ಮಡಿಕೇರಿ,ಜೂ.೧೧: ಪ್ರಾಕೃತಿಕ ಸೌಂದರ್ಯದಿAದ ಗಮನ ಸೆಳೆಯುತ್ತಿದ್ದ ಮಂಜಿನ ನಗರಿ ಮಡಿಕೇರಿ ಬರಬರುತ್ತಾ ಕಸ, ತ್ಯಾಜ್ಯಗಳಿಂದಾಗಿ ದುರ್ನಾತ ಬೀರುವಂತಹ ಪರಿಸ್ಥಿತಿಗೆ ತಲಪಿದೆ. ಸರಿಸುಮಾರು ೨೦ ವರ್ಷಗಳಿಂದ ತಲೆದೋರಿರುವ ಕಸದ ಸಮಸ್ಯೆ ಬಗೆಹರಿಯದೆ ಕಸದ ಗುಡ್ಡದಲ್ಲೀಗ ಕಸ ಕೊಳೆತು ನಾರುತ್ತಿದೆ. ಒಂದೆಡೆ ಹಳೆಯ ಪಾರಂಪರಿಕ ಕಸ ವಿಂಗಡಣಾ ಕಾರ್ಯ ನಡೆಯುತ್ತಿದ್ದರೆ, ಮತ್ತೊಂದೆಡೆ ನಗರ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಕಸಗಳನ್ನು ಸುರಿಯಲು ಜಾಗವಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಸದ ಗುಡ್ಡದಲ್ಲಿ ಮೂರು- ಮೂರು ಕಸದ ರಾಶಿಗಳಾಗಿವೆ. ಇದೀಗ ಮಳೆಗಾಲ ಆರಂಭವಾಗಿದ್ದು, ಕೊಳೆಯುತ್ತಿರುವ ಕಸದ ರಾಶಿಯ ಮಲಿನ ನೀರು ಸದ್ದಿಲ್ಲದೆ ಕೆಳಭಾಗದ ಸುಬ್ರಮಣ್ಯನಗರ, ರೈಫಲ್ ರೇಂಜ್ ಕಡೆಗೆ ಹರಿಯುತ್ತಿದೆ..!
ಮಡಿಕೇರಿ ನಗರದ ತುತ್ತತುದಿಯ ಸ್ಟೋನ್‌ಹಿಲ್ ಬಳಿಯ ಗುಡ್ಡದ ಮೇಲೆ ಕಸ ಸುರಿಯಲಾಗುತ್ತಿದ್ದು, ಕಸದ ರಾಶಿ ಬೆಟ್ಟದ ರೀತಿಯಲ್ಲಿ ಬೆಳೆದು ಕೆಳಭಾಗದ ಜನವಸತಿ ಪ್ರದೇಶಗಳಾದ ಸುಬ್ರಮಣ್ಯನಗರ, ರೈಫಲ್ ರೇಂಜ್ ಕಡೆಗಳಿಗೆ ಜಾರತೊಡಗಿ ಸಮಸ್ಯೆಗಳು ಎದುರಾದಾಗ ಬೇಸತ್ತ ನಾಗರಿಕರು ಎಸ್‌ಆರ್‌ವಿಕೆ ಅಸೋಸಿಯೇಶನ್ ರಚನೆ ಮಾಡಿಕೊಂಡು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಈ ಸಂಬAಧ ಸುದೀರ್ಘ ಹೋರಾಟ ನಡೆದು ಅಸೋಸಿಯೇಶನ್‌ನವರು ಸಲ್ಲಿಸಿದ್ದ ದಾಖಲೆಗಳನ್ನು ಪರಿಗಣಿಸಿ ನ್ಯಾಯಾಲಯವು ರಾಶಿ ಬಿದ್ದಿರುವ ಕಸಗಳನ್ನು ಬೇರೆಡೆಗೆ ಸ್ಥಳಾಂತರಿಸುವದರೊAದಿಗೆ ಕಸ ಹಾಕಲು ಪರ್ಯಾಯ ಜಾಗ ಒದಗಿಸುವಂತೆ ಜಿಲ್ಲಾಡಳಿತಕ್ಕೆ ನಿದೇರ್ಶನ ನೀಡಿತ್ತು. ಬಳಿಕ ಅಸೋಸಿಯೇಶನ್ ಸಹಕಾರದೊಂದಿಗೆ ಕಂದಾಯ ಇಲಾಖೆ ಎರಡನೇ ಮೊಣ್ಣಂಗೇರಿಯಲ್ಲಿ ೧೦ ಎಕರೆ ಜಾಗ ಗುರುತಿಸಿ ನಗರಸಭೆ ಹೆಸರಿಗೆ ಮಂಜೂರು ಮಾಡಿಸಿ ಹಸ್ತಾಂತರ ಮಾಡಲಾಗಿತ್ತು. ಆದರೆ, ಕಂದಾಯ ಇಲಾಖೆ ಪೈಸಾರಿ ಜಾಗವೆಂದು ಗುರುತಿಸಿಕೊಟ್ಟಿರುವ ಜಾಗವು ಅರಣ್ಯ ಇಲಾಖೆಗೆ ಸೇರಿದ ಜಾಗವೆಂದು ತಕರಾರು ಎತ್ತಿದ ಹಿನ್ನೆಲೆಯಲ್ಲಿ ಮತ್ತೆ ಸಮಸ್ಯೆ ಎದುರಾಯಿತು.
