾಗಿದೆ. ಈ ನಡುವೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳ ಬಳಿ ಲೋಕೋಪಯೋಗಿ ಇಲಾಖೆಯ ಅಭಿಯಂತರರು ಮನವಿ ಮಾಡಿಕೊಂಡಿದ್ದು, ಜಿಲ್ಲಾಧಿಕಾರಿಗಳು ನೀಡಿದ್ದ ತಿಂಗಳ ಕಾಲಾವಕಾಶ ತಾ. ೧೨ಕ್ಕೆ (ಇಂದಿಗೆ) ಕೊನೆಗೊಳ್ಳುತ್ತಿದೆ. ಈ ಅವಧಿಯಲ್ಲಿ ಕಾಂಕ್ರಿಟ್ ಕಾಮಗಾರಿ ಪೂರ್ಣಗೊಂಡು ಕ್ಯೂರಿಂಗ್ ಮುಗಿಯಬೇಕಿತ್ತು. ಆದರೆ ಇಂದಿಗೂ ಸಹ ಕಾಂಕ್ರೀಟ್ ಕಾಮಗಾರಿಯೇ ಪೂರ್ಣಗೊಂಡಿಲ್ಲ.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ವತಿಯಿಂದ ಸೋಮವಾರಪೇಟೆ ಪಟ್ಟಣದಿಂದ ತೋಳೂರುಶೆಟ್ಟಳ್ಳಿ ಮಾರ್ಗವಾಗಿ ಕೂತಿ ಮೂಲಕ ಹಾಸನ ಜಿಲ್ಲೆ ಸಂಪರ್ಕಿಸುವ ಮಾಗಡಿ-ಜಾಲ್ಸೂರು ರಸ್ತೆ ಅಭಿವೃದ್ಧಿಗೆ ೨೦ ಕೋಟಿ ಅನುದಾನವನ್ನು ಶಾಸಕ ಡಾ. ಮಂತರ್ ಗೌಡ ಅವರ ಕೋರಿಕೆಯ ಮೇರೆ ಬಿಡುಗಡೆಗೊಳಿಸಿ, ರಸ್ತೆ ಕಾಮಗಾರಿಗೆ ಕಳೆದ ೨೦೨೫ರ ಜನವರಿ ೧೧ ರಂದು ಲೋಕೋಪಯೋಗಿ ಇಲಾಖಾ ಸಚಿವ ಸತೀಶ್ ಜಾರಕಿಹೊಳಿ ಅವರು ಚಾಲನೆ ನೀಡಿದ್ದರು.

ಹೆಚ್‌ಎಸ್‌ಡಿಪಿ ಯೋಜನೆಯಡಿ ಬೆಂಗಳೂರು-ಜಾಲ್ಸೂರು ರಾಜ್ಯಹೆದ್ದಾರಿ ೮೫ಕ್ಕೆ ಒಳಪಡುವ ಸೋಮವಾರಪೇಟೆ-ತೋಳೂರುಶೆಟ್ಟಳ್ಳಿ-ಕೂತಿ ರಸ್ತೆಯನ್ನು ಈಗಾಗಲೇ ಕೆಲ ಭಾಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಪಟ್ಟಣದ ವಿವೇಕಾನಂದ ವೃತ್ತದಿಂದ ಆಲೇಕಟ್ಟೆವರೆಗೆ ಕಳೆದ ನಾಲ್ಕು ವರ್ಷದ ಹಿಂದೆ ಸಿಮೆಂಟ್ ರಸ್ತೆ ನಿರ್ಮಿಸಿದ್ದು, ಮುಂದುವರೆದ ೭.೨೪ ಕಿ.ಮೀ. ರಸ್ತೆಯನ್ನು ಮೇಲ್ದರ್ಜೆಗೇರಿಸಲು ೨೦ ಕೋಟಿ ಅನುದಾನವನ್ನು ಶಾಸಕ ಮಂತರ್ ಅವರ ಕೋರಿಕೆಯಂತೆ ಒದಗಿಸಲಾಗಿದ್ದು, ಕಾಮಗಾರಿಗೆ ತೋಳೂರುಶೆಟ್ಟಳ್ಳಿಯಲ್ಲಿ ಸಚಿವರು ಚಾಲನೆ ನೀಡಿದ್ದರು. ಒಟ್ಟಾರೆ ರಸ್ತೆ ಅಭಿವೃದ್ಧಿಗೆ ೯ ತಿಂಗಳ ಅವಕಾಶ ನೀಡಿದ್ದು, ನಿರೀಕ್ಷಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸಚಿವರು ತಾಕೀತು ಮಾಡಿದ್ದರು. ಆದರೆ ಇಂದಿಗೂ ಕಾಮಗಾರಿ ಪೂರ್ಣಗೊಂಡಿಲ್ಲ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ತೋಳೂರುಶೆಟ್ಟಳ್ಳಿ ಸಮೀಪದ ಇನಕನಹಳ್ಳಿಯಿಂದ ಕೂಡುರಸ್ತೆಯವರೆಗೆ ಡಾಂಬರೀಕರಣ ಪೂರ್ಣಗೊಂಡಿದ್ದು, ಕೂಡುರಸ್ತೆಯಿಂದ ಆಲೇಕಟ್ಟೆವರೆಗೆ ಕಾಂಕ್ರೀಟ್ ರಸ್ತೆ ಕಾಮಗಾರಿ ಪ್ರಸ್ತುತ ಆಮೆನಡಿಗೆಯಲ್ಲಿ ನಡೆಯುತ್ತಿದೆ.

ಕಳೆದ ಮೇ. ೧೩ರಿಂದ ಜೂನ್ ೧೨ರವರೆಗೆ ಕಾಂಕ್ರಿಟೀಕರಣಕ್ಕಾಗಿ ಜಿಲ್ಲಾಧಿಕಾರಿಗಳು ಈ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ‘ಪೇವರ್’ ಬಳಸಿ ರಸ್ತೆ ನಿರ್ಮಿಸಬೇಕಾದ ಹಿನ್ನೆಲೆ ಸಂಚಾರ ಬಂದ್ ಮಾಡುವಂತೆ ಅಭಿಯಂತರರು ಮಾಡಿದ್ದ ಮನವಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸಿದ್ದರು. ಆದರೆ ಜಿಲ್ಲಾಧಿಕಾರಿಗಳ ಆದೇಶಕ್ಕೆ ತಕ್ಕಂತೆ ಗುತ್ತಿಗೆದಾರರು ರಸ್ತೆ ಕೆಲಸವನ್ನು ಈವರೆಗೆ ಪೂರ್ಣಗೊಳಿಸಿಲ್ಲ.

ಪ್ರಸ್ತುತ ಒಂದು ಬದಿಯಲ್ಲಿ ಕಾಂಕ್ರೀಟ್ ಹಾಕಲಾಗಿದ್ದು, ಮತ್ತೊಂದು ಬದಿಯಲ್ಲಿ ಶೇ. ೩೦ರಷ್ಟು ಮಾತ್ರ ಕಾಂಕ್ರಿಟೀಕರಣ ಆಗಿದೆ. ಇನ್ನೂ ಶೇ. ೭೦ ರಷ್ಟು ಬಾಕಿಯಿದೆ. ಈ ಮಧ್ಯೆ ನೂತನ ಕಾಂಕ್ರೀಟ್ ರಸ್ತೆಯಲ್ಲಿ ಬಿರುಕುಗಳೂ ಮೂಡಿದ್ದು, ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸುವಂತೆ ಮಾಡಿದೆ. ಕಳೆದ ವಾರ ‘ಮಿಕ್ಸಿಂಗ್ ಪ್ಲಾಂಟ್‌ನಲ್ಲಿ ಕೆಮಿಕಲ್ ರಿಟಾರ‍್ಸ್’ನ್ನು ಹೆಚ್ಚಾಗಿ ಹಾಕಿದ್ದರ ಪರಿಣಾಮ ಕ್ಯೂರಿಂಗ್ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆ ಸುಮಾರು ೧೦೦ ಮೀಟರ್‌ನಷ್ಟು ಉದ್ದಕ್ಕೆ ರಸ್ತೆಗೆ ಹಾಕಿದ್ದ ಕಾಂಕ್ರೀಟ್‌ನ್ನು ಹಿಟಾಚಿ ಯಂತ್ರದ ಮೂಲಕ ತೆರವುಗೊಳಿಸಿ, ರಸ್ತೆ ಬದಿಗೆ ಸುರಿಯಲಾಗಿದೆ. ಕಾಮಗಾರಿ ತಡವಾಗಲು ಇದೂ ಕೂಡ ಒಂದು ಕಾರಣವಾಗಿದೆ.

