ಮಡಿಕೇರಿ, ಜೂ. ೩: ಬೇಸಿಗೆಯ ಅವಧಿ ಮುಗಿದಿದ್ದು, ಇದೀಗ ವಾಡಿಕೆಯಂತೆ ಮುಂಗಾರುಮಳೆ ಆರಂಭವಾಗುವ ಸನ್ನಿವೇಶ ಎದುರಾಗಿದೆ. ಪ್ರಸ್ತುತ ಕೊಡಗು ಜಿಲ್ಲೆಗೆ ಮುಂಗಾರು ಇನ್ನೂ ಕಾಲಿಟ್ಟಿಲ್ಲ ಎನ್ನಬಹುದಾದರೂ ನಿಧಾನಗತಿಯಲ್ಲಿ ಮುಂಗಾರಿನ ಲಕ್ಷಣಗಳು ಕಂಡುಬರುತ್ತಿವೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಆಗಾಗ್ಗೆ ಮಳೆಯೂ ಸಣ್ಣಪ್ರಮಾಣದಲ್ಲಿ ಬೀಳುತ್ತಿದೆ.

ಇದರ ನಡುವೆಯೇ ಒಂದಷ್ಟು ಸಮಯ ಬಿಸಿಲಿನ ವಾತಾವರಣವೂ ಎದುರಾಗುತ್ತಿದೆ. ಮಳೆ..ಬಿಸಿಲು.. ಮೋಡದ ವಾತಾವರಣ ಜಿಲ್ಲೆಗೆ ಮುಂಗಾರು ಆರಂಭದ ಚಿತ್ರಣವನ್ನು ನೆನಪಿಸುತ್ತಿದೆ. ಇದೀಗ ಆಗಾಗ್ಗೆ ಮಳೆ ಬೀಳುತ್ತಿದ್ದರೂ ನೈಜ ಮುಂಗಾರಿನAತೆ ನಿರಂತರ ಮಳೆಯಾಗುತ್ತಿಲ್ಲ. ಈ ನಡುವೆ ಕಳೆದ ಎರಡು-ಮೂರು ದಿನಗಳಿಂದ ಅಲ್ಲಲ್ಲಿ ಸಿಡಿಲಿನ ಅಬ್ಬರಕ್ಕೆ ಜನರು ಬೆಚ್ಚುವಂತಾಗಿದೆ. ಜತೆಗೆ ಕೆಲವೆಡೆ ಭಾರೀ ಗಾಳಿಯೊಂದಿಗೆ ರಭಸದ ಮಳೆಯಿಂದಲೂ ಒಂದಷ್ಟು ಕಡೆ ಹಾನಿಯಾಗಿರುವ ಬಗ್ಗೆಯೂ ವರದಿಯಾಗಿದೆ. ಇದೀಗ ಜನತೆಯೂ ಮುಂಗಾರಿನ ಅವಧಿಯನ್ನು ಎದುರಿಸಲು ಪೂರ್ವ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ.