ಕಾಯಪಂಡ ಶಶಿ ಸೋಮಯ್ಯ

ಮಡಿಕೇರಿ, ಜೂ. ೭: ಕೊಡಗು ಜಿಲ್ಲಾ ಕೇಂದ್ರವಾದ ಮಡಿಕೇರಿಗೆ ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರು ಮುಗಿಬೀಳುತ್ತಿರುವುದು ವಾಸ್ತವ. ಆದರೆ ಇಲ್ಲಿ ಇರುವುದು ಕೇವಲ ಬೆರಳೆಣಿಕೆಯ ಪ್ರವಾಸಿ ತಾಣಗಳು ಮಾತ್ರ ಇದರಲ್ಲಿ ಒಂದಾಗಿರುವುದು ಐತಿಹಾಸಿಕ ಹಿನ್ನೆಲೆಯ ರಾಜರ ಗದ್ದುಗೆ ಪ್ರದೇಶ. ಇದು ಪುರಾತತ್ವ ಇಲಾಖೆಯ ಅಧೀನದಲ್ಲಿ ಬರುತ್ತದೆ. ಜಾಗ ಕಟ್ಟಡ ಸೇರಿದಂತೆ ಅಲ್ಲಿರುವ ಐತಿಹ್ಯಗಳು ಈ ಇಲಾಖೆಯ ಸುರ್ಪದಿಗೆ ಒಳಪಟ್ಟರೆ..ಸುತ್ತಲೂ ಇರುವ ಉದ್ಯಾನವನ ತೋಟಗಾರಿಕಾ ಇಲಾಖೆಯ ಮೂಲಕ ನಿರ್ವಹಿಸಲ್ಪಡುತ್ತಿದೆ. ಆದರೆ, ಪ್ರಸ್ತುತ ಈ ರಾಜರ ಗದ್ದುಗೆ ಗೆದ್ದಲು ಹಿಡಿಯುತ್ತಿರುವುದು ವಿಪರ್ಯಾಸ..

ಸೂಕ್ತ ನಿರ್ವಹಣೆಯ ಕೊರತೆಯಿಂದಾಗಿ ಈ ತಾಣ ತನ್ನ ಆಕರ್ಷಣೆ ಕಳೆದುಕೊಳ್ಳುತ್ತಿದೆ. ಈ ತಾಣ ಮಂಜಿನನಗರಿ ಮಡಿಕೇರಿಯ ಹೃದಯ ಭಾಗದಲ್ಲಿದೆ. ಗುಡ್ಡಗಾಡು ಪ್ರದೇಶವಾಗಿರುವ ಮಡಿಕೇರಿಯಲ್ಲಿ ಈ ಪ್ರದೇಶ ವಿಶಾಲವಾದ ಸಮತಟ್ಟಾದ ಭೌಗೋಳಿಕತೆಯನ್ನು ಹೊಂದಿರುವ ಆಕರ್ಷಕ ಸ್ಥಳವಾಗಿದೆ. ಇದನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿದ್ದಲ್ಲಿ ಇಡೀ ಮಡಿಕೇರಿಗೆ ಇದೊಂದು ಉತ್ತಮ ಪ್ರವಾಸಿ ತಾಣವೂ ಆಗಲಿದೆ. ಆದರೆ..

ಸತತ ವರ್ಷಗಳಿಂದ ನಿರ್ಲಕ್ಷö್ಯ

೨೦೧೫ನೇ ಇಸವಿಯಲ್ಲಿ ಈ ಕಟ್ಟಡ, ಸ್ಮಾರಕಗಳು ಸುಣ್ಣಬಣ್ಣ ಕಂಡಿರುವುದನ್ನು ಬಿಟ್ಟರೆ ಇದೀಗ ಸುದೀರ್ಘ ೧೧ ವರ್ಷಗಳಾದರೂ ಮತ್ತೆ ಕಾಯಕಲ್ಪ ಕಂಡಿಲ್ಲ. ಕಟ್ಟಡ ಕೊಡಗಿನ ಹಲವು ಮಳೆಗಾಲವನ್ನು ಎದುರಿಸಿದ್ದು, ಇದೀಗ ಶಿಥಿಲಾವಸ್ಥೆಯನ್ನು ಕಾಣುವಂತಾಗುತ್ತಿದೆ. ಎಲ್ಲೆಡೆ ಸೋರುವಿಕೆ ಆರಂಭಗೊAಡಿದ್ದು, ಕಟ್ಟಡದ ಹೊರಭಾಗವೆಲ್ಲವೂ ಪಾಚಿಕಟ್ಟುತ್ತಿದೆ. ಕಿಟಕಿಗಳು, ಬಾಗಿಲು ತುಕ್ಕು ಹಿಡಿಯಲಾರಂಭಿಸಿವೆ. ಇದರೊಂದಿಗೆ ಕಟ್ಟಡದ ಮೇಲ್ಭಾಗದಲ್ಲಿ ಮತ್ತಿತರ ಕಡೆಗಳಲ್ಲಿ ಕಾಡುಗಿಡಗಳು ಬೆಳೆಯುತ್ತಿರುವುದು ಸ್ಥಳ ವೀಕ್ಷಿಸಿದರೆ ಗೋಚರವಾಗುತ್ತದೆ.

