ಮಡಿಕೇರಿ, ಜೂ. ೧೦: ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ಮಿತಿಮೀರಿದೆ; ಈ ಹಿನ್ನೆಲೆ ರಾಜ್ಯ ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಕೊಡಗು ಬಂದ್, ಬೆಂಗಳೂರು ಚಲೋ, ವಿಧಾನಸೌಧಕ್ಕೆ ಮುತ್ತಿಗೆ ಹೋರಾಟವನ್ನು ಹಂತಹAತವಾಗಿ ರೂಪಿಸಲಾಗುವುದು ಎಂದು ಜಿಲ್ಲಾ ಬಿಜೆಪಿ ಸರಕಾರವನ್ನು ಎಚ್ಚರಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭಾ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಹೊಸದಲ್ಲ. ಆದರೆ, ರಾಜ್ಯ ಸರ್ಕಾರ ಇದನ್ನು ತಡೆಯುವಲ್ಲಿ ವಿಫಲವಾಗಿದೆ. ೨೦೧೦ರಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಆಡಳಿದಲ್ಲಿದ್ದ ಸಂದರ್ಭ ಕಾಡಾನೆ ಹಾವಳಿ ತಡೆಗೆ ಆನೆ ಕಂದಕ, ರೈಲ್ವೆ ಬ್ಯಾರಿಕೇಡ್ ಯೋಜನೆಯನ್ನು ಅನುಷ್ಠಾನಕ್ಕೆ ತಂದಿತ್ತು. ಆ ನಂತರ ಬಿಜೆಪಿ ಸರ್ಕಾರ ಇದರ ನಿರ್ವಹಣೆಯನ್ನು ಮಾಡಿಕೊಂಡು ಬಂದಿತ್ತು. ಪರಿಣಾಮ ಆನೆ ಸಂಘರ್ಷ ಕಡಿಮೆಯಾಗಿತ್ತು. ಆದರೆ, ಪ್ರಸ್ತುತ ಅಧಿಕಾರದಲ್ಲಿ ರಾಜ್ಯ ಸರ್ಕಾರ ರೈಲ್ವೆ ಬ್ಯಾರಿಕೇಡ್ ಮತ್ತು ಆನೆ ಕಂದಕದ ನಿರ್ವಹಣೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದರ ಪರಿಣಾಮವೇ ಕಾಡಾನೆಗಳ ದಾಳಿ ಮಿತಿಮೀರಲು ಕಾರಣ ಎಂದು ಆರೋಪಿಸಿದರು.
ಕೊಡಗಿನಲ್ಲಿ ನಿರಂತವಾಗಿ ಕಾಡಾನೆ ದಾಳಿಯಾಗುತ್ತಿದೆ. ಇತ್ತೀಚೆಗೆ ಹಿರಿಯ ಐಪಿಎಸ್ ಅಧಿಕಾರಿಯ ಪತ್ನಿ ಅಸುನೀಗಿದ್ದಾರೆ. ಮಾನವನ ಜೀವಗಳಿಗೆ ಬೆಲೆ ಇಲ್ಲದಂತಾಗಿದೆ. ಮುಖ್ಯಮಂತ್ರಿಗಳು ಜಿಲ್ಲೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕಿದೆ ಎಂದರು.
ಪ್ರಾಣಿಗಳ ಮೇಲೆ ದಯೆ ಇರಲಿ ಎಂದು ರಾಜ್ಯ ಸರ್ಕಾರ ಕೆಎಸ್ಆರ್ಟಿಸಿ ಹಿಂಬದಿಯಲ್ಲಿ ಫಲಕ ಅಳವಡಿಸಿದೆ. ಆದರೆ, ಜಿಲ್ಲೆಯ ರೈತಾಪಿ ವರ್ಗ, ಕಾರ್ಮಿಕ ವರ್ಗ ಕಾಡಾನೆ ದಾಳಿಗೆ ಬಲಿಯಾಗುತ್ತಿದ್ದಾರೆ. ಮನುಷ್ಯನ ಮೇಲೆ ರಾಜ್ಯ ಸರ್ಕಾರಕ್ಕೆ ದಯೇ ಇಲ್ಲವೇ ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ಬಜೆಟ್ನಲ್ಲಿ ವನ್ಯಜೀವಿಗಳ ನಿಯಂತ್ರಣಕ್ಕೆ ಎಂದು ೫ ವರ್ಷಕ್ಕೆ ೧೫೦೦ ಕೋಟಿ ಅನುದಾನ ಘೋಷಿಸಿದೆ. ಈ ಹಣ ಎಲ್ಲಿ ವಿನಿಯೋಗವಾಗಿದೆ. ಎಷ್ಟು ಕಾಮಗಾರಿ ನಡೆದಿದೆ ಎಂಬ ಮಾಹಿತಿಯನ್ನು ನೀಡುವಂತಾಗಬೇಕು ಎಂದ ಅವರು, ರಾಜ್ಯ ಸರ್ಕಾರ ಇಂದು ಗ್ಯಾರಂಟಿ ಯೋಜನೆಗೆ ಹಣ ನೀಡಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂದು ಟೀಕಿಸಿದರು.
