ಮಡಿಕೇರಿ, ಜೂ. ೧೦: ಕೊಡಗು ಜಿಲ್ಲೆಯ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (ಸಿಆರ್‌ಎಫ್) ಅಡಿಯಲ್ಲಿ ಜಿಲ್ಲೆಯ ಮೂರು ಪ್ರಮುಖ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ೨೨ ಕೋಟಿ ಮಂಜೂರು ಮಾಡಿದೆ ಎಂದು ಸಂಸದ ಯದುವೀರ್ ಒಡೆಯರ್ ಮಾಹಿತಿ ನೀಡಿದ್ದಾರೆ.

ಕೊಡಗಿನ ಬಹುಕಾಲದ ರಸ್ತೆ ಅಭಿವೃದ್ಧಿ ಅಗತ್ಯಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಕೇಂದ್ರ ಸರ್ಕಾರ ಸ್ಪಂದಿಸಿದೆ ಎಂದು ತಿಳಿಸಿದ್ದಾರೆ.

ಮಂಜೂರಾಗಿರುವ ಕಾಮಗಾರಿಗಳು

ಕೊಡ್ಲಿಪೇಟೆ - ಹೆಬ್ಬಾಲೆ ರಸ್ತೆ (ಎಸ್‌ಎಚ್-೨೪೪) ಗೋಪಾಲಪುರ - ಬಾಣಾವರ ಹೆಬ್ಬಾಲೆ ಮಾರ್ಗವಾಗಿ ಮುಳ್ಳೂರು ಹಾಗೂ ಮಾಲಂಬಿ (ಆಯ್ದ ಭಾಗಗಳು) ಸಂಪರ್ಕಿಸುವ ಸೋಮವಾರಪೇಟೆ ತಾಲೂಕಿನ ರಸ್ತೆ ಅಭಿವೃದ್ಧಿಗೆ ರೂ. ೬ ಕೋಟಿ, ಮಡಿಕೇರಿ - ಕುಟ್ಟ ರಸ್ತೆ (ಎಸ್‌ಎಚ್-೮೯), ಕುಶಾಲನಗರ ಮತ್ತು ಮಡಿಕೇರಿ ತಾಲೂಕುಗಳನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ೧೦ ಕೋಟಿ, ತಲಕಾವೇರಿ ರಸ್ತೆ (ಎಸ್‌ಎಚ್-೯೦), ವೀರಾಜಪೇಟೆ ತಾಲೂಕಿನ ಆಯ್ದ ಭಾಗಗಳ ರಸ್ತೆ ಅಭಿವೃದ್ಧಿಗೆ ೬ ಕೋಟಿ ಅನುದಾನ ವಿನಿಯೋಗವಾಗಲಿದೆ. ಕಾಮಗಾರಿಗೆ ಉದ್ದೇಶಿತ ರಸ್ತೆಗಳು ಕೊಡಗು ಜಿಲ್ಲೆಯ ನಿವಾಸಿಗಳು, ರೈತರು, ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ವ್ಯಾಪಾರ ವಲಯದವರಿಗೆ ಅತ್ಯಂತ ಪ್ರಮುಖ ಸಂಪರ್ಕ ಮಾರ್ಗಗಳಾಗಿವೆ. ಈ ಕಾಮಗಾರಿಗಳ ಅನುಷ್ಠಾನದಿಂದ ರಸ್ತೆ ಸುರಕ್ಷತೆ, ಪ್ರಯಾಣಿಕರ ಅನುಕೂಲತೆ ಹಾಗೂ ಸಾರಿಗೆ ದಕ್ಷತೆ ಹೆಚ್ಚುವುದರ ಜೊತೆಗೆ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯಲಿದೆ. ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಕೊಡಗು ಜಿಲ್ಲೆಗೆ ಸ್ಥಳೀಯರ ಹಾಗೂ ಪ್ರವಾಸಿಗರ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಉತ್ತಮ ಗುಣಮಟ್ಟದ ರಸ್ತೆ ಮೂಲಸೌಕರ್ಯ ಅತ್ಯಗತ್ಯವಾಗಿದೆ. ಸಿಆರ್‌ಎಫ್ ಅಡಿಯಲ್ಲಿ ದೊರೆತಿರುವ ಈ ಅನುದಾನವು ಬಹುಕಾಲದಿಂದ ಅಭಿವೃದ್ಧಿಗೆ ಕಾಯುತ್ತಿದ್ದ ಪ್ರಮುಖ ರಸ್ತೆ ಭಾಗಗಳ ಉನ್ನತೀಕರಣಕ್ಕೆ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.