ಗೋಣಿಕೊಪ್ಪಲು, ಜೂ.೬: ನಿನ್ನೆ ದಿನ ಕಾಡಾನೆ ದಾಳಿಗೆ ಕೋಣನಕಟ್ಟೆಯಲ್ಲಿ ಮಹಿಳೆಯೊಬ್ಬರು ಬಲಿಯಾದ ಬೆನ್ನಲ್ಲೆ ದ. ಕೊಡಗಿನಲ್ಲಿ ಕಾಡಾನೆಗಳ ನಿರಂತರ ಉಪಟಳದಿಂದಾಗಿ ಅಮಾಯಕ ಜೀವಗಳು ಬಲಿಯಾಗುತ್ತಿದ್ದು, ಮಾನವನ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ ಎಂದು ಆರೋಪಿಸಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ತಿತಿಮತಿಯಲ್ಲಿ ರಾಜ್ಯ ಹೆದ್ದಾರಿ ತಡೆದು ಅರಣ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರೈತರು ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಹೆದ್ದಾರಿ ತಡೆಯ ನಂತರ ರೈತರು ತಿತಿಮತಿ ವಲಯ ಅರಣ್ಯ ಅಧಿಕಾರಿಗಳ ಕಚೇರಿಗೆ ಘೇರಾವ್ ಹಾಕುವ ಯೋಜನೆ ರೂಪಿಸಿದ್ದರು. ಆದರೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ತಿತಿಮತಿ ಅರಣ್ಯ ಕಚೇರಿಗೆ ತೆರಳುವ ರಸ್ತೆಯಲ್ಲಿಯೇ ಬ್ಯಾರಿಕೇಡ್ ಅಳವಡಿಸಿ ಹೋರಾಟಗಾರರು ಕಚೇರಿಯ ಬಳಿಗೆ ಹೋಗದಂತೆ ತಡೆದರು. ಇದರಿಂದ ಅಸಮಾಧಾನಗೊಂಡ ಪ್ರತಿಭಟನಾಕಾರರು ಗ್ರಾಮ ಪಂಚಾಯಿತಿ ಮುಂಭಾಗದ ರಾಜ್ಯ ಹೆದ್ದಾರಿಯಲ್ಲೇ ಕುಳಿತು ಪ್ರತಿಭಟನೆ ಮುಂದುವರಿಸಿದರು.
ಆನೆ - ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು, ಸಂಸದರು, ಶಾಸಕರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದು ರಸ್ತೆಯಲ್ಲಿಯೇ ಕುಳಿತು ತಮ್ಮ ಆಕ್ರೋಶ ಹೊರಹಾಕಿದರು. ರೈತ ಸಂಘದ ಜಿಲ್ಲಾಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯನವರ ಮುಂದಾಳತ್ವದಲ್ಲಿ ನಡೆದ ಪ್ರತಿಭಟನೆಯೂ ಬೆಳಿಗ್ಗೆ ೧೧ ಗಂಟೆಗೆ ತಿತಿಮತಿಯ ಬಸ್ ನಿಲ್ದಾಣ ಮುಂಭಾಗದಲ್ಲಿ ಆರಂಭವಾಯಿತು. ನಂತರ ಭಾಗವಹಿಸಿದ್ದ ರೈತರು, ಸಾರ್ವಜನಿಕರು ಮೆರವಣಿಗೆ ಮೂಲಕ ಸಮೀಪದ ಅರಣ್ಯ ಕಚೇರಿಯತ್ತ ಆಗಮಿಸಿದರು.
