ಗೋಣಿಕೊಪ್ಪಲು, ಜೂ. ೧೦: ಕೆ. ಬಾಡಗ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಕಟ್ಟಡವನ್ನು ಸಂಸದ ಯದುವೀರ್ ಒಡೆಯರ್ ಲೋಕಾರ್ಪಣೆ ಮಾಡಿದರು.
ನೂತನ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಆರಂಭಿಕ ಹಂತದಲ್ಲಿ ಸಂಸದರ ಅನುದಾನದಿಂದ ರೂ. ೧೦ ಲಕ್ಷ ಅನುದಾನವನ್ನು ಸಹಕಾರ ಸಂಘದ ಅಭಿವೃದ್ಧಿಗಾಗಿ ಸಂಸದ ಯದುವೀರ್ ಒಡೆಯರ್ ನೀಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದರು.
ಸಂಘದ ನೂತನ ಕಟ್ಟಡ, ಬ್ಯಾಂಕಿನ ಭದ್ರತಾ ಕೊಠಡಿಯನ್ನು ಸಂಸದರು ಉದ್ಘಾಟಿಸಿದರು. ಈ ವೇಳೆ ಕೆ. ಬಾಡಗ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಮಾಚಿಮಾಡ ಎಂ. ತಿಮ್ಮಯ್ಯ ಮಾತನಾಡಿ, ಗ್ರಾಮೀಣ ಭಾಗದಲ್ಲಿ ರೈತರ ಹಿತದೃಷ್ಠಿಯಿಂದ ಸಹಕಾರ ಸಂಘವನ್ನು ಆರಂಭಿಸಲಾಗಿದೆ. ಹಂತಹAತವಾಗಿ ದಾನಿಗಳ ಸಹಕಾರ ಪಡೆದು ಸಂಘವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುತ್ತಿದೆ.
ಬ್ಯಾಂಕಿಗೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಮುಂದೆ ರೈತರ ಅನುಕೂಲಕ್ಕಾಗಿ ರೂ. ೩೦ ಲಕ್ಷ ವೆಚ್ಚದಲ್ಲಿ ರಸಗೊಬ್ಬರ ದಾಸ್ತಾನು ಕೊಠಡಿಯನ್ನು ನಿರ್ಮಿಸಬೇಕೆಂಬ ಅಭಿಲಾಷೆ ಆಡಳಿತ ಮಂಡಳಿಯದ್ದಾಗಿದೆ. ಇದಕ್ಕೆ ಬೇಕಾಗುವ ಅನುದಾನವನ್ನು ಸಂಸದರು ನೀಡುವಂತೆ ಮನವಿ ಮಾಡಿದರು. ಅಲ್ಲದೆ ಆಡಳಿತ ಮಂಡಳಿಯು ಸಂಸದರಿಗೆ ಮನವಿ ಪತ್ರವನ್ನು ಸಲ್ಲಿಸಿತು. ಈಗಾಗಲೇ ಮೊದಲ ಹಂತದಲ್ಲಿ ಸಂಘದ ಬೆಳವಣಿಗೆಗೆ ರೂ. ೧೦ ಲಕ್ಷ ಅನುದಾನವನ್ನು ನೀಡಲಾಗಿದೆ. ಆಡಳಿತ ಮಂಡಳಿಯ ಮನವಿ ಮೇರೆ ಮುಂದೆ ಹೆಚ್ಚಿನ ಅನುದಾನವನ್ನು ನೀಡುವ ಸಲುವಾಗಿ ಪ್ರಯತ್ನ ಮಾಡಲಾಗುವುದು. ಗ್ರಾಮೀಣ ಭಾಗದಲ್ಲಿರುವ ಸಂಘದ ಅಭಿವೃದ್ಧಿಗೆ ಸುತ್ತಮುತ್ತಲಿನ ಕೃಷಿಕರು ಹೆಚ್ಚಿನ ಸಹಕಾರ ನೀಡಬೇಕು ಎಂದು ಸಂಸದರು ನುಡಿದರು.
ನೂತನ ಕಟ್ಟಡ ಉದ್ಘಾಟನೆ ವೇಳೆ ಕೆ. ಬಾಡಗ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಉಪಾಧ್ಯಕ್ಷ ಬೊಳ್ಳೆರ ಜಿ. ಸುಬ್ಬಯ್ಯ ನಿರ್ದೇಶಕರುಗಳಾದ ಆಳಮೇಂಗಡ ಎ. ಮೋಟಯ್ಯ, ಬೊಳ್ಳೆರ ಕೆ. ಅಪ್ಪಯ್ಯ, ಪೆಮ್ಮಣಮಾಡ ಬಿ. ರಮೇಶ್, ದೇಯಂಡ ಟಿ. ಜಯರಾಮ್, ಕೆ.ಎಸ್. ಲೀಲಾವತಿ, ಸಿ.ಜಿ. ನರೇಂದ್ರ, ಎಂ.ಡಿ. ಸಂಧ್ಯಾ, ಮೇಘನಾ ಚಂದ್ರಶೇಖರ್, ಗುಡಿಯಂಗಡ ಮೀನಾಕ್ಷಿ ರಾಜ, ಕಳ್ಳಿಚಂಡ ಪಿ. ಪ್ರಭಕುಮಾರಿ, ಸಂಘದ ಸಿಇಓ ಶ್ರೇಯಸ್ ದೇವಯ್ಯ, ಸಿಬ್ಬಂದಿ ಎಂ.ಎA. ನೀಲಮ್ಮ ಸೇರಿದಂತೆ ಊರಿನ ಅನೇಕ ಪ್ರಮುಖರು, ಸಂಘದ ಸದಸ್ಯರು, ಬಿಜೆಪಿ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.