ಮಡಿಕೇರಿ, ಜೂ. ೯: ಕಳೆದ ೩ ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜೀನಾಮೆ ಅಂಗೀಕಾರಗೊAಡಿದೆ.
ಸರಕಾರದ ಅಧೀನ ಕಾರ್ಯದರ್ಶಿ ರಾಜೀನಾಮೆ ಅಂಗೀಕಾರದ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ.
ಈ ಕುರಿತು ‘ಶಕ್ತಿ’ಯೊಂದಿಗೆ ಮಾತನಾಡಿದ ಪೊನ್ನಣ್ಣ ಅವರು, ೨೦೨೩ರಿಂದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರೊಂದಿಗೆ ಕಾನೂನು ಸಲಹೆಗಾರರಾಗಿ ಕೆಲಸ ಮಾಡಿರುವುದು ತೃಪ್ತಿಯೊಂದಿಗೆ ವಿನೂತನ ಅನುಭವವನ್ನು ತಂದಿದೆ. ವೈಯಕ್ತಿಕವಾಗಿ ಹಲವು ವಿಚಾರವನ್ನು ಕಲಿಯಲು ಅವಕಾಶ ದೊರೆತಂತಾಯಿತು. ಸರಕಾರ ಹಾಗೂ ಮುಖ್ಯಮಂತ್ರಿಗಳಿಗೆ ಎದುರಾದ ಕಾನೂನಿನ ಸವಾಲನ್ನು ಸಮರ್ಥವಾಗಿ ಎದುರಿಸಿದ ತೃಪ್ತಿಯೂ ಇದೆ. ಮುಡಾ ಪ್ರಕರಣದಲ್ಲಿ ಕಾನೂನು ಸವಾಲಿನೊಂದಿಗೆ ರಾಜಕೀಯ ಪ್ರೇರಿತ ಟೀಕೆಗಳು ಹಾಗೂ ದ್ವೇಷ ರಾಜಕಾರಣವೂ ಸೃಷ್ಟಿಯಾಯಿತು. ಅಲ್ಲದೆ ಸಿದ್ದರಾಮಯ್ಯ ಅವರ ವಿರುದ್ಧ ಜನಾಭಿಪ್ರಾಯ ಮೂಡಿಸುವ ಕೆಲಸ ನಡೆದಿತ್ತು. ಇದನ್ನು ಸಮರ್ಥವಾಗಿ ಎದುರಿಸಿ ನ್ಯಾಯಾಲಯದಲ್ಲಿ ವಿಜಯ ಸಾಧಿಸಿ ಸಿದ್ದರಾಮಯ್ಯ ಅವರು ದೋಷಮುಕ್ತ ಮಾಡಿಸುವಲ್ಲಿ ಯಶಸ್ವಿಯಾಗಿದ್ದೇನೆ. ಲೋಕಾಯುಕ್ತ ತನಿಖೆಯನ್ನು ಸಿಎಂ ಎದುರಿಸುವ ಸಂದರ್ಭವೂ ತಾನು ನಿಕಟವಾಗಿ ಕಾರ್ಯನಿರ್ವಹಿಸಿದ್ದೆ. ವೃತ್ತಿಯಲ್ಲಿ ತಾನು ವಕೀಲನಾದರು ಶಾಸಕನಾದ ನಂತರ ಮತ್ತೇ ವಕೀಲ ವೃತ್ತಿ ಮಾಡಲಾಗುವುದಿಲ್ಲ ಎಂಬ ಬೇಸರವಿತ್ತು. ಆದರೆ, ಅನಿರೀಕ್ಷಿತವಾಗಿ ಅವಕಾಶ ದೊರೆತ ಸ್ಥಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿದ್ದೇನೆ. ಅಲ್ಲದೆ ಈ ಹುದ್ದೆಯಿಂದ ಕೊಡಗಿನಲ್ಲಿ ಅನೇಕ ವರ್ಷದಿಂದ ಇದ್ದ ಜಮ್ಮಾಬಾಣೆ ಸಮಸ್ಯೆಗೆ ಪರಿಹಾರವಾಗಿ ಮಸೂದೆ ತರಲು ಸಾಧ್ಯವಾಯಿತು ಎಂದು ತಮ್ಮ ಅನುಭವ ಹಂಚಿಕೊAಡರು.