ವೀರಾಜಪೇಟೆ, ಜೂ. ೫: ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದ ಬಾರಿಕಾಡುವಿನಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಿರುವ ೪೩ ಮನೆಗಳ ಬೀಗದ ಕೀ ಯನ್ನು ಶಾಸಕ ಎ.ಎಸ್.ಪೊನ್ನಣ್ಣ ಅವರು ಆದಿವಾಸಿ, ಯರವ ಮತ್ತಿತರ ಕುಟುಂಬಗಳಿಗೆ ಕೀ ನೀಡುವ ಮೂಲಕ ಹಸ್ತಾಂತರಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕೆದಮುಳ್ಳೂರು ಗ್ರಾ.ಪಂ.ವ್ಯಾಪ್ತಿಯ ಬಾರಿಕಾಡು ಎಂಬಲ್ಲಿ ಸರ್ವೆ ನಂ.೩೭೦/೧ ರ ೭.೫೦ ಎಕರೆ ಜಾಗದ ಬಡಾವಣೆಯಲ್ಲಿ ನಿರ್ಮಿಸಿರುವ ಮನೆಗಳ ಹಸ್ತಾಂತರ ಹಾಗೂ ಮೂಲ ಸೌಕರ್ಯ ಕಾಮಗಾರಿ ಉದ್ಘಾಟಿಸಿ, ಶಾಸಕ ಪೊನ್ನಣ್ಣ ಮಾತನಾಡಿ, ಪರಿಶಿಷ್ಟ ಪಂಗಡದ ಆದಿವಾಸಿ ಯರವ, ಜೇನುಕುರುಬ, ಬೆಟ್ಟಕುರುಬ ಸಮಾಜಗಳ ಮನೆ ನಿರ್ಮಾಣದ ಕಾಮಗಾರಿ ಯೋಜನೆ ಪೂರ್ಣಗೊಳಿಸುವಲ್ಲಿ ಹಲವು ಪ್ರಯತ್ನ ನಡೆದಿದೆ ಎಂದು ಹೇಳಿದರು.

ಈ ಯೋಜನೆ ಅರ್ಧಕ್ಕೆ ಸ್ಥಗಿತಗೊಂಡಿತ್ತು, ಆ ನಿಟ್ಟಿನಲ್ಲಿ ಬೆಂಗಳೂರಿನ ನೀರು ಸರಬರಾಜು ವಿಭಾಗದಿಂದ ಸಿಎಸ್‌ಆರ್ ನಿಧಿಯಡಿ ೧.೬೦ ಲಕ್ಷ ರೂ. ಹೆಚ್ಚುವರಿ ಹಣ ಬಿಡುಗಡೆ ಮಾಡಿಸಿ ಮನೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಈ ಹಿಂದೆ ಮನೆ ನಿರ್ಮಾಣಕ್ಕೆ ೫ ಲಕ್ಷ ರೂ. ಅಂದಾಜು ಮಾಡಿದ್ದರು. ಆ ಸಂದರ್ಭದಲ್ಲಿ ಹೆಚ್ಚುವರಿ ವೆಚ್ಚವಾಗುತ್ತಿದೆ ಎಂದು ಅರ್ಧಕ್ಕೆ ಕಾಮಗಾರಿ ಸ್ಥಗಿತಗೊಳಿಸಿದ್ದರು. ಆ ದಿಸೆಯಲ್ಲಿ ಸಿಎಸ್‌ಆರ್ ನಿಧಿಯಡಿ ಒಂದು ಕೋಟಿಯಷ್ಟು ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸಲಾಯಿತು. ಈ ಬಡಾವಣೆಯಲ್ಲಿ ಎಲ್ಲ ರೀತಿಯ ಮೂಲ ಸೌಲಭ್ಯ ಒಳಗೊಂಡಿದೆ. ಒಳಚರಂಡಿ, ವಿದ್ಯುತ್ ದೀಪ, ಕುಡಿಯುವ ನೀರು ಪೂರೈಕೆ, ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಸೇರಿದಂತೆ ಉತ್ತಮ ಬಡಾವಣೆ ನಿರ್ಮಾಣ ಆಗಿದೆ. ವಸತಿ ರಹಿತರು ಹೋರಾಟ ಮಾಡಿ ಮನೆ ಸಿಗುವಂತಾಗಿದೆ. ಆ ನಿಟ್ಟಿನಲ್ಲಿ ಸರಿಯಾಗಿ ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಶಾಸಕರು ಸಲಹೆ ಮಾಡಿದರು.

