ಸುಂಟಿಕೊಪ್ಪ, ಜೂ. ೪: ೭ನೇ ಹೊಸಕೋಟೆ ತೊಂಡೂರುವಿನ ಕೆ.ಟಿ. ಸಲಿಕುಮಾರ್ ಎಂಬವರ ಮನೆಯ ಹಿಂಭಾಗದಲ್ಲಿ ಕಾಡಾನೆಯೊಂದು ಸಾವಿಗೀಡಾಗಿದೆ. ಬುಧವಾರ ರಾತ್ರಿ ವೇಳೆ ಆಹಾರ ಅರಸಿ ಬಂದ ಅಂದಾಜು ೨೦ ರಿಂದ ೨೫ ವರ್ಷ ಪ್ರಾಯದ ಗಂಡಾನೆ ತೋಟದ ಕೆಳಭಾಗದ ತೋಡಿನ ಕೆಸರಿನಲ್ಲಿ ಹೂತು ಹೋಗಿದ್ದು, ತೋಟಕ್ಕೆ ಅಳವಡಿಸಲಾಗಿದ್ದ ಸೋಲಾರ್ ತಂತಿ ಬೇಲಿಗೆ ತಗುಲಿ ವಿದ್ಯುತ್ ಸ್ಪರ್ಶಗೊಂಡು ಸಾವನ್ನಪ್ಪಿರಬಹುದು ಎಂದು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ. ಸ್ಥಳಕ್ಕೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಕೊಡಗು ವೃತ್ತ ಮುಖ್ಯ ಪಶುವೈದ್ಯಾಧಿಕಾರಿ ಮುಜೀಬುರ್ ರೆಹಮಾನ್, ಕುಶಾಲನಗರ ಪಶು ವೈದ್ಯಾಧಿಕಾರಿ ಸಂಜೀವ್ ಕುಮಾರ್ ಆರ್. ಸಿಂದೆ, ಸೋಮವಾರಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್ ಎನ್.ಪಿ., ಕುಶಾಲನಗರ ವಲಯ ಅರಣ್ಯಾಧಿಕಾರಿ ರಕ್ಷಿತ್ ಆರ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.