ಚೆಯ್ಯಂಡಾಣೆ, ಜೂ. ೯: ಚೆಯ್ಯಂಡಾಣೆ ಹಾಗೂ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ವಿತಿಮೀರಿದ್ದು, ಬೆಳೆಗಾರರ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳು ಫಸಲು ಭರಿತ ಕೃಷಿ ಗಿಡಗಳನ್ನು ತುಳಿದು ನಾಶಪಡಿಸಿ ಅಪಾರ ನಷ್ಟ ಉಂಟುಮಾಡಿ, ಗ್ರಾಮದಲ್ಲಿ ಜನರು ಓಡಾಡಲು ಭಯಪಡುವ ಪರಿಸ್ಥಿತಿ ಉದ್ಭವವಾದ ಹಿನ್ನೆಲೆ ಚೆಯ್ಯಂಡಾಣೆಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು. ಆರ್ಎಫ್ಓ ಶಿವರಾಮ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ಗ್ರಾಮಕ್ಕೆ ಆಗಮಿಸಿತು.
ಅವರಿಗೆ ಮನವಿ ಪತ್ರ ನೀಡಿ ಮಾತನಾಡಿದ ಪೊಕ್ಕುಳಂಡ್ರ ಧÀನೋಜ್, ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ೧೦ ದಿನಗಳ ಒಳಗೆ ಪುಂಡಾನೆಯನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಏಳು ಗ್ರಾಮಸ್ಥರು ಸೇರಿ ರಸ್ತೆ ತಡೆ ಮಾಡಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಆರ್ಎಫ್ಓ ಶಿವರಾಮ್, ಈ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳದ ಬಗ್ಗೆ ಮಾಹಿತಿ ದೊರೆತಿದ್ದು, ಶೀಘ್ರ ಮೇಲಾಧಿಕಾರಿಗಳ ಗಮನಕ್ಕೆ ತಂದು ಪುಂಡಾನೆೆಯನ್ನು ಸೆರೆ ಹಿಡಿಯಲು ವರದಿ ಸಲ್ಲಿಸಲಾಗುವುದು ಎಂದರು. ಈ ಸಂದರ್ಭ ಗ್ರಾಮಸ್ಥರಾದ ಎಸ್.ಎಸ್. ಸುಮಂತ್, ನೆಲ್ಲಮಕ್ಕಡ ವಿವೇಕ್, ಮನೆಯಪಂಡ ಧೀರಜ್ ತಿಮ್ಮಯ್ಯ, ಚೇರುವಾಳಂಡ ಕಿಶನ್ ಸೊಮ್ಮಯ್ಯ, ಕೋಡಿಮಣಿಯಂಡ ಗೌರವ್, ಹರೀಶ್, ರಮೇಶ್, ಕುಸುಮ, ಲೋಕೇಶ್, ಡಿಆರ್ಎಫ್ಒ ಶ್ರೀನಿವಾಸ್, ಗಾರ್ಡ್ ಅಣ್ಣಾಸ್ ಗುಡ್ಡೆ, ಕ್ಯಾಂಪ್ ಸಿಬ್ಬಂದಿಗಳು, ಮತ್ತಿತರರು ಉಪಸ್ಥಿತರಿದ್ದರು.