ವಿಂಗಡಣೆ ವಿಳಂಬ..!
ಇತ್ತ ನ್ಯಾಯಾಲಯದ ಸೂಚನೆಯಂತೆ ಸ್ಟೋನ್‌ಹಿಲ್ ಬಳಿ ಸುರಿಯಲಾಗಿರುವ ಹಳೆಯ ಪಾರಂಪರಿಕ ಕಸದ ವಿಂಗಡಣೆ ಹಾಗೂ ಸಾಗಾಟಕ್ಕಾಗಿ ನಗರಸಭೆಯಿಂದ ಐದು ಬಾರಿ ಟೆಂಡರ್ ಕರೆದರೂ ಯಾರೂ ಕೂಡ ಭಾಗವಹಿಸದೇ ಇದ್ದುದರಿಂದ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತು. ಇತ್ತ ಸಮಸ್ಯೆ ಬಿಗಡಾಯಿಸುತ್ತಿದ್ದಂತೆ ಏಕ ಟೆಂಡರ್ ಹಾಕಿದ್ದ ಪೂನಾ ಮೂಲದ ಗುತ್ತಿಗೆದಾರ ಬಶೀರ್ ಎಂಬವರಿಗೆ ಗುತ್ತಿಗೆ ನೀಡಲಾಗಿ ರೂ.೫.೮ ಕೋಟಿ ಹಣ ಮೀಸಲಿರಿಸಲಾಯಿತು. ಕಳೆದ ವರ್ಷವೇ ಕೆಲಸ ಪ್ರಾರಂಭಿಸಿದ ಗುತ್ತಿಗೆದಾರ ನಂತರದಲ್ಲಿ ಮಳೆಯ ನೆಪವೊಡ್ಡಿ ಸ್ಥಗಿತಗೊಳಿಸಿದ್ದರು. ನಗರಸಭೆಯಿಂದ ಹಲವು ಬಾರಿ ನೋಟೀಸ್ ಜಾರಿ ಮಾಡಿದ್ದರೂ ಗುತ್ತಿಗೆದಾರರು ಸ್ಪಂದಿಸಿರಲಿಲ್ಲ. ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಮಂತರ್ ಗೌಡ ಆಸಕ್ತಿ ವಹಿಸಿ ಪೌರಾಡಳಿತ ಸಚಿವರೊಂದಿಗೆ ಮಾತನಾಡಿ ಗುತ್ತಿಗೆದಾರರು ಕೆಲಸ ಆರಂಭಿಸುವAತೆ ಮಾಡಿದ್ದರು.
