(ಕೋವರ್‌ಕೊಲ್ಲಿ ಇಂದ್ರೇಶ್)

ಬೆAಗಳೂರು, ಜೂ. ೫: ಜಾಗತಿಕ ಕಾಫಿ ಉತ್ಪಾದನೆಯಲ್ಲಿ ಪ್ರಾಬಲ್ಯ ಹೊಂದಿರುವ ಎರಡು ಪ್ರಮುಖ ಕಾಫಿ ತಳಿಗಳಾದ ಅರೇಬಿಕಾ ಮತ್ತು ರೋಬಸ್ಟಾ ಎರಡೂ, ಹೆಚ್ಚುತ್ತಿರುವ ತಾಪಮಾನ ಮತ್ತು ಮಳೆಯ ಮಾದರಿಗಳಲ್ಲಿ ಬದಲಾವಣೆಯಿಂದ ಒತ್ತಡವನ್ನು ಎದುರಿಸುತ್ತಿವೆ.

೩೦ ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವು ಇಳುವರಿಯನ್ನು ಕಡಿಮೆ ಮಾಡುತ್ತದೆ. ಕಾಫಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಸ್ಯಗಳ ಒತ್ತಡವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಅರೇಬಿಕಾ ಕಾಫಿ ರೋಬಸ್ಟಾಕ್ಕಿಂತ ಹೆಚ್ಚು ಶಾಖ-ಸೂಕ್ಷö್ಮವಾಗಿದೆ. ಭಾರತವು ಎರಡೂ ಪ್ರಭೇದಗಳನ್ನು, ಮುಖ್ಯವಾಗಿ ರೋಬಸ್ಟಾವನ್ನು ಹೆಚ್ಚಾಗಿ ಪಶ್ಚಿಮಘಟ್ಟಗಳಲ್ಲಿ ಬೆಳೆಯುತ್ತಿದೆ.

ವಿಶ್ವದಲ್ಲಿ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳೊಂದಿಗೆ, ಸಂಶೋಧಕರು ಮತ್ತು ಬೆಳೆಗಾರರು ಪರ್ಯಾಯ ಹಾಗೂ ವೈಪರಿತ್ಯಯ ತಡೆದುಕೊಳ್ಳುವ ಗುಣವುಳ್ಳ ಕಾಫಿಯ ಕಡೆಗೆ ಮುಖ ಮಾಡುತ್ತಿದ್ದಾರೆ. ಅವುಗಳಲ್ಲಿ ಎಕ್ಸೆಲ್ಸಾ ಮುಖ್ಯವಾದ ತಳಿ ಆಗಿದೆ. ಉಷ್ಣವಲಯದ ಮತ್ತು ಪಶ್ಚಿಮ ಆಫ್ರಿಕಾ ಹಾಗೂ ಆಗ್ನೇಯ ಏಷ್ಯಾದ ಕೆಲವು ಭಾಗಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿರುವ ಎಕ್ಸೆಲ್ಸಾ ಭಾರತಕ್ಕೆ ಹೊಸತೇನೂ ಅಲ್ಲ. ಈ ಮಾದರಿ ಕಾಫಿಯನ್ನು ನೆರಳಿಗಾಗಿ ಅಥವಾ ಬೇಲಿಯ ಪಕ್ಕದಲ್ಲಿಯೂ ಬೆಳೆಸಲಾಗುತ್ತದೆ. ಆದರೆ ಇದನ್ನು ಮುಖ್ಯ ಬೆಳೆಯಾಗಿ ಬೆಳೆದಿರುವುದು ತುಂಬಾ ಕಡಿಮೆ.

೧೮೦೦ರ ದಶಕದ ಉತ್ತರಾರ್ಧದಲ್ಲಿ ಬ್ರಿಟಿಷ್ ಪ್ಲಾಂಟರ್ ಕರ್ನಲ್ ಬೆನ್ಸನ್ ಅವರು ಅರೇಬಿಕಾಗೆ ಪರ್ಯಾಯವಾಗಿ ಕೀಟ ಮತ್ತು ರೋಗಬಾಧೆ ತಾಳಿಕೆಯ ಶಕ್ತಿಯುಳ್ಳ ಎಕ್ಸೆಲ್ಸಾವನ್ನು ಭಾರತಕ್ಕೆ ಪರಿಚಯಿಸಿದರು. ಆದರೂ ಈ ಗಿಡ ಆರರಿಂದ ೧೫ ಮೀಟರ್ ಎತ್ತರ ಬೆಳೆಯುವುದು ಹಾಗೂ ದಟ್ಟವಾದ ಕವಲೊಡೆಯುವಿಕೆಯಿಂದಾಗಿ, ಇದು ಪೂರ್ಣ ಪ್ರಮಾಣದ ತೋಟ ನಿರ್ವಹಣೆಗೆ ಅಪ್ರಾಯೋಗಿಕ ಎಂದು ಪರಿಗಣಿಸಲಾಯಿತು.

ದಕ್ಷಿಣ ಭಾರತ ಕಾಫಿ ಕಂಪೆನಿಯ ಸಹ-ಸಂಸ್ಥಾಪಕ ಅಕ್ಷಯ್ ದಶರಥ್ ಅವರು ಸುಂಟಿಕೊಪ್ಪ ಸಮೀಪದ ನಾಕೂರಿನ ತಮ್ಮ ಕಾಫಿ ಎಸ್ಟೇಟ್‌ನಲ್ಲಿ ಸುಮಾರು ೬೦ ವರ್ಷ ಹಳೆಯ ಎಕ್ಸೆಲ್ಸಾ ಕಾಫಿ ಗಿಡಗಳನ್ನು ಹೊಂದಿದ್ದಾರೆ. ಅವರ ಅಜ್ಜ ಮನೆಯಲ್ಲಿ ಎಕ್ಸೆಲ್ಸಾವನ್ನು ಮಾತ್ರ ಕುಡಿಯುತ್ತಿದ್ದರು. “ಇದನ್ನು ಕೇರಳದಲ್ಲಿ ಅರೇಬಿಕಾದೊಂದಿಗೆ ಬೆರೆಸಲಾಗುತ್ತಿತ್ತು” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಎಕ್ಸೆಲ್ಸಾ ಬೆರಿ ಬೋರರ್‌ನಂತಹ ಕೀಟಗಳಿಗೆ ಗುರಿಯಾಗು ವುದರಿಂದ, ಭಾರತೀಯ ಕಾಫಿ ಮಂಡಳಿಯು ಅದನ್ನು ಕತ್ತರಿಸಲು ಸಲಹೆ ನೀಡಿತ್ತು ಎಂದು ದಶರಥ್ ಹೇಳಿದರು. ಆದರೆ, ದಶರಥ್ ಅವರ ಕುಟುಂಬವು ನಿರಾಕರಿಸಿತು ಮತ್ತು ಗಿಡಗಳನ್ನು ಸಂರಕ್ಷಿಸಲು ನಿರ್ಧರಿಸಿತು. ಇಂದು, ಅದೇ ಗಿಡಗಳು ಹೊಸ ಆಸಕ್ತಿಯನ್ನು ಪಡೆಯುತ್ತಿವೆ. ೨೦೨೫ ರಲ್ಲಿ, ಸೌತ್ ಇಂಡಿಯಾ ಕಾಫಿ ಕಂಪೆನಿಯು ನಾಲ್ಕು ಟನ್‌ಗಳಿಗಿಂತ ಹೆಚ್ಚು ಎಕ್ಸೆಲ್ಸಾ ಕಾಫಿಯನ್ನು ಮಾರಾಟ ಮಾಡಿತು ಮತ್ತು ೨೦೨೬ ರಲ್ಲಿ, ಇದು ಐದು ಟನ್‌ಗಳಿಗೆ ಏರುತ್ತದೆ ಎಂದು ಅಂದಾಜಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೆರೆಹಕ್ಲು ಎಸ್ಟೇಟ್ ೧೯೫೩ ರಿಂದ ಎಕ್ಸೆಲ್ಸಾ ಮತ್ತು ಲಿಬೆರಿಕಾ ಕಾಫಿ ಪ್ರಭೇದಗಳನ್ನು ಬೆಳೆಯುತ್ತಿದೆ. “ನಾವು ಹವಾಮಾನ ಸಂಬAಧಿತ ಸಮಸ್ಯೆಗಳನ್ನು ಗಮನಿಸುತ್ತಿದ್ದೇವೆ, ವಿಶೇಷವಾಗಿ ಬೇಸಿಗೆಯ ಆರಂಭದಲ್ಲಿ ದೀರ್ಘ ಮತ್ತು ತೀವ್ರವಾದ ಮಳೆಯಾಗುತ್ತಿದೆ” ಎಂದು ಎಸ್ಟೇಟ್‌ನ ವ್ಯವಸ್ಥಾಪಕ ಪಾಲುದಾರ ಪ್ರಣಯ್ ತಿಪ್ಪಯ್ಯ ಅವರು ತಿಳಿಸಿದರು. ಎಕ್ಸೆಲ್ಸಾ ಮತ್ತು ಲಿಬೆರಿಕಾ ಹವಾಮಾನ ವ್ಯತ್ಯಾಸಗಳಿಗೆ ಹೆಚ್ಚು ಸೂಕ್ತವಾಗಿವೆ ಎಂದು ಅವರು ಹೇಳಿದರು. ಅವುಗಳನ್ನು ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಕೊಯ್ಲು ಮಾಡಲಾಗುತ್ತದೆ, ಜಾಗತಿಕವಾಗಿ ಕಾಫಿ ಸಂಶೋಧಕರು ೧೩೩ ವಿವಿಧ ಜಾತಿಯ ಕಾಫಿಯನ್ನು ಗುರುತಿಸಿದ್ದಾರೆ. ಹಲವು ಇನ್ನೂ ವಾಣಿಜ್ಯಿಕವಾಗಿ ಲಭ್ಯವಿಲ್ಲದಿದ್ದರೂ, ಬದಲಾಗುತ್ತಿರುವ ಹವಾಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯಕ್ಕಾಗಿ ಅವುಗಳನ್ನು ಈಗ ಅಧ್ಯಯನ ಮಾಡಲಾಗುತ್ತಿದೆ.

