ಕೂಡಿಗೆ, ಜೂ ೧೦: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ತೋಳನ ಕೆರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ.
ಬೆಂಗಳೂರಿನ ಗೋಕುಲ್‌ದಾಸ್ ಎಕ್ಸ್ಪೋರ್ಟ್ ಫೌಂಡೇಶನ್ ಮತ್ತು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ ಐಸೆಕ್‌ನ ಸಿ.ಎಸ್.ಆರ್. ನಿಧಿಯ ಮೂಲಕ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಕೆರೆಗೆ ಕಾಯಕಲ್ಪ ನೀಡಲಾಗುತ್ತಿದೆ.
ರೂ ೨ ಲಕ್ಷದ ವೆಚ್ಚದಲ್ಲಿ ಕೆರೆಯ ಹೂಳು ತೆಗೆಯುವುದು, ಸುತ್ತಲೂ ಸಮತಟ್ಟು ಕಾರ್ಯದೊಂದಿಗೆ ಸುತ್ತಮುತ್ತಲಿನ ಪರಿಸರವನ್ನು ಶುಚಿಗೊಳಿಸಿ ಸುಂದರೀಕರಣಗೊಳಿಸುವ ಕೆಲಸವೂ ಸಾಗುತ್ತಿದೆ. ಮಳೆಯ ನೀರು ಕೆರೆಯಲ್ಲಿ ಸಂಗ್ರಹವಾಗುವ ಹಿನ್ನೆಲೆ ಸುತ್ತಮುತ್ತಲಿನ ನೂರಾರು ರೈತರಿಗೆ ಅನುಕೂಲವಾಗಲಿದ್ದು, ಅಂತರ್ಜಲ ಮಟ್ಟವೂ ಹೆಚ್ಚಾಗಲಿದೆ. ಗ್ರಾಮಸ್ಥರ ಬೇಡಿಕೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಸಂಸ್ಥೆಯವರು ಕೆರೆಯನ್ನು ಅಭಿವೃದ್ಧಿ ಮೂಲಕ ದುರಸ್ತಿಪಡಿಸುತ್ತಿದ್ದಾರೆ.
ಮಳೆಗಾಲದಲ್ಲಿ ಕೆರೆಯಲ್ಲಿ ನೀರು ತುಂಬಿ ರೈತಾಪಿ ಜನರಿಗೆ ಅನುಕೂಲವಾಗಲೆಂದು ಸಂಸ್ಥೆಯವರು ಆಶಯ ವ್ಯಕ್ತಪಡಿಸಿದ್ದಾರೆ.