ಮುಖ್ಯಮಂತ್ರಿ ಅವರನ್ನು ವೀರಾಜಪೇಟೆಗೆ ಆಹ್ವಾನಿಸಿ ನೂತನ ಮನೆಯ ಕೀ ಹಸ್ತಾಂತರಿಸಬೇಕು ಎಂಬ ಉದ್ದೇಶವಿತ್ತು. ಆದರೆ ಈ ಕಾರ್ಯ ಆಗದಿರುವುದರಿಂದ ಸದ್ಯ ಮಳೆಗಾಲ ಆರಂಭವಾಗಿದ್ದು, ಫಲಾನುಭವಿಗಳಿಗೆ ಅನಾನುಕೂಲ ಆಗಬಾರದು ಎಂಬ ಉದ್ದೇಶದಿಂದ ಪೂರ್ಣಗೊಂಡಿರುವ ೪೩ ಮನೆಗಳ ಬೀಗದ ಕೀಯನ್ನು ಹಸ್ತಾಂತರಿಸಲಾಗಿದೆ. ಇಲ್ಲಿನ ಪರಿಶಿಷ್ಟ ಜನರಿಗೆ ನಿವೇಶನ ಹಾಗೂ ವಸತಿ ಕಲ್ಪಿಸಬೇಕು ಎಂಬ ಆಶಯವಾಗಿದೆ. ಆ ನಿಟ್ಟಿನಲ್ಲಿ ಉಳಿದ ೧೭ ಮನೆಗಳನ್ನು ಸಹ ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು ಎಂದು ಶಾಸಕರು ತಾಕೀತು ಮಾಡಿದರು.

ಈಗಾಗಲೇ ನಿರ್ಮಿಸಿರುವ ಸುಸಜ್ಜಿತ ಬಡಾವಣೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಪಂಚಾಯತ್ ಅವರು ಕೂಡ ಬಡಾವಣೆ ನಿರ್ವಹಣೆಗೆ ಮುಂದಾಗಬೇಕು. ಮನೆ ಇಲ್ಲದ ಕುಟುಂಬಗಳಿಗೆ ವಸತಿ ಕಲ್ಪಿಸಲಾಗುವುದು. ಆ ನಿಟ್ಟಿನಲ್ಲಿ ಹಂತ ಹಂತವಾಗಿ ನಿವೇಶನ ಹಾಗೂ ಮನೆ ನಿರ್ಮಾಣಕ್ಕೆ ಮುಂದಾಗಲಾಗುವುದು ಎಂದು ಭರವಸೆ ನೀಡಿದರು. ಬಡಾವಣೆಯಲ್ಲಿ ಇರುವವರು ಹೊಸ ಮನೆಗೆ ಸ್ಥಳಾಂತರವಾಗಬೇಕು. ಗುಡಿಸಲನ್ನು ತೆರವುಗೊಳಿಸಿದಲ್ಲಿ ಇನ್ನಷ್ಟು ಮನೆಗಳ ನಿರ್ಮಾಣ ಮಾಡಲಾಗುವುದು ಎಂದರು.

ಮಕ್ಕಳಿಗೆ ವಿಧ್ಯಾಭ್ಯಾಸ ನೀಡಿ

ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮುಂದಾಗಬೇಕು. ಶಿಸ್ತು ಬದ್ಧ ಜೀವನ ನಡೆಸಬೇಕು. ತಮ್ಮ ಸೇವಕನಾಗಿ ಸದಾ ಕರ್ತವ್ಯ ನಿರ್ವಹಿಸಲು ಬದ್ದನಾಗಿದ್ದೇನೆ ಎಂದು ಎ.ಎಸ್.ಪೊನ್ನಣ್ಣ ಅವರು ಇದೇ ಸಂದರ್ಭದಲ್ಲಿ ನುಡಿದರು.

