ವೀರಾಜಪೇಟೆ, ಜೂ. ೮: ಗುರಿ ಸಾಧಿಸಲು ಛಲ ಮತ್ತು ಕಠಿಣ ಶ್ರಮ ಮುಖ್ಯ ಎಂದು ಕಾಲೇಜು ಶಿಕ್ಷಣ ವಿಭಾಗ ಬೆಂಗಳೂರು, ಮಂಗಳೂರು ವಲಯದ ಜಂಟಿ ನಿರ್ದೇಶಕಿ ಪ್ರೊ. ಕೆ.ಆರ್. ಕವಿತಾ ಹೇಳಿದರು.
ವೀರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪ್ರೊ. ಕವಿತಾ ಅವರು, ಕಾಲೇಜು ಶಿಕ್ಷಣ ಎಂದರೇ ಕೇವಲ ವಿದ್ಯಾರ್ಥಿಗಳು ಆಯ್ಕೆ ಮಾಡಿದ ವಿಭಾಗದಲ್ಲಿ ಅಡಕವಾಗಿರುವ ಪುಸ್ತಕ ವಿಷಯವನ್ನು ಗ್ರಹಿಸಿ ಪರೀಕ್ಷೆ ಬರೆದು ಉತ್ತೀರ್ಣರಾಗುವುದು ಎಂದು ಭಾವಿಸುವುದು ತಪುö್ಪ. ಕಾಲೇಜು ಶಿಕ್ಷಣದ ಜೊತೆಗೆ ಬಾಹ್ಯವಾಗಿ ವಿವಿಧ ವಿಷಯ ಸಂಗ್ರಹಿಸುವ ವಿಷಯದ ಬಗ್ಗೆ ಜ್ಞಾನ ಹೊಂದುವುದು ಮುಖ್ಯ. ಉನ್ನತ ಅಂಕಗಳು ಪಡೆಯಲು ಮಾತ್ರ ಸೀಮಿತವಾಗದೆ ಜೀವನದಲ್ಲಿ ಸಾಧಿಸಲು ಉಪಯುಕ್ತವಾದ ವಿಷಯಗಳ ಆಯ್ಕೆ ತಮ್ಮದಾಗಬೇಕು. ಎಲ್ಲಾ ವಿದ್ಯಾರ್ಥಿಗಳಲ್ಲಿ ಅಸಾಧಾರಣ ಪ್ರತಿಭೆಗಳು ಇರುತ್ತದೆ. ಸ್ವಇಚ್ಛೆಯಿಂದ ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವ ಹೊಂದಬೇಕು. ಪ್ರಕೃತಿದತ್ತವಾದ ಮಡಿಲಲ್ಲಿ ಕಾಲೇಜು ಸ್ಥಿತಗೊಂಡಿದೆ ಪ್ರಕೃತಿಯನ್ನು ಆಸ್ವಾದಿಸಿ ಆನಂದಿಸಿ ಓದಿ ಉತ್ತಮ ಶಿಕ್ಷಣ ಪಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಮಣಿಪಾಲ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಮಣಿಪಾಲ್ನ ಸಹವರ್ತಿ ಪ್ರೊ. ಡಾ. ಬಾಲಕೃಷ್ಣ ಎಸ್. ಮದ್ದೋಡಿ ಅವರು, ತಾಂತ್ರಿಕೃತವಾಗಿ ದೇಶವು ಪ್ರಗತಿ ಪಥದಲ್ಲಿ ಸಾಗುತ್ತಿದೆ. ಯುವ ಜನರು ಅಭಿರುಚಿಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿಕೊಂಡು ಆರ್ಥಿಕ ಲಯವನ್ನು ಕಂಡುಕೊಳ್ಳುವುದು ಪ್ರಸ್ತುತ ಕಾಲಗಟ್ಟದಲ್ಲಿ ಮುಖ್ಯ. ಕೃತಕ ಬುದ್ದಿಮತ್ತೆಯ ಕಾಲದಲ್ಲಿ ನಾವಿದ್ದೇವೆ. ಈ ಹಿಂದೆ ಓದಿಗೆ ತಕ್ಕಂತೆ ಕೆಲಸ ನಾವು ಹುಡುಕಿ ತೆರಳಬೇಕಿತ್ತು. ಆದರೆ ಪರಿಸ್ಥಿತಿ ಬೇರೆಯಾಗಿದೆ. ಕೆಲಸ ನಮ್ಮ ಕಣ್ಣ ಮುಂದಿದ್ದರು ತಿರುಳು ಅರಿಯದೆ ಸುಮ್ಮನಾಗಿದ್ದೇವೆ. ಕಸದಿಂದ ರಸ ತೆಗೆಯುವ ವಿದ್ಯೆ ಅರಿವಿದ್ದರು. ಗ್ರಹಿಸಲು ತಿಳಿಯಲು ನಾವು ಮುಂದಾಗುವುದಿಲ್ಲ. ವ್ಯವಹಾರ ಜ್ಞಾನ, ಗುರಿ ಸಾಧಿಸಬೇಕೆನ್ನುವ ತವಕ ಹಾಗೂ ಛಲ ಹೊಂದಿದ್ದರೆ ಮಾತ್ರ ಜೀವನದಲ್ಲಿ ಮುಂದೆಬರಲು ಸಾಧ್ಯ ಎಂದು ಹೇಳಿದರು.
ವೀರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ ಮಾತನಾಡಿ, ಶಿಸ್ತುಬದ್ದ ಜೀವನ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಇಂಜಿನಿಯರ್, ಡಾಕ್ಟರ್, ಲಾಯರ್ ಆಗಬೇಕು ಎನ್ನುವ ಪರಿಕಲ್ಪನೆ ಬದಿಗೊತ್ತಿ ವಿವಿಧ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಯಶೋಗಾಥೆ ಹಲವು. ಪ್ರತಿಭೆಗಳಿಗೆ ಅನುಸಾರವಾಗಿ ಸಮಾಜದಲ್ಲಿ ಕೆಲಸವಿದೆ. ಆದರೆ ಹುಡಕಲು ಪ್ರಯಾಸವಾಗಬಹುದು. ಮಾದಕ ವ್ಯಸನಗಳಿಂದ ದೂರವಿದ್ದು ಸುಂದರ ಬದುಕು ನಿಮ್ಮದಾಗಿಸಿ ಎಂದು ಹೇಳಿದರು.
ಪದವಿ ವಿಭಾಗದಲ್ಲಿ ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ, ಮತ್ತು ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ.ಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ಕೆ.ಜಿ. ವೀಣಾ ಅವರು ೨೦೨೫-೨೬ನೇ ಸಾಲಿನಲ್ಲಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಮತ್ತು ಕಾಲೇಜಿನ ಸಾಧನೆಯ ಅವಲೋಕನದ ವಾರ್ಷಿಕ ವರದಿ ಮಂಡಿಸಿದರು.
ಕಾವೇರಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಪಿ. ಬೋಪಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾವೇರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಕಾಣಸಿಗುತ್ತಾರೆ. ಕಾಲೇಜಿನಲ್ಲಿ ದೊರಕುವ ಸೌಲಭ್ಯಗಳನ್ನು ಸದುಪಯೋಗಪಡೆದುಕೊಂಡು ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮಿ ಎಂದರು.
ಐಕ್ಯೂಎಸಿ ಸಂಚಾಲಕ, ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಮುಖ್ಯಸ್ಥ ಎಲ್.ಆರ್. ರಾಘವೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.