ಮಡಿಕೇರಿ, ಜೂ. ೪: ಒಂದು ಕಟ್ಟಡ ವಿಚಾರದಲ್ಲಿ ಏರ್ಪಟ್ಟ ಚರ್ಚೆ ಗೊಂದಲ, ಗದ್ದಲ, ಕೋಲಾಹಲವನ್ನು ಸೃಷ್ಟಿಸಿ ಆರೋಪ-ಪ್ರತ್ಯಾರೋಪಕ್ಕೆ ವೇದಿಕೆಯಾಗಿ ಬದಲಾಯಿತು. ಸವಾಲು, ಪ್ರತಿ ಸವಾಲುಗಳನ್ನೊಡ್ಡಿಕೊಂಡು ಪರ-ವಿರೋಧದ ಜಟಾಪಟಿಗೆ ನಗರಸಭೆಯ ಕೌನ್ಸಿಲ್ಸ್ ಸಾಮಾನ್ಯ ಸಭೆ ಸಾಕ್ಷಿಯಾಯಿತು.
ನಗರಸಭಾಧ್ಯಕ್ಷೆ ಕಲಾವತಿ ಅಧ್ಯಕ್ಷತೆಯಲ್ಲಿ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಗಾಂಧಿ ಮೈದಾನದ ಎದುರಿನ ಒಂದು ಕಟ್ಟಡದ ವಿಚಾರದಲ್ಲಿ ಆಡಳಿತಾರೂಢ ಬಿಜೆಪಿ ಸದಸ್ಯರು ಹಾಗೂ ವಿಪಕ್ಷ ಎಸ್ಡಿಪಿಐ ನಡುವೆ ನಡೆದ ಚರ್ಚೆ ಕಾವು ಪಡೆದುಕೊಂಡಿತು. ಬರೋಬ್ಬರಿ ೨ ಗಂಟೆಗಳ ಕಾಲ ಒಂದೇ ವಿಷಯ ವಿವಾದದ ಕೇಂದ್ರಬಿAದುವಾಗಿ ಪರಿಣಮಿಸಿತು.
ಆರಂಭದಲ್ಲಿ ಎಸ್ಡಿಪಿಐ ಸದಸ್ಯ ಅಮೀನ್ ಮೊಹಿಸಿನ್ ಮಾತನಾಡಿ, ಗಾಂಧಿ ಮೈದಾನ ಎದುರಿನ ಕಟ್ಟಡ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆಯಾಗಿದೆ. ಅಗತ್ಯ ಅನುಮತಿ ಪಡೆದುಕೊಂಡಿಲ್ಲ. ಹಿಂದಿನ ಸಭೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲು ನಿರ್ಣಯವಾಗಿದ್ದರೂ ಕ್ರಮ ವಹಿಸಿಲ್ಲ. ಅಲ್ಲದೆ ನಗರಸಭೆ ಕಾನೂನು ಸಲಹೆಗಾರರು ಕೂಡ ನಿಯಮ ಉಲ್ಲಂಘನೆಯ ಬಗ್ಗೆ ವರದಿ ನೀಡಿದ್ದರೂ ಕಾಮಗಾರಿ ಸ್ಥಗಿತಗೊಳಿಸಿಲ್ಲ. ಇದರೊಂದಿಗೆ ಜಾಗ ಒತ್ತುವರಿಯಾಗಿದೆ. ಇವೆಲ್ಲದರ ನಡುವೆ ಮ್ಯಾನ್ಯೂಯಲ್ ಲೈಸನ್ಸ್ ನೀಡಿರುವುದು ಸರಿಯಲ್ಲ. ಕಾನೂನಿನ ಪ್ರಕಾರ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಆನ್ಲೈನ್ ಮೂಲಕವೇ ಲೈಸನ್ಸ್ ನೀಡಬೇಕು. ಅಲ್ಲದೆ ಇದೀಗ ಆ ಲೈಸನ್ಸ್ ಕೂಡ ಮುಕ್ತಾಯಗೊಂಡಿದ್ದು, ಇದರ ವಿರುದ್ಧ ಶಿಸ್ತು ಕ್ರಮವಹಿಸಬೇಕು. ಕಾಮಗಾರಿ ಮುಕ್ತಾಯ ದೃಢೀಕರಣ ನೀಡಬಾರದು ಎಂದು ಆಗ್ರಹಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಕೆ.ಎಸ್. ರಮೇಶ್, ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಅನುಮತಿಯನ್ನು ಪಡೆದುಕೊಂಡಿದ್ದಾರೆ. ತೊಡಕು ಇರುವುದನ್ನು ಬಗೆಹರಿಸಿಕೊಳ್ಳುವ ಅವಕಾಶವಿದೆ ಎಂದರು.
