ಸೋಮವಾರಪೇಟೆ,ಜೂ.೪: ಇಲ್ಲಿನ ಹೈಟೆಕ್ ಮಾರುಕಟ್ಟೆ ಬಳಿಯಲ್ಲಿ ಕಳೆದ ಹಲವು ವರ್ಷಗಳಿಂದ ಸಂಗ್ರಹವಾಗಿದ್ದ ತ್ಯಾಜ್ಯಕ್ಕೆ ಶಾಸಕ ಡಾ. ಮಂತರ್ ಗೌಡ ಅವರ ನೆರವಿನಿಂದ ಪಟ್ಟಣ ಪಂಚಾಯಿತಿ ಕೊನೆಗೂ ಮುಕ್ತಿ ನೀಡಿದೆ.

ಮಾರುಕಟ್ಟೆಯ ಒಂದು ಬದಿಯಲ್ಲಿ ತೊಟ್ಟಿಗಳನ್ನು ನಿರ್ಮಿಸಿ ತ್ಯಾಜ್ಯವನ್ನು ಹಾಕಲಾಗುತ್ತಿತ್ತು. ಕೆಲವೊಮ್ಮೆ ಕಸಕ್ಕೆ ಬೆಂಕಿ ಹಚ್ಚಿದ ಸಂದರ್ಭ ಇಡೀ ಪಟ್ಟಣ ದಟ್ಟ ಹೊಗೆಯಿಂದ ಆವೃತ್ತವಾಗುತ್ತಿತ್ತು. ತ್ಯಾಜ್ಯ ವಿಲೇವಾರಿಗಾಗಿ ಸಿದ್ದಲಿಂಗಪುರದಲ್ಲಿ ಘಟಕ ಸ್ಥಾಪನೆಯಾಗಿದ್ದರೂ ಈವರೆಗೆ ಅಲ್ಲಿಗೆ ತ್ಯಾಜ್ಯವನ್ನು ವಿಲೇವಾರಿಗೊಳಿಸಲು ಆಗಿರಲಿಲ್ಲ.

ಪರಿಣಾಮ ಕಸ ವಿಲೇವಾರಿ ಸಮಸ್ಯೆ ಪಟ್ಟಣ ಪಂಚಾಯಿತಿಯನ್ನು ಕಾಡುತ್ತಿತ್ತು. ಇದೀಗ ಶಾಸಕರು ಸ್ವಂತ ಹಣ ನೀಡಿ ಪಟ್ಟಣದ ಮಾರುಕಟ್ಟೆಯಲ್ಲಿ ಸಂಗ್ರಹಿಸಿದ್ದ ತ್ಯಾಜ್ಯವನ್ನು ತೆರವುಗೊಳಿಸಿ, ಮೈಸೂರಿನ ವೆಲ್‌ಕಮ್ ಟ್ರೇರ‍್ಸ್ನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ವರ್ಗಾಯಿಸಲಾಯಿತು.

ಪಟ್ಟಣದ ತ್ಯಾಜ್ಯ ವಿಲೇವಾರಿಗೆ ಸಮಸ್ಯೆಯನ್ನು ಮನಗಂಡ ಶಾಸಕ ಡಾ. ಮಂತರ್ ಗೌಡ ಅವರು ತಮ್ಮ ಸ್ವಂತ ವೆಚ್ಚದಿಂದ ತ್ಯಾಜ್ಯವನ್ನು ತೆಗೆಸಲು ಮುಂದಾಗಿರುವುದು ಪ್ರಶಂಸೆಗೆ ಪಾತ್ರವಾಗಿದೆ. ಅಂತೆಯೇ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವ ಘಟಕವನ್ನು ಶೀಘ್ರ ಪೂರ್ಣಗೊಳಿಸಬೇಕೆಂಬ ಸಲಹೆಯೂ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಮಾರುಕಟ್ಟೆಯಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರು ಲಾರಿಗೆ ತುಂಬಿಸಿ ಮೈಸೂರಿಗೆ ಕಳಿಸಿದರು. ಈ ಸಂದರ್ಭ ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿ ಜಾಸಿಂಖಾನ್ ಮತ್ತು ಸಿಬ್ಬಂದಿಗಳು ಇದ್ದರು.