ಈ ನಡುವೆ ಕುಶಾಲನಗರ ಪಟ್ಟಣದಲ್ಲಿ ಒಳಚರಂಡಿ ಸಂಪರ್ಕ ಪಡೆಯಲು ಪುರಸಭೆ ಮುಖ್ಯ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದು ಗೃಹ ಮತ್ತು ವಾಣಿಜ್ಯ ಘಟಕಗಳಿಗೆ ಒಳಚರಂಡಿ ಸಂಪರ್ಕ ಒದಗಿಸಲಾಗುತ್ತಿದ್ದು ಮನೆಯ ಮತ್ತು ವಾಣಿಜ್ಯ ಕಟ್ಟಡಗಳ ಮಾಲೀಕರು ಒಳಚರಂಡಿ ಜಾಲಕ್ಕೆ ಸಂಪರ್ಕ ಕಲ್ಪಿಸಿಕೊಳ್ಳುವಂತೆ ಕೋರಿದ್ದಾರೆ.

ಸಂಪರ್ಕವನ್ನು ಕುಶಾಲನಗರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿAದ ಪಡೆಯುವಂತೆ ಹಾಗೂ ಪುರಸಭೆಗೆ ಶುಲ್ಕ ಪಾವತಿಸಿ ಸಂಪರ್ಕ ನೀಡುವ ಬಗ್ಗೆ ಆಕ್ಷೇಪಣಾ ರಹಿತ ದೃಢೀಕರಣ ಪತ್ರ ಕೂಡ ಪಡೆಯುವಂತೆ ತಿಳಿಸಿದ್ದಾರೆ.

ಕಲ್ಯಾಣ ಮಂಟಪ ಹೊಟೇಲ್ ಮತ್ತು ವಸತಿಗೃಹಗಳು ೧೦ ಕೊಠಡಿಗಳ ಮೇಲ್ಪಟ್ಟು ಸಂಪರ್ಕ ಶುಲ್ಕವನ್ನು ರೂ.೧೦,೦೦೦, ವಾರ್ಷಿಕ ನಿರ್ವಹಣಾ ಶುಲ್ಕ ರೂ.೧೦,೦೦೦ ನಿಗದಿಪಡಿಸಿದ್ದಾರೆ. ಹೊಟೇಲ್ ಮತ್ತು ವಸತಿಗೃಹ ಒಂದರಿAದ ಹತ್ತು ಕೊಠಡಿಗಳ ಒಳಗೆ ಇರುವುದು ಸಂಪರ್ಕ ಶುಲ್ಕ ರೂ ೫,೦೦೦ ವಾರ್ಷಿಕ ನಿರ್ವಹಣಾ ಶುಲ್ಕ ರೂ.೫,೦೦೦ ಪಾವತಿಸುವಂತೆ ನಿಗದಿಪಡಿಸಲಾಗಿದೆ. ಇತರೆ ಎಲ್ಲಾ ಸಣ್ಣ ಉದ್ದಿಮೆಗಳು ಸಂಪರ್ಕ ಶುಲ್ಕ ರೂ.೩,೦೦೦ ಮತ್ತು ವಾರ್ಷಿಕ ನಿರ್ವಹಣಾ ಶುಲ್ಕ ರೂ.೩,೦೦೦ ಪಾವತಿಸುವುದು. ೨,೪೦೦ ಚದರಡಿ ಮೇಲ್ಪಟ್ಟಿರುವ ವಾಸದ ಮನೆಗಳಿಗೆ ಒಂದು ಬಾರಿಗೆ ರೂ.೩,೦೦೦ ಮತ್ತು ವಾರ್ಷಿಕ ನಿರ್ವಹಣಾ ಶುಲ್ಕ ೩,೦೦೦ ನಿಗದಿಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ೨೦೦೪ ಚದರಡಿ ಕೆಳಗಿರುವ ವಾಸದ ಮನೆಗಳಿಗೆ ಗೃಹ ಬಳಕೆ ಸಂಪರ್ಕ ಶುಲ್ಕ ೨,೦೦೦ ವಾರ್ಷಿಕ ನಿರ್ವಹಣಾ ಶುಲ್ಕ ರೂ.೨,೦೦೦ ಆಗಿರುವುದಾಗಿ ತಿಳಿಸಿರುವ ಪುರಸಭೆ ಮುಖ್ಯ ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಸತಿ ಸಂಪರ್ಕಗಳಿಗೆ ಸಂಪರ್ಕ ಶುಲ್ಕವನ್ನು ಪುರಸಭೆ ನಿಧಿಯಿಂದ ಭರಿಸಲಾಗುವುದು. ಕಟ್ಟಡವನ್ನು ಬಾಡಿಗೆಗೆ ನೀಡಿದಲ್ಲಿ ಅನ್ವಯಿಸುವುದಿಲ್ಲ ನಿರ್ವಹಣಾ ಶುಲ್ಕ ಸಾವಿರ ರೂಪಾಯಿ ವಾರ್ಷಿಕ ಪಾವತಿಸಬೇಕಾಗಿರುತ್ತದೆ ಎಂದು ಪುರಸಭಾ ಮುಖ್ಯ ಅಧಿಕಾರಿ ಟಿ.ಎಸ್ ಗಿರೀಶ್ ತಿಳಿಸಿದ್ದಾರೆ.