ಹಗಲೊಬ್ಬರು, ರಾತ್ರಿ ಪಾಳಿಯಲ್ಲೊಬ್ಬರು ಸೆಕ್ಯುರಿಟಿ ಬಿಟ್ಟರೆ ಈ ಕಟ್ಟಡಕ್ಕೆ ಮತ್ಯಾವುದೇ ವ್ಯವಸ್ಥೆಗಳಿಲ್ಲ. ಬೇಸಿಗೆ ಸಂದರ್ಭದ ಅವಧಿಯಲ್ಲಿ ಬಹುತೇಕ ಎಲ್ಲಾ ತಿಂಗಳುಗಳು ಸರಿಸುಮಾರು ಎಂಟತ್ತು ಸಾವಿರಕ್ಕೂ ಅಧಿಕ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಏಪ್ರಿಲ್-ಮೇ ತಿಂಗಳಿನಲ್ಲAತೂ ೧೫ ಸಾವಿರಕ್ಕೂ ಅಧಿಕ ಸಂಖ್ಯೆಯ ಜನರು ಭೇಟಿ ನೀಡಿದ್ದಾರೆ. ೧೯.೫೬ ಎಕರೆ ಜಾಗದಲ್ಲಿ ಒಂದಷ್ಟು ಜಾಗವೂ ಅತಿಕ್ರಮಣವಾಗಿದ್ದು, ಈ ವಿಚಾರ ನ್ಯಾಯಾಲಯದ ಮೆಟ್ಟಿಲಲ್ಲಿದೆ. ಆದರೆ, ಇರುವ ಪ್ರದೇಶ, ಕಟ್ಟಡಗಳ ಸಮರ್ಪಕ ನಿರ್ವಹಣೆಯತ್ತ ಯಾರೂ ಗಮನಹರಿಸುತ್ತಿಲ್ಲ ಎಂಬುದು ವಿಷಾದ.

ಕಳೆದ ೧೦-೧೨ ವರ್ಷಗಳಿಂದ ಇದರ ನಿರ್ವಹಣೆಗೆ ಸಂಬAಧಿಸಿದ ಇಲಾಖೆಯ ಮೂಲಕ ಚಿಕ್ಕಾಸೂ ಬಿಡುಗಡೆಯಾಗುತ್ತಿಲ್ಲ. ಇಲ್ಲಗಳ ನಡುವೆಯೇ ಅಪಾರ ಸಂಖ್ಯೆಯ ಪ್ರವಾಸಿಗರು ಬಂದು ಹೋಗುತ್ತಿದ್ದಾರೆ. ಸ್ಥಳದಲ್ಲಿ ಕನಿಷ್ಟ ಸಿಸಿ ಕ್ಯಾಮರಗಳಾಗಲಿ, ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲವಾಗಿದೆ.

ಎನ್.ಸಿ.ಸಿ. ಮಕ್ಕಳ ಕೊಡುಗೆ

ವರ್ಷಕ್ಕೆ ಒಂದೆರೆಡು ಬಾರಿ ಸ್ಥಳೀಯವಾಗಿ ಎನ್‌ಸಿಸಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಸ್ಮಾರಕ ಸ್ವಚ್ಛತೆ ಹೆಸರಿನಲ್ಲಿ ಶ್ರಮದಾನದ ಮೂಲಕ ಒಂದಷ್ಟು ನಿರ್ವಹಣೆ ಮಾಡಿರುವುದು ಹೊರತುಪಡಿಸಿದರೆ ಪುರಾತತ್ವ ಇಲಾಖೆಯವರು ಈ ಬಗ್ಗೆ ಕಳೆದ ಒಂದು ದಶಕಕ್ಕೂ ಅಧಿಕ ಸಮಯದಿಂದ ಕನಿಷ್ಟ ಪಕ್ಷ ನಿರ್ವಹಣೆ ಹೋಗಲಿ, ಸ್ಥಳ ವೀಕ್ಷಣೆ ಮಾಡುವ ಗೋಜಿಗೂ ಹೋಗುತ್ತಿಲ್ಲ ಎಂಬ ಮಾಹಿತಿಯಿದೆ.

