ವೀರಾಜಪೇಟೆ, ಜೂ. ೨: ವೀರಾಜಪೇಟೆ ಗೋಣಿಕೊಪ್ಪ ಮುಖ್ಯ ರಸ್ತೆಯ ಬಿಟ್ಟಂಗಾಲ- ಶೆಟ್ಟಿಗೇರಿ ಜಂಕ್ಷನ್‌ನಲ್ಲಿ ನೂತನವಾಗಿ ನಿರ್ಮಿಸಲಾದ ಬಸ್ಸು ಪ್ರಯಾಣಿಕರ ತಂಗುದಾಣವನ್ನು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಲೋಕಾರ್ಪಣೆ ಮಾಡಿದರು.

ಬಹಳ ಬೇಡಿಕೆಯ ಮೇರೆಗೆ ಸ್ಥಳೀಯ ನಿವಾಸಿಗಳು ಹಾಗೂ ಸಮಾಜ ಸೇವಕರಾದ ಕಂಜಿತAಡ ಮಂದಣ್ಣ ಅವರು ತಮ್ಮ ಸ್ವಂತ ಇಚ್ಛೆಯಿಂದ ಸಾರ್ವಜನಿಕರಿಗಾಗಿ ಒಂದು ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಿ ತಮ್ಮ ಸಾಮಾಜಿಕ ಬದ್ದತೆಯನ್ನು ಮೆರೆದು ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಟ್ಟರು.

ಇದನ್ನು ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಉದ್ಘಾಟಿಸಿ ನಂತರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಸಬ್ ಕ ಸಾತ್ ಸಬ್ ಕ ವಿಕಾಸ್‌ನಂತೆ ತಮ್ಮ ಸ್ವಂತ ಇಚ್ಛೆಯಿಂದ ಸಾರ್ವಜನಿಕ ಸೇವೆಗೆ ಮುಂದಾದ ಮಂದಣ್ಣ ಅವರ ಸೇವೆ ಅಮೋಘವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ರಾಜ್ಯದ ಕಾಂಗ್ರೆಸ್ ಪಕ್ಷ ಜನರನ್ನು ಸುಳ್ಳು ಹೇಳಿ ವಂಚಿಸುತ್ತಿದೆ; ಮುಂದೆ ನಮ್ಮ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿಲನ್ ಗಣಪತಿ ಮಾತನಾಡಿ ಗ್ರಾಮ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಗೆ ಪೂರಕವಾಗಿ ಮಂದಣ್ಣ ಅವರು ಸೇವೆ ಸಲ್ಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ಜಾಗಕ್ಕೆ ಕಿತ್ತಾಟವಾಡುವ ಈ ಸಂದರ್ಭದಲ್ಲಿ ಅವಶ್ಯಕತೆ ಇರುವ ಜಾಗದಲ್ಲಿ ಉತ್ತಮ ತಂಗುದಾಣ ಲೋಕಾರ್ಪಣೆ ಮಾಡಿದ ಮಂದಣ್ಣ ಅವರು ಇತರರಿಗೆ ಮಾದರಿಯಾಗಿದ್ದಾರೆ. ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡಿದರೂ ಕೂಡ ಕಾಂಗ್ರೆಸ್ ಸರಕಾರ ಜನರಿಗೆ ಯಾವುದೇ ಅನುದಾನ ಬರುತ್ತಿಲ್ಲ ಎಂದು ಸುಳ್ಳು ಪ್ರಚಾರ ಮಾಡುವ ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾದ ಅಪ್ಪಂಡೇರAಡ ದಿನು, ವೀರಾಜಪೇಟೆ ಮಂಡಳ ಅದ್ಯಕ್ಷ ಸುವಿನ್ ಗಣಪತಿ, ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೂಕಚಂಡ ಪ್ರಸನ್ನ, ಮಂಡಳದ ಪ್ರದಾನ ಕಾರ್ಯದರ್ಶಿ ಅಜಿತ್ ಕರುಂಬಯ್ಯ, ಗಣೇಶ್ ಗೌಡ ಸೇರಿದಂತೆ ಹಲವಾರು ಮಂದಿ ಗ್ರಾಮಸ್ಥರು ಇದ್ದರು.