ವನ್ಯಜೀವಿಗಳ ದಾಳಿ ತಡೆ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆಕೂರಿಸುವ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸದೆ ಕೇಂದ್ರದಿAದ ಅಗತ್ಯ ಅನುದಾನ ಬಿಡುಗಡೆಯಾಗಲು ಸಾಧ್ಯವಿಲ್ಲ. ಕೇರಳ ಸರ್ಕಾರ ಪ್ರಸ್ತಾವನೆ ಸಲ್ಲಿಸಿ ಕೇಂದ್ರದಿAದ ಅನುದಾನ ತಂದಿದೆ. ಆದರೆ, ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಲ್ಲಿಸುವ ಗೋಜಿಗೇ ಹೋಗದೆ ವಿನಾಕಾರಣ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾಕುಶಾಲಪ್ಪ ಮಾತನಾಡಿ, ಕೊಡಗು ಜಿಲ್ಲೆ ಸೇರಿದಂತೆ ಚಾಮರಾಜನಗರ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಪರಿಣಾಮ ಕಾರ್ಮಿಕರು ತೋಟಗಳಿಗೆ ತೆÀರಳಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಆನೆ ಮಾನವ ಸಂಘರ್ಷ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದಲ್ಲಿ ಮಲೆನಾಡು ಭಾಗದ ೫ ಜಿಲ್ಲೆಗಳಲ್ಲಿ ಸಂಘಟನೆ ಮಾಡಿ ಹೋರಾಟ ತೀವ್ರಗೊಳಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಬಿಟ್ಟಿ ಭಾಗ್ಯಗಳಿಗೆ ರೂ. ೫೬ ಸಾವಿರ ಕೋಟಿ ಖರ್ಚು ಮಾಡುತ್ತಿರುವ ಸರಕಾರ ಐದು ಜಿಲ್ಲೆಗಳಲ್ಲಿ ಕಾಡಾನೆ ದಾಳಿ ತಡೆಗೆ ಶಾಶ್ವತ ಪರಿಹಾರ ರೂಪಿಸಲು ೨ ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕು. ಅರಣ್ಯ ಪ್ರದೇಶದಲ್ಲಿ ಆನೆಗಳ ಸಂತತಿ ಹೆಚ್ಚಾಗುತ್ತಿದ್ದು, ಆಹಾರದ ಕೊರತೆ ಎದುರಾಗಿದೆ. ಹೆಚ್ಚಾಗಿರುವ ಆನೆಗಳ ನಿರ್ವಹಣೆ ಮತ್ತು ಆಹಾರವನ್ನು ಬೆಳೆಸಲು ೨ ಸಾವಿರ ಎಕರೆ ಪ್ರದೇಶವನ್ನು ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಜಿಲ್ಲೆಯಲ್ಲಿ ತಿಂಗಳಿಗೆ ಇಬ್ಬರಂತೆ ಕಾಡಾನೆ ದಾಳಿಗೊಳಗಾಗಿ ಬಲಿಯಾಗುತ್ತಿದ್ದಾರೆ. ಸಾಕಷ್ಟು ಸಾವು ನೋವು ಸಂಭವಿಸಿದರೂ ರಾಜ್ಯ ಸರ್ಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರವನ್ನು ಎಚ್ಚರಿಸಲು ಈ ಹಿಂದೆ ಮಡಿಕೇರಿ, ವೀರಾಜಪೇಟೆ ವ್ಯಾಪ್ತಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೆವು. ಆದರೂ ಸರಕಾರ ಸಮಸ್ಯೆ ಬಗ್ಗೆ ಗಂಭೀರ ಚಿಂತನೆ ಹರಿಸಿಲ್ಲ. ತಾ. ೧೩ ರಂದು ಶನಿವಾರಸಂತೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಆಗಮಿಸಲಿದ್ದು, ಈ ಸಂದರ್ಭ ಹೋರಾಟದ ಬಗ್ಗೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ರಾಬಿನ್ ದೇವಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿ.ಕೆ.ಲೋಕೇಶ್ ಹಾಗೂ ಮಹೇಶ್ ಜೈನಿ ಉಪಸ್ಥಿತರಿದ್ದರು.