ಆದರೆ ಕುಶಾಲನಗರದ ಬಹುತೇಕ ಕಡೆ ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಒಳಚರಂಡಿ ಕಾಮಗಾರಿ ದುಸ್ಥಿತಿ ಆಗಿದ್ದು ಇದನ್ನು ಸರಿಪಡಿಸದೆ ಗೃಹಸಂಪರ್ಕಗಳನ್ನು ನೀಡಿದಲ್ಲಿ ಕಾವೇರಿ ನದಿ ಕಲುಷಿತ ಸೇರಿದಂತೆ ಇಡೀ ಪರಿಸರ ಸಂಪೂರ್ಣ ವಾಸನಾಮಯವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಗಳು ಅಧಿಕವಾಗಿವೆ ಎನ್ನುತ್ತಾರೆ ಸ್ಥಳೀಯರು.

(ಮೊದಲ ಪುಟದಿಂದ) ಪಟ್ಟಣದಲ್ಲಿ ಹಾದುಹೋಗುವ ಹೆದ್ದಾರಿ ರಸ್ತೆಯಲ್ಲಿ ಕೂಡ ಪೈಪ್ ಅಳವಡಿಕೆ ಕಾಮಗಾರಿ ಈಗಲೂ ಕುಂಟುತ್ತಾ ಸಾಗಿ ಹೆದ್ದಾರಿ ರಸ್ತೆಯನ್ನು ಸಂಪೂರ್ಣ ಹಾಳುಗೆಡವುತ್ತಿದೆ.

