ಕುಶಾಲನಗರ, ಜೂ. ೧: ಕೊಡಗು ಜಿಲ್ಲೆಗೆ ಆಗಮಿಸಿ ತಂಗಿದ್ದ ಡಿಎಂಕೆ ಪಕ್ಷದ ಮುಖ್ಯಸ್ಥ ಹಾಗೂ ತಮಿಳುನಾಡು ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಪುತ್ರ ಹಾಗೂ ತಮಿಳುನಾಡು ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಹಾಗೂ ಕುಟುಂಬಸ್ಥರು ಕುಶಾಲನಗರದ ಮೂಲಕ ತಮಿಳುನಾಡಿಗೆ ಹಿಂತಿರುಗುವ ಸಂದರ್ಭ ಕುಶಾಲನಗರದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಮಾಡಲು ಸಿದ್ಧತೆ ನಡೆಸಿದ ಹಿನ್ನೆಲೆಯಲ್ಲಿ ಸ್ಟಾಲಿನ್ ಅವರನ್ನು ಪರ್ಯಾಯ ಮಾರ್ಗ ಮೂಲಕ ಜಿಲ್ಲೆಯಿಂದ ಪ್ರಯಾಣಿಸಲು ಪೊಲೀಸರು ಕ್ರಮ ಕೈಗೊಂಡ ಘಟನೆ ಸೋಮವಾರ ಬೆಳಿಗ್ಗೆ ನಡೆಯಿತು.

ಸ್ಟಾಲಿನ್ ಅವರು ಸನಾತನ ಧರ್ಮದ ತುಚ್ಚೀಕರಣ ಹೇಳಿಕೆ ನೀಡಿರುವುದನ್ನು ವಿರೋಧಿಸಿ ಕುಶಾಲನಗರದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಗುಡ್ಡೆಹೊಸೂರು, ಕುಶಾಲನಗರದ ಕೆಲವು ಕಡೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಲು ಸಿದ್ಧರಾಗಿದ್ದರು.

ವಿಷಯ ತಿಳಿದ ಪೊಲೀಸ್ ಅಧಿಕಾರಿಗಳು ಕುಶಾಲನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದರು.

ಈ ನಡುವೆ ಮಡಿಕೇರಿಯಿಂದ ಸಿದ್ದಾಪುರ ರಸ್ತೆ ಮೂಲಕ ಮಾಲ್ದಾರೆ ಮಾರ್ಗವಾಗಿ ಪಿರಿಯಾಪಟ್ಟಣದಿಂದ ಮೈಸೂರಿಗೆ ಪ್ರಯಾಣಿಸಲು ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಿ ಯಾವುದೇ ರೀತಿಯ ಅನಾನುಕೂಲ ಉಂಟಾಗದAತೆ ಎಚ್ಚರಿಕೆ ವಹಿಸಿದರು. ಮಾಜಿ ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಕುಟುಂಬ ಸದಸ್ಯರು ಕಳೆದ ನಾಲ್ಕು ದಿನಗಳ ಹಿಂದೆ ಕೊಡಗು ಜಿಲ್ಲೆಗೆ ಆಗಮಿಸಿದ್ದು ಜಿಲ್ಲೆಯ ರೆಸಾರ್ಟ್ ಒಂದರಲ್ಲಿ ತಂಗಿದ್ದರು.

ಜೆಡ್ ಕೆಟಗರಿ ಶ್ರೇಣಿಯ ಭದ್ರತೆ ಹೊಂದಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಕುಟುಂಬ ಸದಸ್ಯರು ಕುಶಾಲನಗರ ಮೂಲಕ ತೆರಳಬೇಕಾಗಿದ್ದು ಈ ಹಿನ್ನೆಲೆಯಲ್ಲಿ ಗಡಿಭಾಗದ ಕೊಪ್ಪ ಬಳಿ ಮೈಸೂರು ಜಿಲ್ಲೆಯ ವತಿಯಿಂದ ಎಲ್ಲಾ ರೀತಿಯ ಪ್ರೊಟೊಕಾಲ್ ಮತ್ತು ಅಗತ್ಯ ಭದ್ರತಾ ವಾಹನಗಳು ಬೆಳಗ್ಗಿನಿಂದಲೇ ಬಂದು ಕಾಯುತ್ತಿದ್ದ ದೃಶ್ಯ ಕಂಡು ಬಂದಿತ್ತು.