ಫೆಬ್ರವರಿಯಲ್ಲಿ ಆರಂಭ
ಪದೇ ಪದೇ ಒತ್ತಡ ಬಂದ ಹಿನ್ನೆಲೆಯಲ್ಲಿ ಇತ್ತ ಮಳೆಯೂ ನಿಂತು ಹೋದ ಬಳಿಕ ಗುತ್ತಿಗೆದಾರರು ಕಸ ವಿಂಗಡಣೆ ಮಾಡುವ ಕೆಲಸ ಆರಂಭಿಸಿದರು. ಕಳೆದ ಫೆಬ್ರವರಿಯಲ್ಲಿ ಎರಡು ಬೃಹತ್ ಕಸ ವಿಂಗಡಣಾ ಯಂತ್ರಗಳ ಮೂಲಕ ವಿಂಗಡಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು. ನಂತರದಲ್ಲಿ ವಿಂಗಡಣಾ ಕಾರ್ಯ ಮುಂದುವರಿಯಿತು. ಯಂತ್ರದ ಒಂದು ಬದಿಯಿಂದ ಗೊಬ್ಬರ ಹಾಗೂ ಇನ್ನೆರಡು ಬದಿಯಲ್ಲಿ ಪುಡಿಯಾಗದ ಕಸಗಳು ವಿಂಗಡಣೆಯಾಗಿ ಅವುಗಳನ್ನು ಪ್ರತ್ಯೇಕವಾಗಿ ರಾಶಿ ಹಾಕಲಾಯಿತು.
ಮೂರು- ಮೂರು ರಾಶಿ..!
ಕಸ ವಿಂಗಡಣಾ ಕಾರ್ಯ ಆರಂಭಗೊAಡು ನಾಲ್ಕು ತಿಂಗಳು ಕಳೆದಿವೆ. ಒಂದು ಹಂತಕ್ಕೆ ಸ್ವಲ್ಪ ಮಟ್ಟಿನ ಕಸ ವಿಂಗಡಣೆಯಾಗಿವೆ. ಆದರೆ, ಇದೀಗ ಮತ್ತೊಂದು ಸಮಸ್ಯೆ ತಲೆದೋರಿದೆ. ವಿಂಗಡಣೆಯಾದ ಗೊಬ್ಬರಗಳನ್ನು ಅಲ್ಲಿಯೇ ಒಂದು ಕಡೆ ರಾಶಿ ಹಾಕಲಾಗಿದೆ. ಪುಡಿಯಾಗದೆ ಬಾಕಿ ಉಳಿದಿರುವ ಕಸವನ್ನೂ ರಾಶಿ ಮಾಡಲಾಗಿದೆ. ಇತ್ತ ಪಾತಾಳ ಸೇರಿಕೊಂಡಿರುವ ಹಳೆಯ ಕಸದ ರಾಶಿಯನ್ನು ಕೂಡ ಯಂತ್ರಗಳ ಮೂಲಕ ಎಳೆದು ರಾಶಿ ಹಾಕಲಾಗುತ್ತಿದೆ. ಒಟ್ಟಾರೆಯಾಗಿ ಒಂದೇ ಗುಡ್ಡದಂತಿದ್ದ ಕಸದ ರಾಶಿ ಈಗ ಮೂರಾಗಿವೆ..!
ಸಾಗಾಟ ಮಾಡಿಲ್ಲ..!
ಗುತ್ತಿಗೆದಾರರಿಗೆ ನೀಡಿರುವ ಕರಾರಿನಿಂತೆ ವಿಂಗಡಣೆಯ ಬಳಿಕ ತಯಾರಾಗುವ ಗೊಬ್ಬರವನ್ನು ನಗರಸಭೆಗೆ ನೀಡಬೇಕು. ಉಳಿದ ಪುಡಿಯಾಗದ ಕಸಗಳನ್ನು ಸ್ಥಳದಿಂದ ಸಾಗಾಟ ಮಾಡಬೇಕಿದೆ. ಆದರೆ., ಗೊಬ್ಬರವಾಗಲೀ ಪುಡಿಯಾಗದ ಕಸಗಳನ್ನಾಗಲೀ ಯಾವದನ್ನೂ ಸಾಗಾಟ ಮಾಡದೇ ಮತ್ತೆ ಅಲ್ಲಿಯೇ ರಾಶಿ ಹಾಕಲಾಗಿದೆ. ಇದೀಗ ಮಳೆಗಾಲ ಆರಂಭವಾಗಿದ್ದು, ಆವರಣ ಕೊಳೆತ ಕೊಂಪೆಯAತಾಗಿದೆ. ಅಲ್ಲಿರುವ ಕಸ ಹಾಗೂ ಗೊಬ್ಬರವನ್ನು ಸಾಗಾಟ ಮಾಡುವದು ಕಷ್ಟಸಾಧ್ಯವೇ ಸರಿ..!
ಮಲದ ಗುಂಡಿ ಬಳಿ ರಾಶಿ..!
ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ವಿಂಗಡಣೆ ಮಾಡಿ ದೊರೆತ ಗೊಬ್ಬರದ ಪೈಕಿ ಒಂದಷ್ಟು ಗೊಬ್ಬರವನ್ನು ಕಸ ಸಂಗ್ರಹಾಗಾರದಿAದ ಹೊರಗಡೆ ರಾಶಿ ಹಾಕಲಾಗಿದೆ. ಇದಕ್ಕಾಗಿ ಗುತ್ತಿಗೆದಾರ ಎರಡು ಟಿಪ್ಪರ್‌ಗಳನ್ನು ಬಳಸಿಕೊಂಡಿದ್ದು, ಗೊಬ್ಬರ ತೂಕ ಮಾಡಲು ತೂಕ ಮಾಡುವ ಸ್ಥಳ(ವೇಯಿಂಗ್ ಯಾರ್ಡ್) ಮಾಡಿಕೊಂಡಿದ್ದು, ಆ ಮೂಲಕ ತೂಕ ಮಾಡಿ ಅಲ್ಲೇ ಸನಿಹದಲ್ಲಿರುವ ನಗರಸಭೆಯಿಂದ ನಿರ್ಮಿಸಲಾಗಿರುವ ಮಲ ಸಂಗ್ರಹಣಾ ಗುಂಡಿಯ ಬಳಿಯಲ್ಲಿ ರಾಶಿ ಹಾಕಲಾಗಿದೆ. ಇದೀಗ ಸುರಿಯುತ್ತಿರುವ ಮಳೆಗೆ ಒಂದಷ್ಟು ಗೊಬ್ಬರ ನೀರಿನೊಂದಿಗೆ ಹರಿದು ಬಂದು ಮಲದ ಗುಂಡಿಯಲ್ಲಿ ತುಂಬಿಕೊAಡಿದೆ..!
ಸಮಸ್ಯೆ - ಭರವಸೆಗೆ ಮುಕ್ತಿ ಎಂದು..!?
ಇದೀಗ ಮಳೆಗಾಲ ಆರಂಭವಾಗಿದೆ. ಕಳೆದ ವರ್ಷ ಗುತ್ತಿಗೆದಾರರು ಮಳೆ ಎಂಬ ಕಾರಣಕ್ಕೆ ಕೆಲಸ ಸ್ಥಗಿತಗೊಳಿಸಿದ್ದರು. ಮತ್ತೆ ಕೆಲಸ ಸಗಿತಗೊಳಿಸಿದಲ್ಲಿ ಮುಂದಿನ ಬೇಸಿಗೆ ಬರುವವರೆಗೂ ಕಸ ಸುರಿಯಲು ಜಾಗವೇ ಇರುವದಿಲ್ಲ. ಮನೆಗಳಲ್ಲಿ ಸಂಗ್ರಹವಾಗುವ ಕಸಗಳು ರಸ್ತೆ ಬದಿಗೆ ಬಂದರೂ ಅತಿಶಯೋಕ್ತಿಯಾಗಲಾರದು..!
ವರ್ಷದ ಹಿಂದೆ ಕಾಮಗಾರಿಗೆ ಶಾಸಕರು ಹಾಗೂ ಸಂಸದರು ಚಾಲನೆ ನೀಡಿದ್ದು, ನಂತರದಲ್ಲಿ ಅವರುಗಳಾಗಲೀ, ನಗರಸಭಾ ಪ್ರತಿನಿಧಿಗಳಾಗಲೀ ಆಸಕ್ತಿ ವಹಿಸದ ಬಗ್ಗೆ ನಗರದ ಜನತೆ ಅಸಮಾಧಾನಗೊಂಡಿದ್ದಾರೆ. ದಶಕಗಳಿಂದ ತಲೆದೋರಿರುವ ಸಮಸ್ಯೆಯನ್ನು ಪರಿಹರಿಸುವದಾಗಿ ಅಧಿಕಾರಿಗಳು, ಪ್ರತಿನಿಧಿಗಳು ನೀಡುತ್ತಾ ಬರುತ್ತಿರುವ ಭರವಸೆಗಳಿಗೆ ಮುಕ್ತಿ ಎಂದು..,? ಎಂದು ನಾಗರಿಕರು ಪ್ರಶ್ನಿಸುವಂತಾಗಿದೆ..!
-ಕುಡೆಕಲ್ ಸಂತೋಷ್, ಚಿತ್ರಗಳು : ಲಕ್ಷಿö್ಮÃಶ್