ಸೋಮವಾರಪೇಟೆ, ಜೂ. ೬: ತೋಳೂರುಶೆಟ್ಟಳ್ಳಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಆಲೇಕಟ್ಟೆಯಿಂದ ಕೂಡುರಸ್ತೆವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಬದಲಿ ಮಾರ್ಗವಾಗಿ ಬಳಕೆಯಾಗುತ್ತಿರುವ ಹಾನಗಲ್ಲುಬಾಣೆ-ಹಾನಗಲ್ಲು ಶೆಟ್ಟಳ್ಳಿ ಹಾಗೂ ಹಾನಗಲ್ಲು-ಹಾನಗಲ್ಲು ಶೆಟ್ಟಳ್ಳಿ ರಸ್ತೆ ದುಸ್ಥಿತಿಗೆ ಒಳಗಾಗುತ್ತಿದ್ದು, ದಿನಂಪ್ರತಿ ಸಣ್ಣಪುಟ್ಟ ಅವಘಡಗಳು ನಡೆಯುತ್ತಲೇ ಇವೆ.

ಇಂದು ಹಾನಗಲ್ಲು ಶೆಟ್ಟಳ್ಳಿಯಲ್ಲಿ ಕ್ರೇನ್‌ವೊಂದು ರಸ್ತೆ ಬದಿಯ ಚರಂಡಿಗೆ ಇಳಿದ ಪರಿಣಾಮ ಕೆಲಕಾಲ ಸಿಲುಕಿಕೊಂಡು ಇತರ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಎದುರಿನಿಂದ ಬಂದ ವಾಹನಕ್ಕೆ ಸ್ಥಳಾವಕಾಶ ಕಲ್ಪಿಸುವ ಸಂದರ್ಭ ಕ್ರೇನ್ ರಸ್ತೆ ಬದಿಯ ಚರಂಡಿಗೆ ಇಳಿದಿದೆ.

ಅತ್ಯಂತ ಕಿರಿದಾಗಿರುವ ಗ್ರಾಮೀಣ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರ ಅಧಿಕವಾಗುತ್ತಿದೆ. ಇದೀಗ ಮಳೆಯೂ ಸುರಿಯುತ್ತಿರುವ ಹಿನ್ನೆಲೆ ರಸ್ತೆ ಇನ್ನಿಲ್ಲದಂತೆ ದುಸ್ಥಿತಿಗೆ ತಲುಪಿದೆ. ಮೊದಲೇ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ರಸ್ತೆಗಳ ಮೇಲೆಯೇ ಮಳೆ ನೀರು, ಕಲ್ಲು ಮಣ್ಣು ಹರಿಯುತ್ತಿದೆ.

ಇದೀಗ ಅಧಿಕ ವಾಹನಗಳ ಓಡಾಟದಿಂದ ರಸ್ತೆಗಳಲ್ಲಿ ಗುಂಡಿಬಿದ್ದಿದ್ದು, ವಾಹನ ಚಾಲನೆ ತ್ರಾಸದಾಯಕವಾಗಿದೆ.