ಇದೀಗ ಮಳೆಗಾಲ ಆರಂಭವಾಗಿದ್ದು, ಮುಖ್ಯರಸ್ತೆಯೇ ಬಂದ್ ಆಗಿರುವುದರಿಂದ ವಾಹನಗಳು ಗ್ರಾಮೀಣ ರಸ್ತೆಯಲ್ಲಿ ಸಂಚರಿಸುತ್ತಿವೆ. ಪ್ರಮುಖವಾಗಿ ತಾಲೂಕಿನ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರ ವಾಹನಗಳು, ನೆರೆಯ ಸುಬ್ರಹ್ಮಣ್ಯ, ಬಿಸಿಲೆ ಘಾಟ್, ವನಗೂರು ಕೂಡುರಸ್ತೆ ಮಾರ್ಗವಾಗಿ ಸಕಲೇಶಪುರ ಭಾಗಕ್ಕೆ ಸಂಚರಿಸುವ ವಾಹನಗಳು ಹಾನಗಲ್ಲು ಗ್ರಾ.ಪಂ. ವ್ಯಾಪ್ತಿಯ ಗ್ರಾಮೀಣ ಭಾಗದ ರಸ್ತೆಯನ್ನೇ ಆಶ್ರಯಿಸಿವೆ.

ಇದರೊಂದಿಗೆ ಶಾಂತಳ್ಳಿ, ತೋಳೂರುಶೆಟ್ಟಳ್ಳಿ, ಯಡೂರು, ಕಲ್ಕಂದೂರು, ಹೊಸಬೀಡು, ಕೂತಿ, ಎಡದಂಟೆ, ಮಾಗೇರಿ, ಕುಂದಳ್ಳಿ, ಕೊತ್ನಳ್ಳಿ ಸೇರಿದಂತೆ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಸಾರ್ವಜನಿಕರ ವಾಹನಗಳೂ ಕೂಡ ಇದೇ ರಸ್ತೆಯನ್ನು ಅವಲಂಬಿಸಿರುವುದರಿAದ ಹಾನಗಲ್ಲುಬಾಣೆ, ಹಾನಗಲ್ಲುಶೆಟ್ಟಳ್ಳಿ, ಹಾನಗಲ್ಲು ಗ್ರಾಮದ ರಸ್ತೆಗಳು ಇನ್ನಿಲ್ಲದಂತೆ ದುಸ್ಥಿತಿಗೆ ಒಳಗಾಗಿವೆ.

ಕಿರಿದಾದ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ದಿನಂಪ್ರತಿ ಒಂದಿಲ್ಲೊAದು ವಾಹನಗಳು ಚರಂಡಿಗೆ ಸಿಲುಕುತ್ತಿವೆ. ರಸ್ತೆ ಮಧ್ಯೆಯೇ ಗುಂಡಿಗಳು ನಿರ್ಮಾಣವಾಗಿದ್ದು, ಸಂಚಾರಕ್ಕೆ ಸಮಸ್ಯೆ ತಂದೊಡ್ಡಿದೆ. ಮಳೆ ಹೆಚ್ಚಾದರೆ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಬೃಹತ್ ವಾಹನಗಳು ಸಂಚರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ವೇಗ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. - ವಿಜಯ್ ಹಾನಗಲ್