ನಾಪೋಕ್ಲು, ಜೂ. ೮: ವಿದ್ಯಾರ್ಥಿಗಳು ಸದಾ ಚೈತನ್ಯಶೀಲರಾಗಿ ತಮ್ಮಲ್ಲಿರುವ ಕಲೆ ಹಾಗೂ ಪ್ರತಿಭೆಗಳಿಗೆ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜಕ್ಕೆ ಸತ್ಪ್ರಜೆಗಳಾಗಬೇಕು ಎಂದು ಬಹುಮುಖ ಪ್ರತಿಭೆ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅವರು ಹೇಳಿದರು.
ಮೂರ್ನಾಡು ವಿದ್ಯಾಸಂಸ್ಥೆಯ ಪದವಿ ಕಾಲೇಜಿನಲ್ಲಿ ಆಯೋಜಿಸಲಾದ ಪ್ರತಿಭಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕುವೆಂಪು ಅವರ ಓ ನನ್ನ ಚೇತನ ಹಾಗೂ ನೀ ಅನಿಕೇತನ ಹಾಡನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ನೆರೆದಿದ್ದವರ ಗಮನ ಸೆಳೆದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಚೌರಿರ ಜಗತ್ ತಿಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನ ಬಹಳ ಮುಖ್ಯವಾದ ಹಂತ ಈ ಹಂತದಲ್ಲಿ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು ಪ್ರತಿಯೊಬ್ಬರಲ್ಲೂ ಪ್ರತಿಭೆ ಇದ್ದೇ ಇರುತ್ತದೆ ಅದನ್ನು ಪ್ರದರ್ಶಿಸಲು ವೇದಿಕೆ ಹುಡುಕಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಕಲ್ಪನಾ ಸಾಮ್ರಾಟ್ ಕಾಲೇಜಿನ ವಾರ್ಷಿಕ ವರದಿಯನ್ನು ಓದುವುದರೊಂದಿಗೆ ಕಾಲೇಜಿನ ಬೆಳವಣಿಗೆಗೆ ಕಾರಣಕರ್ತರಾದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ , ಖಜಾಂಚಿ ವಿ.ಎ. ಯತೀಶ್, ನಿರ್ದೇಶಕರಾದ ಕೆ.ಜಿ. ರಾಮಮೂರ್ತಿ, ಎಂ.ಕೆ.ಚAಗಪ್ಪ, ಪಿ.ಎ. ದೇವಯ್ಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.
ಅಂತಿಮ ಬಿಕಾಂ ವಿದ್ಯಾರ್ಥಿಗಳಾದ ದಿವಿನ್ ಬೋಪಯ್ಯ ಹಾಗೂ ಆಫೀಫಾ ಅವರು ಉತ್ತಮ ಹೊರ ನಡೆದ ವಿದ್ಯಾರ್ಥಿಗಳಾಗಿ ಪ್ರಶಸ್ತಿ ಪಡೆದುಕೊಂಡರು. ಪೊನ್ನಮ್ಮ ಹಾಗೂ ತಂಡದವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಭವ್ಯ ಸಿ.ಡಿ. ಸ್ವಾಗತಿಸಿ, ಅಂತಿಮ ಬಿಕಾಂ ವಿದ್ಯಾರ್ಥಿಗಳಾದ ದಿಲನ್ ತಿಮ್ಮಯ್ಯ ಹಾಗೂ ತರುಣ್ ತಮ್ಮಯ್ಯ ಕಾರ್ಯಕ್ರಮ ನಿರ್ವಹಿಸಿ, ವಿಭಾ ವಂದಿಸಿದರು.