ಮಡಿಕೇರಿ, ಜೂ. ