(ವಿಶೇಷ ವರದಿ : ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಜೂ. ೨: ಕಳೆದ ೩೦ಕ್ಕೂ ಅಧಿಕ ವರ್ಷಗಳಿಂದ ಕಾಡಾನೆಗಳ ಉಪಟಳಕ್ಕೆ ಬೇಸತ್ತಿದ್ದ ಪೊನ್ನಂಪೇಟೆ ತಾಲೂಕಿನ ತಿತಿಮತಿ, ದೇವರಪುರ ಪಂಚಾಯಿತಿ ವ್ಯಾಪ್ತಿಯ ದೇವಮಚ್ಚಿ, ಅಕ್ಕೆಮಾಳ, ಕಾರೆಹಡ್ಲು ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ಸನ್ನಿಹಿತವಾಗಿದ್ದು, ಪ್ರಸ್ತುತ ಸಾಲಿನಿಂದಲೇ ಪಾಳುಬಿಟ್ಟಿರುವ ಭತ್ತದ ಗದ್ದೆಗಳಲ್ಲಿ ಕೃಷಿ ಮಾಡುವ ಅವಕಾಶ ದೊರಕುವ ನಿರೀಕ್ಷೆಯಿದೆ.
ಕಾಡಾನೆಗಳ ನಿರಂತರ ಉಪಟಳವನ್ನು ನಿಯಂತ್ರಿಸುವ ಸಲುವಾಗಿ ಅರಣ್ಯ ಪ್ರದೇಶದಿಂದ ಜನವಸತಿ ಪ್ರದೇಶವಾದ ದೇವಮಚ್ಚಿ, ಅಕ್ಕೆಮಾಳ, ಕಾರೆಹಡ್ಲು ಸೇರಿದಂತೆ ಸುತ್ತಮುತ್ತಲಿನ ಭಾಗಕ್ಕೆ ನಿರಂತರವಾಗಿ ಲಗ್ಗೆ ಇಡುತ್ತಿದ್ದ ಕಾಡಾನೆಗಳ ಹಿಂಡಿನ ನಿಯಂತ್ರಣಕ್ಕೆ ಇದೀಗ ನೂತನ ರೈಲ್ವೇ ಬ್ಯಾರಿಕೇಡ್ ಅಳವಡಿಕೆ ಸಹಕಾರಿ ಆಗಲಿದೆ.
ಕಾಡಾನೆಗಳು ಅರಣ್ಯ ಪ್ರದೇಶದಿಂದ ಜನವಸತಿ ಪ್ರದೇಶಕ್ಕೆ ಯಾವುದೇ ಅಡ್ಡಿ ಇಲ್ಲದೆ ಲಗ್ಗೆ ಇಡುತ್ತಿದ್ದ ಬಾಳುಮಾನಿ, ಸೊಳ್ಳೆಕಾಡು ಅರಣ್ಯದಂಚಿನ ಪ್ರದೇಶದಿಂದ ದೇವಮಚ್ಚಿ, ಅಕ್ಕೆಮಾಳದವರೆಗೂ ನೂತನ ರೈಲ್ವೇ ಬ್ಯಾರಿಕೇಡ್ ಅಳವಡಿಕೆ ಕಾಮಗಾರಿ ಭರದಿಂದ ಸಾಗುತ್ತಿದೆ. ಇದರಿಂದಾಗಿ ಅರಣ್ಯದಿಂದ ಕಾಡಾನೆಗಳು ನಾಡಿಗೆ ಲಗ್ಗೆಇಡದಂತೆ ಎಚ್ಚರ ವಹಿಸಲಾಗುತ್ತಿದೆ.
