ಕೂಡಿಗೆ, ಜೂ. ೫: ಕುಶಾಲನಗರ ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್ ಅಪ್ಪಣ್ಣ ಅವರ ಅಧ್ಯಕ್ಷತೆಯಲ್ಲಿ ಮಳೆಗಾಲದ ಮುನ್ನೆಚ್ಚರಿಕೆಯ ಕ್ರಮಗಳನ್ನು ನಿರ್ವಹಿಸುವ ಅಂಗವಾಗಿ ಕುಶಾಲನಗರ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯು ಮುಳ್ಳುಸೋಗೆಯಲ್ಲಿರುವ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆಯಿತು.

ಕುಶಾಲನಗರ ತಾಲೂಕು ವ್ಯಾಪ್ತಿಯ ಕಾವೇರಿ ನದಿ ದಂಡೆಯ ತಗ್ಗು ಪ್ರದೇಶಗಳಿಗೆ ಮಳೆಗಾಲದಲ್ಲಿ ನದಿ ನೀರು ನುಗ್ಗಿ ಜಲಾವೃತ್ತಗೊಳ್ಳುವ ವಿಷಯದ ಬಗ್ಗೆ ಚರ್ಚೆ ನಡೆಯಿತು. ನಲ್ಲಿಹುದುಕೇರಿಯಿಂದ ಕೊಡಗಿನ ಗಡಿ ಭಾಗದವರೆಗೆ ಕಾವೇರಿ ನದಿಯ ನೀರು ತಗ್ಗುಪ್ರದೇಶಗಳಿಗೆ ನುಗ್ಗಿ ಅವಾಂತರಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ಕುಶಾಲನಗರ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತಿ ಆಡಳಿತ ಅಧಿಕಾರಿಗಳಿಗೆ, ವಿವಿಧ ಇಲಾಖೆಯ ಅಧಿಕಾರಿ ವರ್ಗದವರಿಗೆ ನಿರ್ದೇಶನ ನೀಡಲಾಯಿತು.

ಸಭೆಯಲ್ಲಿ ಕುಶಾಲನಗರ ತಾಲೂಕು ಮಟ್ಟದ ಕೃಷಿ, ತೋಟಗಾರಿಕೆ ಇಲಾಖೆ, ಇಂಜಿನಿಯರ್ ವಿಭಾಗ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನದಿಯ ಅಂಚಿನ ೧೦ ಗ್ರಾಮ ಪಂಚಾಯತಿ ಆಡಳಿತ ಅಧಿಕಾರಿಗಳು ಹಾಜರಿದ್ದರು.