ಈ ವೇಳೆ ಅಮೀನ್ ಹಾಗೂ ರಮೇಶ್ ನಡುವೆ ವಾಗ್ವಾದ ಆರಂಭಗೊAಡಿತು. ಕ್ರಮೇಣ ಎಸ್ಡಿಪಿಐ ಸದಸ್ಯರು ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮರವೇ ಸೃಷ್ಟಿಯಾಯಿತು. ಸಣ್ಣ ಜಾಗದಲ್ಲಿ ಮನೆ ನಿರ್ಮಿಸಿದರೆ ಹೋಗಿ ಕೆಡವುವ ಎದೆಗಾರಿಕೆ ಈ ವಿಷಯದಲ್ಲಿ ಇಲ್ಲವೆ ಎಂದು ಅಮೀನ್ ಕಿಡಿಕಾರಿದರು.
ಕೆ.ಎಸ್. ರಮೇಶ್ ಮಾತನಾಡಿ, ಮುಡಾ ಮೂಲಕ ನಗರಸಭೆಗೆ ದಾಖಲಾತಿಗಳು ಬಂದಿವೆ ಎಂದು ಪ್ರತ್ಯುತ್ತರ ನೀಡುವ ಸಂದರ್ಭ ಅಮೀನ್ ಮಧ್ಯಪ್ರವೇಶಿಸಿ ಆ ದಾಖಲೆಗಳು ಜಾಗದ ಮಾಲೀಕರು ನೀಡಿದ್ದು, ತನ್ನ ಬಳಿ ಇರುವುದು ಆರ್ಟಿಐ ದಾಖಲೆಗಳು ಎಂದರು. ಈ ಸಂದರ್ಭ ಈ ದಾಖಲೆ ಕಟ್ಟಡ ಮಾಲೀಕರು ನೀಡಿದ್ದು ಎಂದು ಸಾಬೀತಾದಲ್ಲಿ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ರಮೇಶ್ ಸವಾಲೆಸೆದರು.
ಈ ಹಿಂದಿನ ಸಭೆಯಲ್ಲಿ ಆದ ನಿರ್ಣಯವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅಮೀನ್ ತಿಳಿಸಿದ ಸಂದರ್ಭ ಅದಕ್ಕೆ ಸರ್ವಾನುಮತದ ಒಪ್ಪಿಗೆ ದೊರೆತಿಲ್ಲ. ನಾವು ಕಟ್ಟಡಕ್ಕೆ ಅಡ್ಡಿಮಾಡದಂತೆ ಸರ್ವಾನುಮತದಿಂದ ಒಪ್ಪಿಗೆ ನೀಡುತ್ತೇವೆ. ಅಧಿಕಾರಿಗಳು, ಅಧ್ಯಕ್ಷರು ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಕೆ.ಎಸ್. ರಮೇಶ್ ವಾದ ಮಂಡಿಸಿದರು.
ಕಟ್ಟಡಕ್ಕೆ ವಿರೋಧಿಸುತ್ತಿರುವ ಎಸ್ಡಿಪಿಐ ಧೋರಣೆಯನ್ನು ಬಿಜೆಪಿ ಸದಸ್ಯ ಅರುಣ್ ಶೆಟ್ಟಿ ವಿರೋಧಿಸಿದ ಸಂದರ್ಭ, ಎಸ್ಡಿಪಿಐ ಸದಸ್ಯ ಮನ್ಸೂರ್ ಅಲಿ ಹಾಗೂ ಅಮೀನ್ ಮಾತನಾಡಿ, ಕಳೆದ ಸಭೆಯಲ್ಲಿ ಈ ಕಟ್ಟಡ ವಿಚಾರವನ್ನು ವಿರೋಧಿಸಿದ ಅರುಣ್ ಶೆಟ್ಟಿ ಇಂದು ಸಮರ್ಥಿಸಿಕೊಳ್ಳಲು ಕಾರಣವೇನು ಎಂದು ಪ್ರಶ್ನಿಸಿದರು.
