ಮಡಿಕೇರಿ, ಜೂ. ೩ : ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಆಶ್ರಯದಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕರ ಬೇಡಿಕೆಯ ಮೇರೆಗೆ ಗೋಣಿಕೊಪ್ಪದಲ್ಲಿ ಮಾವು ಮೇಳವನ್ನು ತಾ. ೦೫ ರಿಂದ ೭ ರವರೆಗೆ ೩ ದಿನಗಳ ಕಾಲ ಆಯೋಜಿಸಲಾಗಿದೆ.
ತಾ. ೫ ರಂದು ಬೆಳಗ್ಗೆ ೧೧ ಗಂಟೆಗೆ ಗೋಣಿಕೊಪ್ಪದ ಬಸ್ ನಿಲುಗಡೆ ಸಮೀಪದ ಗ್ರಾಮ ಪಂಚಾಯಿತಿ ಮಳಿಗೆಯಲ್ಲಿ ಮೇಳದ ಉದ್ಘಾಟನೆ ನಡೆಯಲಿದೆ. ಈ ಮೇಳವನ್ನು ರಾಸಾಯನಿಕ ಮುಕ್ತ ಹಾಗೂ “ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳು” ಮತ್ತು ರೈತರಿಂದ ನೇರ ಗ್ರಾಹಕರಿಗೆ ಎಂಬ ಪರಿಕಲ್ಪನೆಯಡಿ ರೂಪಿಸಲಾಗಿದೆ. ಮಾವು ಪ್ರಿಯರಿಗೆ ಮಾವಿನ ಹಣ್ಣಿನ ವಿವಿಧ ತಳಿಗಳಾದ ಮಲಗೋವ, ಸಿಂಧೂರ, ರಸಪುರಿ, ತೋತಪುರಿ, ಬಾದಾಮಿ, ಮಲ್ಲಿಕ, ದಶೇರಿ, ಇಮಾಮ್ ಪಸಂದ್, ಸಕ್ಕರೆ ಗುತ್ತಿ ಇತರೆ ತಳಿಗಳ ಜೊತೆ ಸ್ಥಳೀಯ ಹಣ್ಣುಗಳನ್ನು ಗ್ರಾಹಕರಿಗೆ ಯೋಗ್ಯ ಬೆಲೆಗೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.