ಸೋಮವಾರಪೇಟೆ, ಜೂ. ೫: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಹಾರಂಗಿ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯು ಗುಂಡಿ ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆಯಾಗಿರುವುದನ್ನು ಮನಗಂಡ ಅತ್ತೂರಿನ ಖಾಸಗಿ ಶಾಲೆಯೊಂದರ ವಾಹನ ಚಾಲಕರುಗಳು, ತಾವೇ ರಸ್ತೆಯ ಗುಂಡಿಗಳಿಗೆ ಕಲ್ಲು, ಮಣ್ಣು ಹಾಕಿ ಮುಚ್ಚಿದರು.
ಗುಡ್ಡೆಹೊಸೂರಿನಿಂದ ಹಾರಂಗಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯು ನಿರ್ವಹಣೆಯ ಕೊರತೆ ಎದುರಿಸುತ್ತಿದ್ದು, ರಸ್ತೆಯ ಅಲ್ಲಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿವೆ. ಪ್ರತಿದಿನ ಈ ರಸ್ತೆಯಲ್ಲಿ ಪ್ರವಾಸಿಗರ ವಾಹನಗಳೂ ಸೇರಿದಂತೆ ಸ್ಥಳೀಯರ ವಾಹನಗಳು ಸಂಚರಿಸುತ್ತಿವೆ. ಪ್ರಮುಖವಾಗಿ ಶಾಲಾ ವಾಹನಗಳು ತೆರಳುವ ರಸ್ತೆಯಾಗಿರುವುದರಿಂದ, ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ಅವಘಡಗಳು ಸಂಭವಿಸುವ ಅಪಾಯವೂ ಇದೆ.
ಇದನ್ನು ಮನಗಂಡ ಚಾಲಕರುಗಳು ತಾವೇ ಕಲ್ಲು ಹಾಗೂ ಇಟ್ಟಿಗೆ ಪುಡಿಗಳನ್ನು ತಂದು ರಸ್ತೆಯ ಗುಂಡಿಗಳಿಗೆ ಸುರಿದು ಸಮತಟ್ಟುಗೊಳಿಸಿದರು. ಸುಮಾರು ೨ ಕಿ.ಮೀ. ಉದ್ದದ ರಸ್ತೆಯಲ್ಲಿ ನಿರ್ಮಾಣವಾಗಿದ್ದ ಹತ್ತಾರು ಗುಂಡಿಗಳನ್ನು ಮುಚ್ಚಿದರು. ಖಾಸಗಿ ಶಾಲಾ ಚಾಲಕರುಗಳಾದ ಮಧುಸೂದನ್, ಪ್ರವೀಣ್, ಧರ್ಮ, ಜಯಾನಂದ, ಪ್ರತಾಪ್, ಸತೀಶ್, ಅಪ್ಪುರಾಜ್ ಅವರುಗಳು ಶ್ರಮದಾನದಲ್ಲಿ ಭಾಗಿಯಾಗಿದ್ದರು.