ಯೋಜನೆಯ ಆರಂಭ ನಂತರ ಅಧಿಕಾರಿಗಳು, ಗುತ್ತಿಗೆದಾರರು ಬದಲಾಗುತ್ತಲೇ ಇದ್ದಾರೆ. ಕುಶಾಲನಗರದಲ್ಲಿ ಈ ಕಾಮಗಾರಿಯ ಉಸ್ತುವಾರಿ ಹೊತ್ತಿದ್ದ ಒಳ ಚರಂಡಿ ಮಂಡಳಿ ಇಂಜಿನಿಯರ್ ಓರ್ವ ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಯೋಜನೆಯ ಬಗ್ಗೆ ನಿರ್ಲಕ್ಷö್ಯ ತಾಳಿ, ಯೋಜನೆ ನೆನೆಗುದಿಗೆ ಬೀಳಲು ಪ್ರಮುಖ ಕಾರಣರಾಗಿದ್ದಾರೆ ಎನ್ನುವ ಆರೋಪಗಳು ಸ್ಥಳೀಯರದ್ದಾಗಿದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಲೋಕಾಯುಕ್ತ ಅಧಿಕಾರಿಗಳು ಸುಮೊಟೊ ದೂರು ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಿ ಸಂಬAಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಒಳಚರಂಡಿ ಯೋಜನೆಯ ಮೂಲಕ ಪಟ್ಟಣದ ನೈರ್ಮಲ್ಯ ಉತ್ತಮಗೊಳ್ಳಲಿದೆ ಹಾಗೂ ಕಾವೇರಿ ನದಿಯ ಉಗಮ ಸ್ಥಾನದಲ್ಲಿಯೇ ಕಲುಷಿತವಾಗುವುದನ್ನು ತಡೆಗಟ್ಟಬಹುದು. ಇದು ರಾಜ್ಯ ಸರ್ಕಾರದ ಪ್ರಮುಖ ಗುರಿಯಾಗಿತ್ತು.

ಆದರೆ ಈ ಯೋಜನೆ ಪ್ರಾರಂಭವಾದ ನಂತರ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಂದ ಅಳವಡಿಸಿರುವ ಪೈಪ್‌ಗಳ ಮೂಲಕ ನೇರವಾಗಿ ಶೌಚಾಲಯ ತ್ಯಾಜ್ಯಗಳು ಕಾವೇರಿ ನದಿಗೆ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ರಾಜ್ಯ ಸರ್ಕಾರದ ೯೫% ಮತ್ತು ಸ್ಥಳೀಯ ಸಂಸ್ಥೆಯ ಶೇ.೫ ಅನುದಾನದಲ್ಲಿ ಈ ಯೋಜನೆ ರೂಪುಗೊಂಡಿದೆ. ಆದರೆ ಕಾಮಗಾರಿ ಇನ್ನೂ ಶೇ.೮೦ ರಷ್ಟು ಪೂರ್ಣಗೊಂಡಿಲ್ಲ.

ಅಪೂರ್ಣಗೊAಡಿರುವ ಕಾಮಗಾರಿಯ ಬಗ್ಗೆ ‘ಶಕ್ತಿ’ಯಲ್ಲಿ ಹಲವು ಬಾರಿ ವರದಿ ಪ್ರಕಟಗೊಂಡಿದ್ದು, ಜಿಲ್ಲಾಧಿಕಾರಿಗಳ ನಿರ್ದೇಶನ ಮೇರೆಗೆ ಹುಸಿ ಭರವಸೆ ನೀಡಿದ ಮಂಡಳಿಯ ಅಧಿಕಾರಿಗಳು ೨೦೨೨ರ ಮೇ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕುಶಾಲನಗರದಲ್ಲಿ ಒಳಚರಂಡಿ ವ್ಯವಸ್ಥೆಗೆ ಚಾಲನೆ ಕೊಡುವುದು ಖಚಿತ ಎಂದು ಅನುಪಾಲನಾ ವರದಿ ಸಲ್ಲಿಸಿದ್ದರು.

ಆದರೆ ಇದೀಗ ೨೦೨೬ ಮುಗಿಯುತ್ತಿದ್ದರೂ ಒಳಚರಂಡಿ ಕಾಮಗಾರಿ ಮಾತ್ರ ಇನ್ನೂ ಅನುಷ್ಠಾನಗೊಂಡಿಲ್ಲ.

