ಕುಶಾಲನಗರ, ಜೂ. ೨: ನದಿ - ಪರಿಸರ ಸಂರಕ್ಷಣೆ ಬಗ್ಗೆ ಗಮನ ಹರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಶಾಲನಗರ ಕಾವೇರಿ ಮಹಾಆರತಿ ಬಳಗ ಮತ್ತು ನಮಾಮಿ ಕಾವೇರಿ ಆಶ್ರಯದಲ್ಲಿ ನಡೆದ ೧೮೬ನೇ ಮಹಾಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನದಿ - ಕೆರೆ ತಟಗಳಲ್ಲಿ ಯಾವುದೇ ಶಾಶ್ವತ ಕಟ್ಟಡಗಳ ನಿರ್ಮಾಣ ಸಂದರ್ಭ ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ನದಿ ತಟಗಳ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ವಿಠಲ್ ಸಾಲಿಯಾನ್ ಮಾತನಾಡಿ, ಸ್ವಚ್ಛ ಕಾವೇರಿಯ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರಿಯಲಿದೆ ಎಂದರು.
ಕಾವೇರಿ ಆರತಿ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಚಕ ಕೃಷ್ಣಮೂರ್ತಿ ಭಟ್ ಕುಂಕುಮಾರ್ಚನೆ, ಅಷ್ಟೋತ್ತರ ನಂತರ ಕಾವೇರಿಗೆ ಆರತಿ ಬೆಳಗಿದರು.
ಇದೇ ಸಂದರ್ಭ ಸೇವಾ ನಿವೃತ್ತಿ ಹೊಂದಿದ ತಾಲೂಕು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಮತ್ತು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಜಿಲ್ಲಾ ನಿರ್ದೇಶಕ ವಿಠಲ್ ಸಾಲಿಯಾನ್ ಅವರುಗಳನ್ನು ಆರತಿ ಬಳಗದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಕಾವೇರಿ ರಿವರ್ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಂಡೆಪAಡ ಬೋಸ್ ಮೊಣ್ಣಪ್ಪ, ಉಪಾಧ್ಯಕ್ಷ ಡಿ.ಆರ್. ಸೋಮಶೇಖರ್, ಕಾವೇರಿ ಮಹಾಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಧರಣಿ ಸೋಮಯ್ಯ, ಕ್ಷೇತ್ರ ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಸೇವಾ ಪ್ರತಿನಿಧಿ ಜಯಲಕ್ಷ್ಮಿ, ನಿರ್ಮಲ ಮತ್ತಿತರರು ಇದ್ದರು.
ಹುಣ್ಣಿಮೆ ಅಂಗವಾಗಿ ಕುಶಾಲನಗರ - ಕೊಪ್ಪ ಗಡಿಭಾಗದ ಕಾವೇರಿ ಪ್ರತಿಮೆಗೆ ಅಭಿಷೇಕ ಮತ್ತು ಆರತಿ ಕಾರ್ಯಕ್ರಮ ಜರುಗಿದವು. ಅರ್ಚಕ ಪುರುಷೋತ್ತಮ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಭಕ್ತಾದಿಗಳಿಗೆ ಪ್ರಸಾದ ಮತ್ತು ಅನ್ನದಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಆಯೋಜಕರಾದ ರವೀಂದ್ರ ಪ್ರಸಾದ್, ಬಬೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್ ಎಸ್‌ಎಲ್‌ಎನ್ ವ್ಯವಸ್ಥಾಪಕ ನಿರ್ದೇಶಕ ಸಾತಪ್ಪನ್ ಮತ್ತಿತರರು ಇದ್ದರು.
ಕುಶಾಲನಗರ ಸಾಯಿ ಮಂದಿರದಲ್ಲಿ ಸತ್ಯನಾರಾಯಣ ಪೂಜೆ ಮತ್ತು ವಿಶೇಷ ಆರತಿ ಕಾರ್ಯಕ್ರಮಗಳು ಜರುಗಿದವು.