ಸೋಮವಾರಪೇಟೆ, ಜೂ. ೧೧: ಇಲ್ಲಿನ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಯಕರ್ತರ ಕುಂದು ಕೊರತೆ ಸಭೆ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆಯಲ್ಲಿ ಪಟ್ಟಣದ ಮಹಿಳಾ ಸಮಾಜದಲ್ಲಿ ನಡೆಯಿತು.
ಸಭೆಯಲ್ಲಿ ಶಾಸಕ ಡಾ. ಮಂತರ್ ಗೌಡ ಉಪಸ್ಥಿತರಿದ್ದು ಮೊದಲಿಗೆ ಕಾರ್ಯಕರ್ತರ ಬೇಡಿಕೆ ಮತ್ತು ಸಮಸ್ಯೆಯನ್ನು ಆಲಿಸಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಮಂತರ್ ಗೌಡ, ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದೆ. ಕಾರ್ಯಕರ್ತರು ಚುನಾವಣೆ ಎದುರಿಸಲು ಸಿದ್ಧರಾಗಬೇಕು. ಇದರೊಂದಿಗೆ ಎಸ್ಐಆರ್ ಬಗ್ಗೆ ಹೆಚ್ಚು ಗಮನ ಹರಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.
ನಿಮ್ಮ ಭಾಗಗಳಲ್ಲಿ ಸಮಸ್ಯೆಗೀಡಾದವರು, ಅನಾರೋಗ್ಯಕ್ಕೆ ತುತ್ತಾದವರು ಇದ್ದಲ್ಲಿ ಅವರ ಬಗ್ಗೆ ಕಾಳಜಿ ವಹಿಸಿ ಕೈಲಾದಷ್ಟು ಸಹಾಯ ಮಾಡಿ; ನನ್ನ ಗಮನಕ್ಕೂ ತರಬೇಕು ಎಂದರು. ಸ್ಥಳೀಯ ಬೂತ್ ಮಟ್ಟದಿಂದ ತಾಲೂಕಿನವರೆಗೂ ಸಕ್ರಿಯ ಕಾರ್ಯಕರ್ತರನ್ನು ಗುರುತು ಮಾಡಿ ಅಧ್ಯಕ್ಷರ ನೇಮಕ ಮಾಡಬೇಕಿದೆ. ಇದು ಆದಷ್ಟು ಬೇಗ ಆಗಬೇಕು. ಪ್ರಮುಖವಾಗಿ ನಗರದಲ್ಲಿ ಸ್ವಚ್ಛತೆ ಬಗ್ಗೆ ನಾವೆಲ್ಲರೂ ಗಮನ ಹರಿಸಬೇಕೆಂದು ತಿಳಿಸಿದರು.
ಅಧ್ಯಕ್ಷ ಮಂಜುನಾಥ್ ಮಾತನಾಡಿ, ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆಗೆ ಅರ್ಹ ಅಭ್ಯರ್ಥಿ ಗಳನ್ನು ಗುರುತಿಸಿ ಶಾಸಕರ ಗಮನಕ್ಕೆ ತರಲಾಗುವುದು ಎಂದರು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಯೋಜನಾ ಪ್ರಾಧಿಕಾರ ತಾಲೂಕು ಅಧ್ಯಕ್ಷ ಆದಮ್, ನಗರ ಪ್ರಚಾರ ಸಮಿತಿ ಅಧ್ಯಕ್ಷ ನಾಗೇಶ್, ನಗರ ಕಾರ್ಯದರ್ಶಿ ಭುವನೇಶ್, ಮಹಿಳಾ ಘಟಕದ ಅಧ್ಯಕ್ಷೆ ಶುಭ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಬಿ.ಸಿ. ವೆಂಕಟೇಶ್ ಸೇರಿದಂತೆ ಇತರರು ಇದ್ದರು.