ಕುಶಾಲನಗರ, ಜೂ. ೩: ಸಭೆಯಲ್ಲಿ ಪಾಲ್ಗೊಳ್ಳುವ ಸಂದರ್ಭ ಅಧಿಕಾರಿಗಳು ಸ್ಥಳ ಪರಿಶೀಲನೆ ಜೊತೆಗೆ ಸಮಗ್ರ ಮಾಹಿತಿಯನ್ನು ಕಲೆ ಹಾಕಿ ಬರುವಂತಾಗಬೇಕು ಎಂದು ಕೊಡಗು ಜಿಲ್ಲಾಧಿಕಾರಿ ಮತ್ತು ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಸೋಮಶೇಖರ್, ತಾಲೂಕು ಮಟ್ಟದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಕುಶಾಲನಗರದಲ್ಲಿ ನಡೆಯಿತು.
ಕುಶಾಲನಗರದಲ್ಲಿ ನಡೆದ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಪಾಲ್ಗೊಂಡು, ಮಳೆಗಾಲದಲ್ಲಿ ಪ್ರವಾಹ, ಭೂಕುಸಿತ, ವಿವರ ಪೂರ್ವ ಸಿದ್ಧತೆ ವರದಿ ಮತ್ತಿತರ ವಿಷಯಗಳ ಬಗ್ಗೆ ತಾಲೂಕು ಅಧಿಕಾರಿಗಳಿಂದ ಮಾಹಿತಿ ಪಡೆಯುವ ಸಂದರ್ಭ ಅಧಿಕಾರಿಗಳು ಯಾವುದೇ ಪೂರ್ವ ಸಿದ್ಧತೆಗಳ ಸಭೆ ನಡೆಸದಿರುವ ಬಗ್ಗೆ ಗಮನಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೆ ತಾಲೂಕು ವ್ಯಾಪ್ತಿಯಲ್ಲಿ ಮಳೆಗಾಲ ಸಂದರ್ಭ ನಡೆದ ಘಟನೆಗಳ ಬಗ್ಗೆ ವಿವರ ಬಯಸಿದ ಜಿಲ್ಲಾಧಿಕಾರಿಗಳು, ಪ್ರಸಕ್ತ ಸ್ಥಿತಿಗತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವಂತೆ ಸೂಚಿಸಿದರು. ಎಲ್ಲ ಪೂರ್ವ ಸಿದ್ಧತೆ ನಂತರ ಮತ್ತೊಮ್ಮೆ ಸಭೆ ನಡೆಸುವುದಾಗಿ ತಿಳಿಸಿದರು.
ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಬಡಾವಣೆಗಳ ವಾಸ್ತವ ಸ್ಥಿತಿಗತಿ ಬಗ್ಗೆ ಮುಖ್ಯ ಅಧಿಕಾರಿ ಗಿರೀಶ್ ಅವರಿಂದ ಸಂಪೂರ್ಣ ಮಾಹಿತಿ ಬಯಸಿದರು.
ಕಾವೇರಿ ನದಿ, ಹಾರಂಗಿ ತುಂಬಿ ಹರಿಯುವ ಸಂದರ್ಭ ನದಿ ತಟದ ತಗ್ಗು ಪ್ರದೇಶಗಳ ಬಡಾವಣೆಗಳು ಜಲಾವೃತಗೊಳ್ಳುವ ಬಗ್ಗೆ ಮಾಹಿತಿ ನೀಡಿದ ಗಿರೀಶ್, ಕಾವೇರಿ ತುಂಬಿ ಹರಿಯುವ ಸಂದರ್ಭ ಹಾರಂಗಿ ಜಲಾಶಯದಿಂದ ಹಂತ ಹಂತವಾಗಿ ನೀರು ಬಿಡುಗಡೆಗೊಳಿಸಿದಲ್ಲಿ ಪ್ರವಾಹ ನಿಯಂತ್ರಣ ಮಾಡಬಹುದು ಎಂದು ತಿಳಿಸಿದರು. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಈ ಮೂಲಕ ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಕುಶಾಲನಗರ ವ್ಯಾಪ್ತಿಯ ತಗ್ಗು ಪ್ರದೇಶದ ಬಡಾವಣೆಗಳಲ್ಲಿ ಪ್ರವಾಹ ನಿಯಂತ್ರಣ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂಬAಧ ಅಣೆಕಟ್ಟೆ ಅಧಿಕಾರಿಗಳು ಮತ್ತು ಸ್ಥಳೀಯ ಅಧಿಕಾರಿಗಳು ಗಮನಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪ್ರವಾಹದಿಂದ ಸಂತ್ರಸ್ತರಾಗುವ ನಿವಾಸಿಗಳಿಗೆ ಅಗತ್ಯ ಕಾಳಜಿ ಕೇಂದ್ರಗಳನ್ನು ತೆರೆಯುವ ಸಿದ್ಧತೆ ಬಗ್ಗೆ ಪೂರ್ವ ತಯಾರಿಯ ಬಗ್ಗೆ ನೋಡಲ್ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಚರ್ಚಿಸಿದರು.