ಎಕ್ಸೆಲ್ಸಾ, ವೈಪರಿತ್ಯ ತಡೆದುಕೊಳ್ಳುವ ಶಕ್ತಿಯುಳ್ಳ ಒಂದು ಕಾಫಿ ಪ್ರಭೇದ. ಇದನ್ನು ಈಗಾಗಲೇ ಉಗಾಂಡಾ ಮತ್ತು ವಿಯೆಟ್ನಾಂನಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ ಮತ್ತು ಶೀಘ್ರದಲ್ಲೇ ಮುಖ್ಯವಾಹಿನಿಯ ಸೂಪರ್ ಮಾರ್ಕೆಟ್‌ಗಳಿಗೆ ಪ್ರವೇಶಿಸಬಹುದು. “ಉಗಾಂಡಾದ ಎಕ್ಸೆಲ್ಸಾ ಒಂದು ದಶಕದೊಳಗೆ ಸೂಪರ್ ಮಾರ್ಕೆಟ್‌ಗಳಲ್ಲಿ ಕಾಣಿಸಿಕೊಳ್ಳಬಹುದು” ಎಂದು ತಜ್ಞರು ಹೇಳುತ್ತಾರೆ. ಉಗಾಂಡಾದ ರೈತರು ೨೦೦೦ ರ ದಶಕದ ಆರಂಭದಿAದಲೂ ನೂರಾರು ಎಕರೆ ಎಕ್ಸೆಲ್ಸಾವನ್ನು ಬೆಳೆಯುತ್ತಿದ್ದಾರೆ. ಉಗಾಂಡಾದ ರಾಷ್ಟಿçÃಯ ಕೃಷಿ ಸಂಶೋಧನಾ ಸಂಸ್ಥೆಯ ಹಿರಿಯ ಸಂಶೋಧನಾ ಅಧಿಕಾರಿ ಕಿವುಕಾ ಕ್ಯಾಥರೀನ್, ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಕಾರಣದಿಂದ ಉಗಾಂಡಾದಲ್ಲಿ ಸಣ್ಣ ಹಿಡುವಳಿದಾರರು ಮತ್ತು ದೊಡ್ಡ ರೈತರು ಎಕ್ಸೆಲ್ಸಾವನ್ನು ಹೆಚ್ಚಾಗಿ ಬೆಳೆಯತೊಡಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದಲ್ಲದೆ ಸ್ಟೆನೋಫಿಲ್ಲಾ ಎಂಬ ಕಾಫಿ ತಳಿ ಅರೇಬಿಕಾಕ್ಕಿಂತ ಹೆಚ್ಚು ಶಾಖ ಸಹಿಷ್ಣು ಮತ್ತು ರೋಬಸ್ಟಾಕ್ಕಿಂತ ಹೆಚ್ಚು ಬರ ಸಹಿಷ್ಣುವಾಗಿದೆ ಮತ್ತು ಇದು ಅರೇಬಿಕಾಗೆ ಬಹುತೇಕ ಹೋಲುವ ಪರಿಮಳವನ್ನು ಹೊಂದಿದೆ.

