ಸೋಮವಾರಪೇಟೆ, ಜೂ. ೫: ಆರಂಭದಿAದಲೂ ಒಂದಿಲ್ಲೊAದು ಸಮಸ್ಯೆಗಳನ್ನೇ ಸೃಷ್ಟಿಸಿಕೊಳ್ಳುತ್ತಿರುವ ಆಲೇಕಟ್ಟೆ-ಇನಕನಹಳ್ಳಿ ರಸ್ತೆ ಕಾಮಗಾರಿ ಇದೀಗ ಕಳಪೆಯ ಆರೋಪ ಹೊತ್ತಿದೆ. ಒಂದು ಕಿ.ಮೀ.ಗೆ ಸರಿಸುಮಾರು ರೂ. ೧ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿ ಕ್ರಿಯಾಯೋಜನೆಯಂತೆ ನಡೆಯುತ್ತಿಲ್ಲ. ಕಾಂಕ್ರೀಟ್ ಕಾಮಗಾರಿ ಬಹುತೇಕ ಕಳಪೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ ಹಿನ್ನೆಲೆ, ರಸ್ತೆಗೆ ಹಾಕಿದ ಕಾಂಕ್ರೀಟ್‌ನ್ನು ತೆಗೆಸಲಾಯಿತು.

ರಾತ್ರಿ ವೇಳೆಯಲ್ಲಿ ಕೇವಲ ವಾಹನದ ಬೆಳಕಿನೊಂದಿಗೆ ಕಾಂಕ್ರೀಟ್ ಹಾಕಲಾಗುತ್ತಿದೆ. ಸಂಜೆ ೭ ಗಂಟೆಯಿAದ ರಾತ್ರಿ ೧೨ ಗಂಟೆಯವರೆಗೆ ಕಾಂಕ್ರೀಟ್ ಅಳವಡಿಸಲಾಗುತ್ತಿದೆ. ಇಲಾಖೆಯ ನಿರ್ದೇಶನದಂತೆ ಫೇವರ್ ಬಳಸುತ್ತಿಲ್ಲ. ಕಾರ್ಮಿಕರು ಮ್ಯಾನ್ಯುವಲ್ ಆಗಿಯೇ ಕೆಲಸ ಮಾಡುತ್ತಿದ್ದಾರೆ. ಮೊನ್ನೆ ಹಾಕಿರುವ ಕಾಂಕ್ರೀಟ್ ನಿನ್ನೆ ಕಿತ್ತುಬರುತ್ತಿದೆ, ಸಿಮೆಂಟಿನ ಅಂಶವೇ ಇಲ್ಲ ಎಂಬಿತ್ಯಾದಿ ಆರೋಪಗಳ ಮೂಲಕ ಸಾರ್ವಜನಿಕರು ಕೆಲಸಕ್ಕೆ ತಡೆಯೊಡ್ಡಿದ್ದರು.

ಮೊನ್ನೆ ರಾತ್ರಿ ವೇಳೆ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು, ಇಲಾಖೆಯ ನಿರ್ದೇಶನದಂತೆ ಫೇವರ್ ಬಳಸಿ ಕಾಂಕ್ರೀಟ್ ಹಾಕಬೇಕಿದ್ದರೂ ಕಾರ್ಮಿಕರು ಕೈಯಿಂದಲೇ ಕಾಂಕ್ರೀಟ್ ಹಾಕುತ್ತಿದ್ದಾರೆ. ಅದೂ ಅಲ್ಲದೇ ರಾತ್ರಿ ವೇಳೆ ಕಾಂಕ್ರೀಟ್ ಹಾಕಲು ನೀವುಗಳು ಅನುಮತಿ ನೀಡಿದ್ದೀರಾ? ಸೈಟ್ ಇಂಜಿನಿಯರ್ ಇಲ್ಲದೆಯೇ ಕಾಂಕ್ರೀಟ್ ಹಾಕುತ್ತಿರುವುದು ಏಕೆ? ಎಂದು ಪ್ರಶ್ನಿಸಿ ತೀವ್ರ ತರಾಟೆಗೆ ತೆಗೆದುಕೊಂಡರು.

ಮೊನ್ನೆ ಸುಮಾರು ೭ ಲೋಡ್‌ನಷ್ಟು ಕಾಂಕ್ರೀಟ್ ಹಾಕಲಾಗಿದೆ. ಇದು ನಿನ್ನೆ ಕಿತ್ತು ಬಂದಿದೆ. ಕೆಲವೆಡೆ ಮಣ್ಣಿನ ಮೇಲೆ ೩ ಇಂಚಿನಷ್ಟು ಕಾಂಕ್ರೀಟ್ ಹಾಕಿದ್ದಾರೆ. ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಮೊನ್ನೆ ಸುರಿದ ೭ ಲೋಡ್ ಕಾಂಕ್ರೀಟ್‌ನ್ನು ತೆರವುಗೊಳಿಸಿ ಗುಣಮಟ್ಟದಲ್ಲಿ ರಸ್ತೆ ನಿರ್ಮಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಅಭಿಯಂತರರು ಒಪ್ಪಿ, ಕಳಪೆಯಾಗಿರುವ ಕಾಂಕ್ರೀಟ್‌ನ್ನು ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ನಿನ್ನೆ ಸಂಜೆ ವೇಳೆಗೆ ಮೊನ್ನೆ ದಿನ ಹಾಕಿದ್ದ ಕಾಂಕ್ರೀಟ್‌ನ್ನು ತೆರವುಗೊಳಿಸಲಾಯಿತು.

ಈಗಾಗಲೇ ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಂಡಿಲ್ಲ. ಪ್ರಸ್ತುತ ನಡೆಯುತ್ತಿರುವ ಕಾಮಗಾರಿಯೂ ಆಮೆಗತಿಯಲ್ಲಿದೆ. ಈ ನಡುವೆ ಕಳಪೆ ಕಾಮಗಾರಿ ಮಾಡಲಾಗುತ್ತಿದೆ. ಕೆಲಸ ನಡೆಯುವಾಗ ಲೋಕೋಪಯೋಗಿ ಅಭಿಯಂತರರು ಸ್ಥಳದಲ್ಲಿಯೇ ಇರಬೇಕು. ರಸ್ತೆ ಕಳಪೆಯಾದರೆ ಅದು ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತದೆ. ಜನರ ತೆರಿಗೆ ಹಣದಲ್ಲಿ ನಡೆಯುವ ಕಾಮಗಾರಿ ಕಳಪೆಯಾದರೆ ಅಭಿಯಂತರರೂ ಹೊಣೆಯಾಗಬೇಕಾಗುತ್ತದೆ ಎಂದು ಪ್ರಮುಖರಾದ ಬಗ್ಗನ ಅನಿಲ್ ಹೇಳಿದರು.