ಚೆಟ್ಟಳ್ಳಿ, ಜೂ. ೨: ಕುಶಾಲನಗರ ಅರಣ್ಯ ವಲಯದ ವತಿಯಿಂದ ಕಾಡಂಚಿನ ಗ್ರಾಮ ಗಳ ಜನರ ಬದುಕಿಗೆ ನೆರ ವಾಗುವ ಮಹತ್ವದ ಯೋಜನೆಗೆ ಚಾಲನೆ ನೀಡಲಾಗಿದೆ. ಆನೆಕಾಡು, ಅತ್ತೂರು, ದುಬಾರೆ ಹಾಗೂ ಮೀನುಕೊಲ್ಲಿ ಶಾಖಾ ವ್ಯಾಪ್ತಿಯ ಕಾಡಂಚಿನ ನಿವಾಸಿಗಳಿಗೆ ಜೇನು ಸಹಿತ ಜೇನು ಪೆಟ್ಟಿಗೆಗಳನ್ನು ವಿತರಿಸುವ ಮೂಲಕ ಅರಣ್ಯ ಇಲಾಖೆ ಜೇನು ಕೃಷಿ ಅಭಿವೃದ್ಧಿಗೆ ಒತ್ತು ನೀಡಿದೆ.
ದುಬಾರೆ ತೂಗುಸೇತುವೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಸಾಂಕೇತಿಕವಾಗಿ ಫಲಾನುಭವಿಗಳಿಗೆ ಜೇನು ಪೆಟ್ಟಿಗೆಗಳನ್ನು ವಿತರಿಸಿದ್ದರು. ಈ ವೇಳೆ ಸ್ಥಳೀಯ ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.
ಕಾಡಂಚಿನ ಪ್ರದೇಶಗಳಲ್ಲಿ ಕೃಷಿ ಅವಲಂಬಿತ ಜೀವನ ನಡೆಸುತ್ತಿರುವ ಕುಟುಂಬಗಳಿಗೆ ಪರ್ಯಾಯ ಆದಾಯದ ಮಾರ್ಗ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ಜೇನು ಕೃಷಿಯಿಂದ ಕಡಿಮೆ ಜಾಗದಲ್ಲಿ ಹೆಚ್ಚಿನ ಆದಾಯ ಗಳಿಸುವ ಸಾಧ್ಯತೆ ಇದ್ದು, ಮಹಿಳೆಯರು ಮತ್ತು ಯುವಕರಿಗೂ ಇದು ಉದ್ಯೋಗಾವಕಾಶವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಜೇನು ಕೃಷಿ ಕೇವಲ ಆರ್ಥಿಕ ಲಾಭಕ್ಕಷ್ಟೇ ಸೀಮಿತವಾಗದೇ ಪರಿಸರ ಸಂರಕ್ಷಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಜೇನು ನೊಣಗಳ ಸಂಚಾರದಿAದ ಪರಾಗಸ್ಪರ್ಶ ಹೆಚ್ಚಾಗಿ ಅರಣ್ಯ ಹಾಗೂ ಕೃಷಿ ಬೆಳೆಗಳ ಉತ್ಪಾದಕತೆ ಹೆಚ್ಚಾಗುವ ಸಾಧ್ಯತೆ ಇದೆ.
ಇದೇ ವೇಳೆ ಜೇನು ಪೆಟ್ಟಿಗೆಗಳ ಅಸ್ತಿತ್ವದಿಂದ ಕಾಡಾನೆಗಳ ಚಲನವಲನವನ್ನು ನಿಯಂತ್ರಿಸಲು ಸಹ ಸಹಕಾರಿಯಾಗಬಹುದು ಎಂಬ ನಿರೀಕ್ಷೆಯೂ ವ್ಯಕ್ತವಾಗಿದೆ. ಜೇನು ನೊಣಗಳ ಗುಂಪಿನ ಶಬ್ದ ಹಾಗೂ ಚಟುವಟಿಕೆಗಳಿಂದ ಆನೆಗಳು ಕೆಲವು ಪ್ರದೇಶಗಳಿಗೆ ಪ್ರವೇಶಿಸಲು ಹಿಂಜರಿಯುವ ಸಾಧ್ಯತೆ ಇರುವುದರಿಂದ, ಮಾನವ-ಆನೆ ಸಂಘರ್ಷ ಕಡಿಮೆಯಾಗುವುದೆಂದು ಮೀನುಕೊಲ್ಲಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಸಚಿನ್ ನಿಂಬಾಳ್ಕರ್ ಹೇಳುತ್ತಾರೆ.
ಕಾಡಂಚಿನ ಜನರ ಬದುಕು, ಪರಿಸರ ಸಂರಕ್ಷಣೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣ ಎಂಬ ಮೂರು ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ಕೈಗೊಂಡಿರುವ ಈ ಯೋಜನೆ ಗಮನ ಸೆಳೆಯುತ್ತಿದೆ.
- ಕರುಣ್ ಕಾಳಯ್ಯ