ಕಟ್ಟಡ ಕಾಮಗಾರಿ ಮುಂದುವರೆಸಲು ಅವಕಾಶ ನೀಡಬಾರದು ಎಂಬ ಪ್ರಬಲ ವಾದವನ್ನು ಎಸ್ಡಿಪಿಐ ಸದಸ್ಯರುಗಳು ವ್ಯಕ್ತಪಡಿಸಿದರು. ಈ ವಿಚಾರ ಗಂಟೆಗಟ್ಟಲೇ ಚರ್ಚೆಗೊಳಗಾಯಿತು. ಆರೋಪ-ಪ್ರತ್ಯಾರೋಪಗಳನ್ನು ಸದಸ್ಯರು ಮಾಡಿಕೊಂಡರು. ಇದರಿಂದ ಕೆಲವರಿಗೆ ಲಾಭವಿದೆ ಎಂಬ ಆರೋಪವೂ ವ್ಯಕ್ತವಾದರೆ, ಇದನ್ನು ವಿರೋಧಿಸಲು ಕಾರಣವೇನು? ಇದರ ಹಿಂದಿನ ಮರ್ಮವೇನು? ಎಂಬ ಪ್ರತ್ಯಾರೋಪಗಳು ಸದಸ್ಯರಿಂದ ಕೇಳಿಬಂದವು.
ಉಪಾಧ್ಯಕ್ಷ ಮಹೇಶ್ ಜೈನಿ ಮಧ್ಯಪ್ರವೇಶಿಸಿ ನಗರದಲ್ಲಿರುವ ಎಲ್ಲಾ ಅಕ್ರಮ ಕಟ್ಟಡಗಳನ್ನು ತೆರವು ಮಾಡಬೇಕಾಗುತ್ತದೆ ಎಂದರು. ಎಸ್ಡಿಪಿಐ ಸದಸ್ಯ ಬಶೀರ್ ಕೂಡ ಕಟ್ಟಡ ವಿಚಾರವನ್ನು ವಿರೋಧಿಸಿ ಕ್ರಮಕ್ಕೆ ಆಗ್ರಹಿಸಿದರು.
ನಾಮನಿರ್ದೇಶಿತ ಸದಸ್ಯ ಜಿ.ಸಿ. ಜಗದೀಶ್ ಮಾತನಾಡಿ, ಒಂದೇ ವಿಷಯದಲ್ಲಿ ವಾಗ್ವಾದ ನಡೆಸುವುದು ಸರಿಯಲ್ಲ. ಅಭಿವೃದ್ಧಿ ಬಗ್ಗೆ ಚರ್ಚಿಸಿ ಎಂದು ಹೇಳಿದ ಸಂದರ್ಭ ಮತ್ತೆ ವಾಗ್ವಾದ ಉಂಟಾಯಿತು.
ಪೌರಾಯುಕ್ತ ರಮೇಶ್ ಮಾತನಾಡಿ, ತಾಂತ್ರಿಕ ಸಮಸ್ಯೆಯಿಂದ ಮ್ಯಾನ್ಯುಯಲ್ ಲೈಸನ್ಸ್ ನೀಡಲಾಗಿದೆ. ತಂತ್ರಾAಶದ ಮೂಲಕವೇ ಇದನ್ನು ನೀಡಬೇಕಿತ್ತು ಎಂದು ಸ್ಪಷ್ಟಪಡಿಸಿದರು.
ಈ ಹಿಂದಿನ ಸಭೆಯಲ್ಲಿ ಕಟ್ಟಡ ವಿಚಾರದಲ್ಲಿ ಆದ ನಿರ್ಣಯ ಬದಲಾಯಿಸುವಂತೆ ಬಿಜೆಪಿ ಸದಸ್ಯರು ಹೇಳಿದ ಸಂದರ್ಭ ಅಮೀನ್ ಮಾತನಾಡಿ ನಿರ್ಣಯ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್, ಬದಲಾಯಿಸಬೇಡಿ ರದ್ದು ಮಾಡುವಂತೆ ಹೇಳಿದರು. ಇದರಿಂದ ಅಧಿಕಾರಿಗಳ ತಲೆದಂಡವಾಗುತ್ತದೆ. ಎಚ್ಚರದಿಂದ ಕಾರ್ಯನಿರ್ವಹಿಸಿ ಎಂದು ಅಮೀನ್ ಎಚ್ಚರಿಸಿದರು.
ಈ ವೇಳೆಯೂ ಪರಸ್ಪರ ವಾಗ್ವಾದ ಹೆಚ್ಚಾಯಿತು. ಪರಿಸ್ಥಿತಿ ಹತೋಟಿಗೆ ತರುವುದು ಕಷ್ಟ ಸಾಧ್ಯವಾಯಿತು.