ಉದ್ಯಾನವನವೂ ನಿರ್ಲಕ್ಷö್ಯಕ್ಕೆ ಸಾಕ್ಷಿ

ಗದ್ದುಗೆಯ ಕಟ್ಟಡ-ಸ್ಮಾರಕಗಳು ಪುರಾತತ್ವ ಇಲಾಖೆಗೆ ಸೇರಿದ್ದರೆ, ಸುತ್ತಲಿನ ಉದ್ಯಾನವನದ ನಿರ್ವಹಣೆ ತೋಟಗಾರಿಕಾ ಇಲಾಖೆಗೆ ಸೇರಿದ್ದಾಗಿದೆ. ತೋಟಗಾರಿಕೆ ಇಲಾಖೆ ಮೂಲಕ ಸ್ಥಳಕ್ಕೆ ತೆರಳುವವರಿಂದ ಟಿಕೆಟ್ ರೂಪದಲ್ಲಿ ಒಬ್ಬರಿಗೆ ರೂ. ೧೦ ಸಂಗ್ರಹ ಮಾಡಲಾಗುತ್ತಿದೆ. ಆದರೆ, ಉದ್ಯಾನವನವೂ ಸೂಕ್ತವಾಗಿ ನಿರ್ವಹಿಸಲ್ಪಡುತ್ತಿಲ್ಲ. ಎಲ್ಲವೂ ಕಳೆಗುಂದಿದೆ.

ಅಪಾಯಕಾರಿ ಆಟಿಕೆಗಳು

ಉದ್ಯಾನವನದ ಒಂದು ಬದಿಯಲ್ಲಿ ಮಕ್ಕಳು ಆಟವಾಡಲು ಒಂದಷ್ಟು ಆಟಿಕೆ-ಪರಿಕರಗಳಿವೆ. ಉಯ್ಯಾಲೆ, ಜಾರುಬಂಡಿ ಇನ್ನಿತರ ಪರಿಕರಗಳು ಸಂಪೂರ್ಣವಾಗಿ ತುಕ್ಕು ಹಿಡಿದಿದ್ದು, ಅತ್ಯಂತ ಅಪಾಯಕಾರಿಯಾಗಿದೆ. ತುಕ್ಕು ಹಿಡಿದಿರುವ ಕಬ್ಬಿಣಗಳು ಚುಚಿದ್ದರೆ ಆಸ್ಪತ್ರೆ ವಾಸ ಖಂಡಿತವಾಗಿದೆ.

‘ಶಕ್ತಿ’ ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭ ಸ್ಥಳದಲ್ಲಿದ್ದ ಪ್ರವಾಸಿಗರು ಇದನ್ನು ತೋರಿಸಿ ಬೇಸರ ವ್ಯಕ್ತಪಡಿಸಿದರು. ಇತಿಹಾಸದ ಚಿತ್ರಣದಂತೆ ಈ ಪ್ರದೇಶದಲ್ಲಿರುವ ಬಿದ್ದಂಡ ದಿವಾನ್ ಬೋಪಣ್ಣ-ಸೋಮಣ್ಣ ಅವರುಗಳ ಸ್ಮಾರಕ ಸ್ಥಳದಲ್ಲೂ ಕಾಡು ಆವರಿಸುತ್ತಿದೆ. ಕೊಡಗನ್ನು ಪ್ರವಾಸಿ ಜಿಲ್ಲೆ ಎಂದೇ ಪ್ರತಿಬಿಂಬಿಸಲಾಗುತ್ತಿದೆ. ಮೊನ್ನೆ ಮೊನ್ನೆಯಷ್ಟೆ ದುಬಾರೆಯಲ್ಲಿ ಮಹಿಳೆಯೋರ್ವರು ಆನೆಯಿಂದ ಹತರಾದಂತಹ ಅಪಾಯಕಾರಿ ವಿಚಾರಗಳಿಗೆ ಗದ್ದುಗೆ ಪ್ರದೇಶದಲ್ಲಿ ಆಸ್ಪದವಿಲ್ಲ. ಇದೊಂದು ಸುರಕ್ಷಿತವಾದ ಕೇವಲ ವೀಕ್ಷಣೆಗಷ್ಟೆ ಸೀಮಿತವಾಗಿರುವ ತಾಣವಿದು. ಇದನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದಲ್ಲಿ ಇದು ಖಂಡಿತವಾಗಿಯೂ ಉತ್ತಮವಾದ ಪ್ರವಾಸಿ ತಾಣವಾಗಲಿದ್ದು, ಪ್ರವಾಸಿಗರು ಮಾತ್ರವಲ್ಲ. ಸಂಜೆ ವೇಳೆ ಹಾಗೂ ಮುಂಜಾನೆ ಸಂದರ್ಭದಲ್ಲಿ ಸ್ಥಳೀಯ ಜನತೆಗೂ ವಿಹಾರಕ್ಕೆ, ವಿಶ್ರಾಮಕ್ಕೆ ಪ್ರಶಸ್ತ ಸ್ಥಳವಾಗಲಿದೆ. ಕ್ಷೇತ್ರದ ಶಾಸಕರು, ಜಿಲ್ಲಾಡಳಿತ ತ್ವರಿತವಾಗಿ ಈ ಬಗ್ಗೆ ಗಮನಹರಿಸಬೇಕಾಷ್ಟೆ.