ವೀರಾಜಪೇಟೆ, ಜೂ. ೮:: ಸ್ವಯಂಸೇವೆ ಎಂಬುದು ಅಂತ್ಯವಿಲ್ಲದ ನಿರಂತರ ಪ್ರಕ್ರಿಯೆ. ಸಮಾಜದಲ್ಲಿ ಸ್ವಯಂ ಸೇವೆ ಸಲ್ಲಿಸಲು ಎಲ್ಲಿಯೂ ಅಂತ್ಯವೆAಬುದಿಲ್ಲ. ಅವಕಾಶ ಸಿಕ್ಕಾಗಲೆಲ್ಲ ತನ್ನಿಂದಾದ ಸೇವೆ ಸಲ್ಲಿಸುವುದು ಉತ್ತಮ ಸ್ವಯಂ ಸೇವಕನ ಲಕ್ಷಣ ಎಂದು ಲಾರ್ಡ್ಸ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ಬೆನೆಡಿಕ್ಟ್ ಆರ್. ಸಲ್ಡಾನ ಅಭಿಪ್ರಾಯ ವ್ಯಕ್ತಪಡಿಸಿದರು.

ವೀರಾಜಪೇಟೆ ಕಾವೇರಿ ಕಾಲೇಜಿನ ಕೌಸ್ತುಭ ಸಭಾಭವನದಲ್ಲಿ ನಡೆದ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಎನ್‌ಎಸ್‌ಎಸ್ ಎಂಬುವುದು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಮರ್ಪಕವಾದ ವೇದಿಕೆಯಾಗಿದ್ದು, ಇದರ ಮೂಲಕ ವಿದ್ಯಾರ್ಥಿಗಳು ಸಹಕಾರ, ಪ್ರಕೃತಿ ರಕ್ಷಣೆ, ಸ್ವಚ್ಛತೆ, ನೈರ್ಮಲ್ಯದಂತಹ ವಿಚಾರಗಳನ್ನು ಅರಿತು ತಮ್ಮ ಮೂಲಕ ಸಮಾಜದಲ್ಲಿ ಈ ಗುಣಗಳನ್ನು ಪ್ರಚಾರ ಮಾಡುವುದರೊಂದಿಗೆ ಸಮಾಜದಲ್ಲಿ ಯಾವುದೇ ಸಂದರ್ಭದಲ್ಲಿಯೂ ಪ್ರತಿಫಲದ ಅಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಲು ಸಿದ್ಧರಿರಬೇಕು. ಕೇವಲ ನಾನೊಬ್ಬನೆ ಬೆಳೆದರೆ ಸಾಲದು ನನ್ನೊಂದಿಗೆ ಇರುವ ಇತರರನ್ನು ಬೆಳೆಸಬೇಕೆಂಬ ಸಹಕಾರದ ಭಾವನೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು. ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿ ಬಿ.ಬಿ. ಸುನಿಲ್ ಕುಮಾರ್, ಎನ್.ಎಸ್.ಎಸ್ ಘಟಕದ ವತಿಯಿಂದ ನಡೆದ ಕಾರ್ಯಕ್ರಮ, ವಿಶೇಷ ಶಿಬಿರ, ಸ್ವಯಂ ಸೇವಕ ಸಾಧನೆಯನ್ನು ಒಳಗೊಂಡ ವರದಿಯೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ಹಾಗೂ ಪ್ರಮಾಣಪತ್ರವನ್ನು ವಿತರಿಸಲಾಯಿತು. ಈ ಸಂದರ್ಭ ಹಿರಿಯ ಸ್ವಯಂ ಸೇವಕರು ತಮ್ಮ ಮೂರು ವರ್ಷಗಳ ಸೇವಾ ಪಯಣದ ಅನುಭವ ಹಂಚಿಕೊAಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ. ಕೆ.ಜಿ. ವೀಣಾ, ಎನ್.ಎಸ್.ಎಸ್. ಎಂಬುದು ವಿದ್ಯಾರ್ಥಿಗಳು ತಮ್ಮನ್ನು ತಾವು ಸೇವಾ ಜಗತ್ತಿಗೆ ಅರ್ಪಿಸಿ ಕೊಳ್ಳುವುದರೊಂದಿಗೆ, ಸೌಹಾರ್ದ, ಸಹಕಾರ, ಸಹಭೋಜನದಂತಹ ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಕೊಡುಗೆ ಕೊಡುವಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಿ ಎಂದರು.

ಈ ಸಂದರ್ಭ ವೇದಿಕೆಯಲ್ಲಿ ಐಕ್ಯೂಎಸಿ ಸಂಚಾಲಕ ರಾಘವೇಂದ್ರ ಎಲ್.ಆರ್., ಎನ್.ಎಸ್.ಎಸ್ ನಾಯಕ ರಿಶಿ ಸೋಮಣ್ಣ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಘಟಕದ ಸದಸ್ಯರಾದ ಮಾಣಿಕ್ಯ, ಲೋಚನ, ಧನುಶ್ರೀ, ಹರೀಶ್, ಕಾಲೇಜಿನ ಉಪನ್ಯಾಸಕ ವರ್ಗ ಹಾಗೂ ಸ್ವಯಂಸೇವಕರು ಹಾಜರಿದ್ದರು.