ಇದರಿಂದ ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತಲ ವ್ಯಾಪ್ತಿಯ ಸಂಪೂರ್ಣ ಕಲುಷಿತ ನೀರು ನೇರವಾಗಿ ಕಾವೇರಿ ನದಿಗೆ ಹರಿಯುತ್ತಿದ್ದು, ಇಡೀ ಕಾವೇರಿ ಬಹುತೇಕ ಕಲುಷಿತಗೊಳ್ಳುವ ಜೊತೆಗೆ ತನ್ನ ಮೂಲ ಗುಣಮಟ್ಟವನ್ನು ಕಳೆದುಕೊಂಡು ಹರಿಯುವ ಸ್ಥಿತಿಗೆ ಬಂದೊದಗಿದೆ. ಈ ಮೂಲಕ ನದಿತೀರದ ಜನತೆ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಆತಂಕದಲ್ಲಿ ದಿನದೊಡುತ್ತಿದ್ದಾರೆ.

ಕುಶಾಲನಗರದ ಬೈಚನಹಳ್ಳಿ ತಾವರೆಕೆರೆ ಬಳಿಯಿಂದ ಗುಮ್ಮನಕೊಲ್ಲಿ ತನಕ ಸುಮಾರು ೪.೫ ಕಿಲೋಮೀಟರ್ ಉದ್ದಕ್ಕೆ ಕಾವೇರಿ ನದಿಯ ಅಂಚಿನಲ್ಲಿ ಅವೈಜ್ಞಾನಿಕವಾಗಿ ಪೈಪುಗಳನ್ನು ಅಳವಡಿಸಲಾಗಿದ್ದು, ಪ್ರವಾಹದ ಹಿನ್ನೆಲೆಯಲ್ಲಿ ಕಾಮಗಾರಿ ಪರಿಕರಗಳು ಸಂಪೂರ್ಣ ನದಿ ಪಾಲಾಗಿ ತಗ್ಗುಪ್ರದೇಶಗಳಲ್ಲಿ ನಿರ್ಮಾಣಗೊಂಡಿರುವ ಡೂಮ್‌ಗಳನ್ನು ಮಣ್ಣು ಸುರಿದು ಮುಚ್ಚಿಹಾಕಿರುವ ದೃಶ್ಯ ಗೋಚರಿಸಿದೆ.

ಯೋಜನೆಯನ್ನು ಪರಿಶೀಲನೆ ಮಾಡುವ ಹೆಸರಿನಲ್ಲಿ ಆಗಾಗ ಹಿರಿಯ ಅಧಿಕಾರಿಗಳು ಭೇಟಿ ನೀಡಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆಯೇ ಹೊರತು ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎನ್ನುವುದು ಪಟ್ಟಣ ನಿವಾಸಿಗಳ ಆರೋಪವಾಗಿದೆ.

ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ಪ್ರಥಮ ಹಂತದ ರೂ.೪೦ ಕೋಟಿಯ ಕಾಮಗಾರಿ ಇದೀಗ ೫೮ ಕೋಟಿಗೆ ಏರಿದೆ. ಮುಂದೆ ಯೋಜನೆ ಪೂರ್ಣಗೊಳ್ಳಬೇಕಾದಲ್ಲಿ ಇನ್ನೂ ಹಲವಾರು ಕೋಟಿ ಅನುದಾನದ ಅಗತ್ಯತೆ ಉಂಟಾಗಿದೆ. ಇನ್ನಾದರೂ ಮಂಡಳಿ ಅಧಿಕಾರಿಗಳು ಎಚ್ಚೆತ್ತುಕೊಂಡು ಕುಶಾಲನಗರದ ಬೃಹತ್ ಯೋಜನೆ ಒಂದನ್ನು ಪೂರ್ಣಗೊಳಿಸಿ ಅನುಷ್ಠಾನಗೊಳಿಸುವುದರೊಂದಿಗೆ ಸ್ವಚ್ಛ ಕುಶಾಲನಗರ ಹಾಗೂ ಸ್ವಚ್ಛ ಕಾವೇರಿ ನಿರ್ಮಾಣ ಮಾಡುವಲ್ಲಿ ಕೂಡಲೇ ಎಚ್ಚರಗೊಳ್ಳಬೇಕಾಗಿದೆ

- ಎಂ.ಎನ್ ಚಂದ್ರಮೋಹನ್