ನೋಡಲ್ ಅಧಿಕಾರಿಗಳು, ಗ್ರಾಮಗಳ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಗ್ರ ಮಾಹಿತಿಯನ್ನು ಕಲೆಹಾಕಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕಾವೇರಿ ನದಿ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದ ಹಾರಂಗಿ ಅಣೆಕಟ್ಟೆ ವಿಭಾಗದ ಕಾರ್ಯಪಾಲಕ ಅಭಿಯಂತರ ಬಿ.ಜೆ ಪುಟ್ಟಸ್ವಾಮಿ, ನದಿ ನಿರ್ವಹಣೆಗಾಗಿ ವೀರಾಜಪೇಟೆ ಶಾಸಕರ ಅನುದಾನ ಅಡಿಯಲ್ಲಿ ರೂ. ೫೦ ಕೋಟಿ ಬಿಡುಗಡೆಯಾಗಿದ್ದು ಸರ್ವೆ ಕಾರ್ಯ ನಡೆದಿದೆ. ಟೆಂಡರ್ ಪ್ರಕ್ರಿಯೆ ಇನ್ನಷ್ಟೇ ಆಗಬೇಕಿದೆ ಎಂದು ಮಾಹಿತಿ ಒದಗಿಸಿದರು. ನದಿಯ ಹೂಳು ತೆರವುಗೊಳಿಸಿ ಪ್ರವಾಹ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವAತೆ ಜಿಲ್ಲಾಧಿಕಾರಿಗಳು ತಿಳಿಸಿದರು. ಅಪಾಯಕಾರಿ ಮರಗಳ ತೆರವು ಕಾರ್ಯ ನಡೆಸುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಮಾಹಿತಿ ಕೊರತೆಯೊಂದಿಗೆ ಸಭೆಗೆ ಆಗಮಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವನಾಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಾಸ್ತವ ಸ್ಥಿತಿಗತಿ ಬಗ್ಗೆ ವರದಿ ನೀಡುವಂತೆ ಸೂಚಿಸಿದರು.
ನದಿ ಸನಿಹದಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಆದೇಶಿಸಿದರು.
ಕಳೆದ ವರ್ಷ ಮಳೆಗಾಲದಲ್ಲಿ ಉಂಟಾಗಿರುವ ಹಾನಿಗಳು, ಮಾನವ, ಪ್ರಾಣಿಗಳ ಜೀವ ಹಾನಿ, ಮತ್ತಿತರ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಜಿಲ್ಲೆಯಲ್ಲಿ ಕೆರೆಗಳ ಸಂರಕ್ಷಣೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದ ಜಿಲ್ಲಾಧಿಕಾರಿ ಸೋಮಶೇಖರ್, ತಹಶೀಲ್ದಾರ್ ಮೂಲಕ ವರದಿ ಸಲ್ಲಿಸುವಂತೆ ಹೇಳಿದರು.
ವಿದ್ಯುತ್ ನಿಗಮದ ತಾಲೂಕುಗಳ ವ್ಯಾಪ್ತಿಯಲ್ಲಿ ಸಿಬ್ಬಂದಿಗಳ ಕೊರತೆ ಬಗ್ಗೆ ಸಂಬAಧಿಸಿದ ಅಧಿಕಾರಿಗಳ ಮೂಲಕ ಮಾಹಿತಿ ಬಯಸಿದ ಜಿಲ್ಲಾಧಿಕಾರಿಗಳು, ಮಳೆಗಾಲದಲ್ಲಿ ಯಾವುದೇ ರೀತಿಯ ಅವಘಡ ಸಂಭವಿಸದAತೆ ಎಚ್ಚರ ವಹಿಸಬೇಕು ಎಂದರು.
ಲೋಕೋಪಯೋಗಿ ಇಲಾಖೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ ಮತ್ತು ಅಂಗನವಾಡಿ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಮಳೆಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದAತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಸಭೆಯಲ್ಲಿ ಉಪಸ್ಥಿತರಿದ್ದರು.
ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಕೃಷ್ಣಮೂರ್ತಿ, ಕುಶಾಲನಗರ ತಾಲೂಕು ಪಂಚಾಯಿತಿ ನೂತನ ಕಾರ್ಯನಿರ್ವಹಣಾಧಿಕಾರಿ ಕೆ.ಸಿ. ಅಪ್ಪಣ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.