ಕುಶಾಲನಗರ ವ್ಯಾಪ್ತಿಯಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ ಮಾಹಿತಿ ತಿಳಿದ ಬೆನ್ನಲ್ಲೇ ಸ್ಟಾಲಿನ್ ಮತ್ತು ಕುಟುಂಬ ಸದಸ್ಯರಿಗೆ ಜಿಲ್ಲೆಯಿಂದ ಸಂಚರಿಸಲು ಪರ್ಯಾಯ ರಸ್ತೆ ಮಾರ್ಗ ಕಲ್ಪಿಸಿ ಯಾವುದೇ ರೀತಿಯ ಅನಾನುಕೂಲವಾಗದಂತೆ ಪೊಲೀಸರು ಯಶಸ್ವಿಯಾದರು.

ಪರ್ಯಾಯ ರಸ್ತೆ ಮೂಲಕ ಸ್ಟಾಲಿನ್ ಮತ್ತು ಕುಟುಂಬ ತೆರಳಿದ ಮಾಹಿತಿ ದೊರೆತ ನಂತರ ಕುಶಾಲನಗರದ ಹಿಂದೂಪರ ಸಂಘಟನೆಗಳ ಪ್ರಮುಖರಾದ ಸಂತೋಷ್ ಅಮೃತರಾಜ್, ಪ್ರಜ್ವಲ್ ಭಾಸ್ಕರ ನಾಯಕ್, ಪ್ರವೀಣ್, ಸುಮನ್ ಗೌಡ, ಎಂ.ಡಿ. ಕೃಷ್ಣಪ್ಪ ಸುಮನ್, ಡಾಲು ಮತ್ತಿತರರು ಕುಶಾಲನಗರ ಗಣಪತಿ ದೇವಾಲಯ ಮುಂಭಾಗ ಸ್ಟಾಲಿನ್ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.

ಈ ಸಂದರ್ಭ ಮಾತನಾಡಿದ ಅಮೃತರಾಜ್, ಸನಾತನ ಧರ್ಮವನ್ನು ಅವಹೇಳನ ಮಾಡುವ ಹೇಳಿಕೆ ನೀಡುವ ಸ್ಟಾಲಿನ್ ಅವರ ವಿರುದ್ಧ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.

ಕೇವಲ ಕೆಲವೇ ಮಂದಿಯ ಪ್ರತಿಭಟನೆಗೆ ಬೆದರಿದ ಸ್ಟಾಲಿನ್ ಬದಲಿ ರಸ್ತೆ ಮೂಲಕ ತೆರಳಿರುವುದು ಹಾಸ್ಯಾಸ್ಪದ ಎಂದರು. ಪ್ರಮುಖರಾದ ಎಂ.ಡಿ. ಕೃಷ್ಣಪ್ಪ ಮಾತನಾಡಿ, ಸನಾತನ ಹಿಂದು ಧರ್ಮವನ್ನು ಅವಹೇಳನ ಮಾಡುವ ಮನಸ್ಥಿತಿ ಬದಲಾಗಬೇಕು ಇಲ್ಲದಿದ್ದಲ್ಲಿ ಈ ರೀತಿಯಲ್ಲಿ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು. ಬೆಳಗ್ಗಿನಿಂದಲೇ ಕುಶಾಲನಗರ ಪಟ್ಟಣ ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಅವರ ನೇತೃತ್ವದಲ್ಲಿ ಪಟ್ಟಣ ಮತ್ತು ಸುತ್ತಮುತ್ತ ಮಡಿಕೇರಿ - ಕುಶಾಲನಗರ ಹೆದ್ದಾರಿ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಹೆಚ್ಚುವರಿಯಾಗಿ ಜಿಲ್ಲಾ ಸಶಸ್ತçದಳ ಪೊಲೀಸರನ್ನು ನಿಯೋಜಿಸಲಾಗಿತ್ತು. ಪರ್ಯಾಯ ರಸ್ತೆಯಲ್ಲಿ ಪ್ರಯಾಣಿಸಿದ ಹಿನ್ನೆಲೆಯಲ್ಲಿ ಮಾಹಿತಿ ದೊರೆತ ಮೈಸೂರಿನಿಂದ ಗಡಿಭಾಗಕ್ಕೆ ಆಗಮಿಸಿದ ಪ್ರೋಟೋಕಾಲ್ ವಾಹನಗಳು ಪಿರಿಯಾಪಟ್ಟಣಕ್ಕೆ ತೆರಳಬೇಕಾಯಿತು.