ಕಳೆದ ೨ ವರ್ಷಗಳ ಹಿಂದೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಅವರ ಬಳಿ ಗ್ರಾಮದ ಜನತೆ, ಕಾಡಾನೆಗಳ ನಿರಂತರ ಉಪಟಳದಿಂದ ಸ್ಥಳೀಯ ರೈತರಿಗೆ, ಕೂಲಿ ಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಅಳಲನ್ನು ತೋಡಿಕೊಂಡಿದ್ದರು. ನಂತರ ಶಾಸಕ ಪೊನ್ನಣ್ಣ ದೇವಮಚ್ಚಿ ಪ್ರದೇಶಕ್ಕೆ ಭೇಟಿ ನೀಡುವ ಮೂಲಕ ಅಲ್ಲಿಯ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಗ್ರಾಮಸ್ಥರು ಅಕ್ಕೆಮಾಳದಿಂದ ಬಾಳುಮನೆಯ ಸೊಳ್ಳೆಕಾಡಿನವರೆಗೂ ರೈಲ್ವೇ ಬ್ಯಾರಿಕೇಡ್ ಅಳವಡಿಸಿದ್ದಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಗ್ರಾಮಸ್ಥರ ಅಹವಾಲು ಸ್ವೀಕರಿಸಿದ್ದ ಶಾಸಕ ಪೊನ್ನಣ್ಣ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ತಿತಿಮತಿಯ ಅರಣ್ಯ ಪ್ರವಾಸಿ ಮಂದಿರದಲ್ಲಿ ತುರ್ತು ಸಭೆ ನಡೆಸುವ ಮೂಲಕ ರೈಲ್ವೇ ಬ್ಯಾರಿಕೇಡ್ ಅಳವಡಿಕೆಯ ಬಗ್ಗೆ ಚರ್ಚೆ ನಡೆಸಿದ್ದರು. ನಂತರ ಶಾಸಕರ ಅಭಿಪ್ರಾಯದಂತೆ ನಿಗದಿತ ಪ್ರದೇಶದಲ್ಲಿ ರೈಲ್ವೇ ಬ್ಯಾರಿಕೇಡ್ ಅಳವಡಿಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಯಿತು. ಇದೀಗ ೨ ವರ್ಷಗಳ ನಂತರ ರೈಲ್ವೇ ಬ್ಯಾರಿಕೇಡ್ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಕೆಲವೇ ದಿನಗಳಲ್ಲಿ ಈ ಕಾಮಗಾರಿ ಮುಕ್ತಾಯ ಕಾಣಲಿದೆ. ಅರಣ್ಯ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪ್ರದೇಶದಲ್ಲಿ ನುರಿತ ಸಿಬ್ಬಂದಿಗಳು ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಸುವ ಮೂಲಕ ಕಾಮಗಾರಿಯನ್ನು ನಿರ್ವಹಿಸುತ್ತಿದ್ದಾರೆ.
ದಕ್ಷಿಣ ಕೊಡಗಿನಲ್ಲಿ ನಿರಂತರ ವನ್ಯಜೀವಿ - ಮಾನವ ಸಂಘರ್ಷ ಆಗಿಂದ್ದಾಗ್ಗೆ ನಡೆಯುತ್ತಿದ್ದು, ಇದರ ಶಾಶ್ವತ ಪರಿಹಾರಕ್ಕೆ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕ ಪೊನ್ನಣ್ಣ ಹಲವು ಬಾರಿ ಸದನದಲ್ಲಿ ಗಂಭೀರ ಧ್ವನಿ ಎತ್ತಿದ್ದರು. ರೈಲ್ವೇ ಬ್ಯಾರಿಕೇಡ್ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ಅರಣ್ಯ ಸಚಿವರಲ್ಲಿ ಮನವಿ ಮಾಡಿದ್ದರು. ಬಜೆಟ್ನಲ್ಲಿ ಆನೆ - ಮಾನವ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಅನುದಾನವನ್ನು ಮೀಸಲಿಡಿಸುವ ಪ್ರಯತ್ನ ಮಾಡಿದ್ದರು.
ಇದೀಗ ಕಾಡಾನೆಗಳು ನಾಡಿಗೆ ಬರುವ ಪ್ರಮುಖ ಕಾರಿಡಾರ್ಗಳಲ್ಲಿ, ರೈಲ್ವೇ ಬ್ಯಾರಿಕೇಡ್ ನಿರ್ಮಾಣ ಮಾಡುವ ಮೂಲಕ ಆನೆ-ಮಾನವ ಸಂಘರ್ಷ ಕಡಿಮೆಯಾಗುವ ನಿರೀಕ್ಷೆಯಿದೆ.
ರೂ. ೨.೫೦ ಕೋಟಿ ವೆಚ್ಚದಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಮುಕ್ತಾಯ ಕಾಣಲಿದೆ.