ಸಮಗ್ರ ಗಿರಿಜನ ಯೋಜನಾ ನಿರ್ದೇಶಕ ಎಸ್. ಹೊನ್ನೇಗೌಡ ಮಾತನಾಡಿ ದಿಡ್ಡಳ್ಳಿ ಆದಿವಾಸಿ ಹೋರಾಟಗಾರರ ಪ್ರಯತ್ನದಿಂದ ೨೦೧೬-೧೭ ರಲ್ಲಿ ೭.೫೦ ಎಕರೆ ಭೂಮಿಯನ್ನು ಕೆದ ಮುಳ್ಳೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಕಾಯ್ದಿರಿಸಲಾಗಿತ್ತು. ದಿಡ್ಡಳ್ಳಿ ಹೋರಾಟಗಾರರಿಗೆ ಬಸವನ ಹಳ್ಳಿಯಲ್ಲಿ ಮನೆ ನಿರ್ಮಿಸಿದ್ದರಿಂದ ಇಲ್ಲಿನ ಸುತ್ತಮುತ್ತಲಿನ ಯರವ, ಬೆಟ್ಟಕುರುಬ, ಜೇನುಕುರುಬ ಆದಿವಾಸಿಗಳಿಗೆ ೪೩ ಮನೆಗಳನ್ನು ನಿರ್ಮಿಸಲಾಗಿದೆ ಎಂದರು.

ಆರಂಭದಲ್ಲಿ ೧೫ ಕೋಟಿ ರೂ. ವೆಚ್ಚ ಅಂದಾಜು ಪಟ್ಟಿ ತಯಾರಿಸಲಾಗಿತ್ತು. ೨೦೧೯-೨೦ ರಲ್ಲಿ ಕಾಮಗಾರಿ ಆರಂಭಗೊAಡಿತ್ತು. ಒಂದು ಮನೆಗೆ ೫ ಲಕ್ಷ ರೂ.ನಂತೆ ನಿಗದಿಯಾಗಿತ್ತು. ಆದರೆ ಎಸ್.ಆರ್.ದರ ಹೆಚ್ಚಾದ ಪರಿಣಾಮ ಮನೆಯ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿತ್ತು. ಆ ನಿಟ್ಟಿನಲ್ಲಿ ಸಿಎಸ್‌ಆರ್ ನಿಧಿಯಿಂದ ತಲಾ ೧.೬೦ ಲಕ್ಷ ರೂವನ್ನು ಶಾಸಕರ ಪ್ರಯತ್ನದಿಂದ ಬಿಡುಗಡೆಯಾಗಿತ್ತು. ಈ ಬಡಾವಣೆಯಲ್ಲಿ ೧೨೯ ಮನೆ ನಿರ್ಮಿಸಬಹುದಾಗಿದ್ದು, ಸದ್ಯ ೬೦ ಮನೆಗಳಲ್ಲಿ ೪೩ ಮನೆಗಳು ಪೂರ್ಣಗೊಂಡಿದ್ದು ಉಳಿದ ೧೭ ಮನೆಗಳನ್ನು ಪೂರ್ಣಗೊಳಿಸಲಾಗುವುದು. ಪರಿಶಿಷ್ಟ ಪಂಗಡದ ೫೦೦ ಕುಟುಂಬಗಳಿಗೆ ಮನೆ ಹಕ್ಕು ಪತ್ರ ವಿತರಿಸಲು ಸಿದ್ದವಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ವೀರಾಜಪೇಟೆ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ವಿ. ಜಾನ್ಸನ್, ಪಂಕಜ, ಕೆಡಿಪಿ ಸದಸ್ಯರಾದ ಪ್ರಶಾಂತ್ ಉತ್ತಪ್ಪ, ವೀರಾಜಪೇಟೆ ಪುರಸಭೆ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜೇಫ್ರಿ ಉತ್ತಪ್ಪ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ವೀರಾಜಪೇಟೆ ತಹಶೀಲ್ದಾರ್ ಪ್ರವೀಣ್ ಕುಮಾರ್, ತಾ.ಪಂ.ಇಒಗಳಾದ ರಾಜೇಶ್, ಶೇಖರ್, ತಾಲೂಕು ಐಟಿಡಿಪಿ ಅಧಿಕಾರಿ ತೇಜರಾಜ್, ಇಂಜಿನಿಯರ್‌ಗಳಾದ ಸಚಿನ್, ರಘುನಂದನ್, ಬಾರಿಕಾಡು ಗ್ರಾಮಸ್ಥರು, ಆದಿವಾಸಿ ಕುಟುಂಬದವರು, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಬಿ. ಮಣಿ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಇದ್ದರು.