ಸೆಕ್ಷನ್ ಓದುವಂತೆ ಎಸ್ಡಿಪಿಐ ಪಟ್ಟು ಬಿಡದ ಬಿಜೆಪಿ
ನಂತರ ಸೆಕ್ಷನ್ ೫೭ ನಿಯಮಗಳನ್ನು ಓದುವಂತೆ ಪೌರಾಯುಕ್ತರಿಗೆ ಎಸ್ಡಿಪಿಐ ಸದಸ್ಯರುಗಳಾದ ಅಮೀನ್ ಮೊಹಿಸಿನ್ ಹಾಗೂ ಮನ್ಸೂರ್ ಅಲಿ ಒತ್ತಾಯಿಸಿದರು. ಇದಕ್ಕೆ ಒಪ್ಪಿಗೆ ನೀಡಬಾರದೆಂದು ಬಿಜೆಪಿ ಸದಸ್ಯರು ಹಠ ಹಿಡಿದರು. ನಿಯಮಗಳನ್ನು ಓದಬೇಕೆಂದರೆ ಅಧ್ಯಕ್ಷರು ಅನುಮತಿ ನೀಡಬೇಕೆಂದು ಬಿಜೆಪಿ ಸದಸ್ಯರು ಪ್ರತಿಪಾದಿಸಿದರು. ಇದಕ್ಕೆ ಅಧ್ಯಕ್ಷೆ ಕಲಾವತಿ ಅವಕಾಶ ನೀಡಲಿಲ್ಲ. ಕಾನೂನಿನ ಪ್ರಕಾರ ಮುಂದುವರೆಯುತ್ತೇವೆ ಎಂದು ಹೇಳುವ ಮೂಲಕ ಚರ್ಚೆಗೆ ಇತಿಶ್ರೀ ಹಾಡಿದರು.
ಅಕ್ರಮ ಶೆಡ್ ನಿರ್ಮಾಣಕ್ಕೆ ವಿರೋಧ
ಎಸ್ಪಿ ಕಚೇರಿ ಬಳಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿದ ಬಗ್ಗೆ ಬಿಜೆಪಿ ಸದಸ್ಯ ಅರುಣ್ ಶೆಟ್ಟಿ ಆಕ್ಷೇಪಿಸಿ ಕ್ರಮಕ್ಕೆ ಆಗ್ರಹಿಸಿದರು.
ಜಾಗ ಸಮತಟ್ಟು ಮಾಡಿ ಈಗಾಗಲೇ ಶೆಡ್ ನಿರ್ಮಿಸಲಾಗಿದೆ. ಇದಕ್ಕೆ ನಗರಸಭೆಯಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ಭಾವಚಿತ್ರ ಸಹಿತ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಕಂದಾಯಾಧಿಕಾರಿ ತಾಹೀರ್, ಈಗಾಗಲೇ ಜಾಗ ಪರಿಶೀಲನೆ ಮಾಡಿದ್ದು, ಗೋಶಾಲೆ ಎಂದು ತಿಳಿದು ಬಂದಿದೆ. ಆದರೆ, ನಗರಸಭೆಯಿಂದ ಯಾವುದೇ ಅನುಮತಿಯನ್ನು ಪಡೆದುಕೊಂಡಿಲ್ಲ. ವಿಚಾರಿಸಿದ ಸಂದರ್ಭ ಮಾಲೀಕರ ಬಗ್ಗೆ ಯಾರೂ ಮಾಹಿತಿ ನೀಡುತ್ತಿಲ್ಲ ಎಂದರು. ಬಿಜೆಪಿ ಸದಸ್ಯ ಕಾಳಚಂಡ ಅಪ್ಪಣ್ಣ ಮಾತನಾಡಿ, ಸರಕಾರಿ ಜಾಗಗಳನ್ನು ನಗರಸಭೆ ಹಸ್ತಾಂತರ ಮಾಡಿಕೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ತಾಹೀರ್, ಕಂದಾಯ ಇಲಾಖೆ ಜಾಗ ಹಸ್ತಾಂತರ ಮಾಡಬೇಕಾದ ಸಂದರ್ಭ ವಿಂಗಡಣೆ ಮಾಡಿ, ದುರಸ್ತಿಗೊಳಿಸಿ, ದಾಖಲೆ ಸಹಿತ ನೀಡಬೇಕು. ಆದರೆ, ಅದನ್ನು ಮಾಡುತ್ತಿಲ್ಲ. ಜಾಗವನ್ನು ಪಡೆದುಕೊಂಡಲ್ಲಿ ಕಾನೂನು ತೊಡಕುಗಳನ್ನು ಎದುರಿಸಬೇಕಾಗುತ್ತಿದೆ ಎಂದು ತಿಳಿಸಿದರು.