ಮಿಶ್ರತಳಿಗಳು ಶಾಖ ಮತ್ತು ಹೆಚ್ಚುವರಿ ತೇವಾಂಶದ ಒತ್ತಡವನ್ನು ಹಾಗೂ ರೋಗ ನಿರೋಧಕತೆಯನ್ನು ಎದುರಿಸಲು ಉತ್ತಮ ಆಯ್ಕೆಯನ್ನಾಗಿ ಮಾಡುವ ಗುಣಗಳನ್ನು ಹೊಂದಿದ್ದವು. ಈ ಸುಧಾರಿತ ಮಿಶ್ರತಳಿಗಳನ್ನು ತ್ವರಿತವಾಗಿ ಉತ್ಪಾದನೆಗೆ ತರಬಹುದು. ಸಂಶೋಧಕರು ಈ ಅಂತರಜಾತಿ ಹೈಬ್ರಿಡ್‌ಗೆ ಕಾಫಿಯಾ ಎಕ್ಸ್ ಲಿಬೆಕ್ಸ್ (ಸಾಮಾನ್ಯವಾಗಿ ಲಿಬೆಕ್ಸ್ ಕಾಫಿ ಎಂದು ಕರೆಯಲಾಗುತ್ತದೆ) ಎಂಬ ಹೊಸ ಹೆಸರನ್ನು ಪ್ರಸ್ತಾಪಿಸಿದ್ದಾರೆ.

ಕಾಫಿ ಬೆಳೆಯುವಿಕೆ ಮತ್ತು ಸೇವನೆಯ ಭವಿಷ್ಯದಲ್ಲಿ ಎಕ್ಸೆಲ್ಸಾ, ಸ್ಟೆನೋಫಿಲ್ಲಾ ಅಥವಾ ಲೈಬೆರಿಕಾದಂತಹ ಪ್ರಭೇದಗಳು ಮುನ್ನೆಲೆಗೆ ಬರುವುದನ್ನು ನೋಡಬಹುದು. “ಎಕ್ಸೆಲ್ಸಾದ ಸೌಮ್ಯ ಪರಿಮಳ ಮತ್ತು ಕಡಿಮೆ ಕೆಫೀನ್ ಅಂಶ ಅಥವಾ ಅದನ್ನು ಇನ್ಸ್ಟೆಂಟ್ ಕಾಫಿಯಲ್ಲಿ ಬಳಸುವುದು ಗ್ರಾಹಕರಿಗೆ ಆಹ್ಲಾದಕರವಾಗಿರುತ್ತದೆ” ಎಂದು ತಜ್ಞರು ಹೇಳುತ್ತಾರೆ.