ಪೊನ್ನಂಪೇಟೆ, ಜೂ. ೧೧: ಗೋಣಿಕೊಪ್ಪಲಿನ ಕಾವೇರಿ ಪಾಲಿಟೆಕ್ನಿಕ್ ಕಾಲೇಜಿನ ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿAಗ್ ವಿದ್ಯಾರ್ಥಿಗಳು ನೂತನ ಗಾರ್ಡನ್ ಕಟರ್ (ಲಾನ್ ಮೋವರ್) ಅನ್ನು ಅಭಿವೃದ್ಧಿಪಡಿಸಿದ್ದಾರೆ.
ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದ ಬೋಧಕ ಉನ್ನಿಕೃಷ್ಣನ್ ಈ ಯಂತ್ರದ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ಕಡಿಮೆ ಮಾನವ ಶ್ರಮ, ಕಡಿಮೆ ಕಂಪನ ಹಾಗೂ ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿರುವ, ಸಂಪೂರ್ಣ ಎಲೆಕ್ಟಿçಕ್ ಚಾಲಿತವಾಗಿರುವ ಈ ಯಂತ್ರ ಪರಿಸರ ಸ್ನೇಹಿಯಾಗಿದೆ. ಪೆಟ್ರೋಲ್ ಮತ್ತು ಟೂ-ಸ್ಟ್ರೋಕ್ ಎಂಜಿನ್ಗಳಿಗೆ ಹೋಲಿಸಿದರೆ ಕಡಿಮೆ ನಿರ್ವಹಣಾ ವೆಚ್ಚ ಮತ್ತು ಕಡಿಮೆ ಶಬ್ದ ಮಾಲಿನ್ಯ ಹೊಂದಿದೆ ಎಂದರು.
ಯAತ್ರದ ಸಮತೋಲನ ಕಾಪಾಡಲು ಹೆಚ್ಚುವರಿ ತೂಕ ಅಳವಡಿಸಿದ್ದು, ಕಾರ್ಯಾಚರಣೆ ವೇಳೆ ಉಂಟಾಗುವ ಕಂಪನಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ದೊಡ್ಡ ಗಾತ್ರದ ಚಕ್ರಗಳಿಂದ ಯಂತ್ರವನ್ನು ಸುಲಭವಾಗಿ ತಳ್ಳಬಹುದಾಗಿದ್ದು, ಬಳಕೆದಾರರ ದೈಹಿಕ ಶ್ರಮವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಬ್ಲೇಡ್ ಮತ್ತು ಕಟಿಂಗ್ ರೋಪ್ಗಳನ್ನು ಸುಲಭವಾಗಿ ಬದಲಾಯಿಸುವ ವ್ಯವಸ್ಥೆ ಹಾಗೂ ರಿವರ್ಸ್ ಕಾರ್ಯಾಚರಣೆ ಸೌಲಭ್ಯವನ್ನೂ ಒಳಗೊಂಡಿದೆ. ೨೦ ನಿಮಿಷಗಳ ನಿರಂತರ ಕಾರ್ಯಾಚರಣೆಯಲ್ಲಿ ೨೫೦ ರಿಂದ ೩೦೦ ಚದರ ಅಡಿ ಪ್ರದೇಶವನ್ನು ಕತ್ತರಿಸಬಲ್ಲ ಈ ಗಾರ್ಡನ್ ಕಟರ್, ಸೂಕ್ತ ಪರಿಸ್ಥಿತಿಗಳಲ್ಲಿ ೫೦೦ ಚದರ ಅಡಿವರೆಗೆ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಸಮತಟ್ಟಾದ ಪ್ರದೇಶಗಳಲ್ಲಿ ಇನ್ನಷ್ಟು ಉತ್ತಮ ಫಲಿತಾಂಶ ನೀಡಲಿದ್ದು, ಮುಂದಿನ ಹಂತದಲ್ಲಿ ಟ್ರ್ಯಾಕ್ ವೀಲ್ ವ್ಯವಸ್ಥೆ, ಸೆನ್ಸರ್ ಆಧಾರಿತ ನಿಯಂತ್ರಣ ಹಾಗೂ ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆ ಅಳವಡಿಸಲು ವಿದ್ಯಾರ್ಥಿಗಳು ಚಿಂತನೆ ನಡೆಸಿದ್ದಾರೆ. ಸ್ಥಳೀಯವಾಗಿ ಲಭ್ಯವಿರುವ ಸಾಮಗ್ರಿಗಳನ್ನು ಬಳಸಿ ನಿರ್ಮಿಸಲಾದ ಈ ಯೋಜನೆಯ ಒಟ್ಟು ವೆಚ್ಚ ಸುಮಾರು ರೂ.೩೦ ಸಾವಿರ ಆಗಿದೆ. ಕಾಫಿ ತೋಟಗಳು ಹಾಗೂ ಉದ್ಯಾನ ಪ್ರದೇಶಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸವನ್ನು ಪರಿಷ್ಕರಿಸಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಾಂಶುಪಾಲ ಕೆ. ಶ್ರೀನಿವಾಸ್ ಮಾತನಾಡಿ, ಯೋಜನಾ ಕಾರ್ಯದ ಭಾಗವಾಗಿ ನಮ್ಮ ಅಂತಿಮ ವರ್ಷದ ಮೆಕ್ಯಾನಿಕಲ್ ವಿದ್ಯಾರ್ಥಿಗಳು ಎಲೆಕ್ಟಿçಕ್ ಲಾನ್ ಮೋವರ್ ಅನ್ನು ವಿನ್ಯಾಸಗೊಳಿಸಿ ತಯಾರಿಸಿದ್ದಾರೆ. ಇದು ನಿಜಕ್ಕೂ ಯಶಸ್ವಿ ಯೋಜನೆಯಾಗಿದ್ದು, ನಮ್ಮ ಕಾಲೇಜು ಆವರಣದಲ್ಲಿನ ಹುಲ್ಲನ್ನು ಸ್ವಚ್ಛಗೊಳಿಸಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಈ ನವೀನ ಆವಿಷ್ಕಾರವನ್ನು ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಕೆ.ಇ. ದೇವಯ್ಯ, ಉಪನ್ಯಾಸಕರಾದ ಉನ್ನಿಕೃಷ್ಣನ್ ಪಿ.ಪಿ., ಸುನೀಲ್ ಕುಮಾರ್ ಎಸ್. ಅವರ ಮಾರ್ಗದರ್ಶನದಲ್ಲಿ ಕಾರ್ಯಗತಗೊಳಿಸಿದ್ದಾರೆ ಎಂದರು. ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.