ಕಚೇರಿಯ ಒಳ ಪ್ರವೇಶಕ್ಕೆ ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ಮಾಡಿದರು. ಇದರಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ಕೆಲ ಕಾಲ ಬಸ್, ಇತರೆ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಎದುರಾಯಿತು. ನಂತರ ಪೊಲೀಸ್ ಅಧಿಕಾರಿಗಳು ರೈತರ ಮನವೊಲಿಸಿ ರಸ್ತೆ ತಡೆ ಹಿಂಪಡೆಯುವ ಪ್ರಯತ್ನ ಮಾಡಿದರಾದರೂ ರೈತರು ಮಾತ್ರ ಪೊಲೀಸರ ಮಾತಿಗೆ ಮನ್ನಣೆ ನೀಡಲಿಲ್ಲ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಘೇರಾವ್ ಹಾಕುವ ಮೂಲಕ ತಮ್ಮ ಆಕ್ರೋಶ ಅಸಮಧಾನ ಹೊರ ಹಾಕಿದರು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೊಡಗಿನಲ್ಲಿ ಆಗಿಂದಾಗ್ಗೆ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಇದರ ಹೊಣೆ ಹೊರುವವರು ಯಾರು.? ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕೇವಲ ಪರಿಹಾರ ಹಣ ನೀಡಿ ಜಾರಿಕೊಳ್ಳುವ ಅಧಿಕಾರಿಗಳು ಆನೆ - ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕೈಗೊಳ್ಳುವುದು ಯಾವಾಗ.? ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹಿರಿಯ ಅಧಿಕಾರಿಗಳನ್ನು ಪ್ರಶ್ನಿಸಿದರಲ್ಲದೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರೈತರ ಆಕ್ರೋಶ ಭರಿತ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದ ಅಧಿಕಾರಿಗಳು ಕೆಲ ಕಾಲ ತಬ್ಬಿಬ್ಬಾರಾದರು.
ಅಧಿಕಾರಿಗಳ ಹಾರಿಕೆಯ ಉತ್ತರ ಕೇಳಲು ರೈತರು ಇಲ್ಲಿಗೆ ಬಂದಿಲ್ಲ. ಮುಂದೆ ಯಾವ ಕ್ರಮ ಕೈಗೊಳ್ಳಲು ಮುಂದಾಗುವಿರಿ ಮೊದಲು ಅದನ್ನು ತಿಳಿಸಿ ಎಂದು ಪ್ರತಿಭಟನಾಕಾರರು ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳ ಹಾಗೂ ರೈತರ ಮಧ್ಯ ಮಾತಿನ ಚಕಮಕಿ ನಡೆಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಕಾರ್ಮಿಕ ಸಂಘಟನೆ ಪ್ರಮುಖ ಪಿ.ಆರ್ ಭರತ್, ಕೊಡಗು ಮಾಡೆಲ್ ಫಾರೆಸ್ಟ್ ಅಧ್ಯಕ್ಷ ಡಾ. ಚೆಪ್ಪುಡಿರ ಕುಶಾಲಪ್ಪ, ಗೋಣಿಕೊಪ್ಪ ಚೇಂಬರ್ ಅಧ್ಯಕ್ಷ ಸುನಿಲ್ ಮಾದಪ್ಪ, ರೈತ ಮುಖಂಡರಾದ ಚೆಪ್ಪುಡೀರ ಕಾರ್ಯಪ್ಪ, ಪುಚ್ಚಿಮಾಡ ರಾಯ್ ಮಾದಪ್ಪ, ಮೇಚಂಡ ಕಿಶ ಮಾಚಯ್ಯ, ಆಲೆಮಾಡ ಮಂಜುನಾಥ್, ಚಟ್ಟಂಗಡ ಕಂಬ ಕಾರ್ಯಪ್ಪ, ಬಾಚಮಾಡ ಭವಿ ಕುಮಾರ್, ಯುಕೋ ಸಂಚಾಲಕ ಮಂಜು ಚಿಣ್ಣಪ್ಪ ಸೇರಿದಂತೆ ಅನೇಕ ಪ್ರಮುಖರು, ಸಾರ್ವಜನಿಕರು ಹಾಜರಿದ್ದರು.
ಆನೆ - ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರಕ್ಕಾಗಿ ರೈತ ಸಂಘದ ವತಿಯಿಂದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಡಿವೈಎಸ್ಪಿ ಮಹೇಶ್ ಕುಮಾರ್ ಮುಂದಾಳತ್ವದಲ್ಲಿ ಪೊಲೀಸರು ಬಿಗಿ ಬಂದೋ ಬಸ್ತ್ ಕೈಗೊಂಡಿದ್ದರು. ಪ್ರತಿಭಟನೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ಹಲವು ಮುಖಂಡರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು, ಅರಣ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯ ಪ್ರಬಾರ ಸಿಸಿಎಫ್ ರವಿಶಂಕರ್, ಡಿಸಿಎಫ್ ಜಗನಾಥ್,ಎಸಿಎಫ್ ಮಂಜುನಾಥ್ ತಾಸಿನ ಬಾನು, ಆರ್ಎಫ್ ಓ ಗಂಗಾಧರ್,ಶಿವರಾಮ್ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.
- ಚಿತ್ರ, ವರದಿ : ಹೆಚ್.ಕೆ. ಜಗದೀಶ್, ಎನ್.ಎನ್. ದಿನೇಶ್