ಸೋಮವಾರಪೇಟೆ, ಜೂ. ೧೧: ಜಿಲ್ಲಾ ಲೋಕಾಯುಕ್ತ ವತಿಯಿಂದ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ಲೋಕಾಯುಕ್ತ ಕಾಯ್ದೆಯಡಿ ದೂರು ಅರ್ಜಿ ಸ್ವೀಕಾರ ಸಭೆ ನಡೆಯಿತು.
ಲೋಕಾಯುಕ್ತ ನಿರೀಕ್ಷಕರಾದ ವೀಣಾ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ವಿವಿಧ ಇಲಾಖೆಗಳಿಗೆ ಸಂಬAಧಿಸಿದAತೆ ೧೭ ಅರ್ಜಿಗಳು ಸಲ್ಲಿಕೆಯಾದವು. ಸೋಮವಾರಪೇಟೆ ತಾಲೂಕು ಕಚೇರಿಯ ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಭೂಮಾಪನಾ ಇಲಾಖೆ, ಸೆಸ್ಕ್, ಅಬ್ಕಾರಿ, ಪರಿಸರ ನೈರ್ಮಲ್ಯ, ಕೊಳಚೆ ನೀರು ನಿರ್ಮೂಲನಾ ಮಂಡಳಿ ಸೇರಿದಂತೆ ಹಲವು ಇಲಾಖೆಗಳ ಕಾರ್ಯವೈಖರಿಗಳ ವಿರುದ್ದ ಸಾರ್ವಜನಿಕರು ಲೋಕಾಯುಕ್ತಕ್ಕೆ ಅಹವಾಲು ಸಲ್ಲಿಸಿದರು.
ನಿರೀಕ್ಷಕರಾದ ವೀಣಾ ಮಾತನಾಡಿ, ಸಾರ್ವಜನಿಕರು ದೂರು ಸಲ್ಲಿಸುವಾಗ ಸಮರ್ಪಕ ದಾಖಲೆಯನ್ನು ಇಟ್ಟುಕೊಳ್ಳಬೇಕು. ತಾವು ಸಲ್ಲಿಸಿದ ಅರ್ಜಿ ವಿಲೇವಾರಿಯಾಗದಿರುವ ಕುರಿತು ಸಮರ್ಪಕ ಮಾಹಿತಿ ಒದಗಿಸಬೇಕು. ಮೌಖಿಕ ಹೇಳಿಕೆಗಳನ್ನು ದೂರುಗಳೆಂದು ಪರಿಗಣಿಸಲು ಸಾಧ್ಯವಿಲ್ಲ. ಲಿಖಿತ ಹಾಗೂ ಸ್ಪಷ್ಟವಾದ ಮಾಹಿತಿ ನೀಡಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ವೈಯಕ್ತಿಕ ಆರೋಪ-ಪ್ರತ್ಯಾರೋಪ ಮಾಡಬಾರದು. ಸಮರ್ಪಕ ದಾಖಲೆ ನೀಡಿದರೆ ಕ್ರಮಕೈಗೊಳ್ಳಲು ಸಾಧ್ಯವಿದೆ ಎಂದರು.
ತಾಲೂಕಿನ ಮುಳ್ಳೂರು ಕೆರೆಯ ಜಾಗ ಒತ್ತುವರಿ, ನೇರುಗಳಲೆ ಪಂಚಾಯಿತಿ ವ್ಯಾಪ್ತಿಯ ಯಲಕನೂರಿನಲ್ಲಿ ನಡೆಯುತ್ತಿರುವ ಗಣಿಗಾರಿಕೆ, ಸ್ಮಶಾನ ಜಾಗ ಕಾಯ್ದಿರಿಸುವಿಕೆ, ಕಾಫಿ ಪಲ್ಪರ್ ನೀರನ್ನು ಹೊಳೆಗೆ ಬಿಡುತ್ತಿರುವ ಕುರಿತು ದೂರುಗಳು ಸಲ್ಲಿಕೆಯಾದವು.
ದೂರು ಅರ್ಜಿ ಸ್ವೀಕಾರ ಸಭೆಯಲ್ಲಿ ಬಹುತೇಕ ದೂರುಗಳು ಕಂದಾಯ ಮತ್ತು ಭೂಮಾಪನಾ ಇಲಾಖೆಯ ವಿರುದ್ಧ ಸಲ್ಲಿಕೆಯಾದವು.
ತೋಟಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ನಾಲ್ಕು ವರ್ಷಗಳು ಕಳೆದರೂ ನಿವೃತ್ತಿ ವೇತನ ದೊರೆತಿಲ್ಲವೆಂದು ರವಿಕುಮಾರ್ ಮನವಿ ಮಾಡಿದರು.
ಸಭೆಯಲ್ಲಿ ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.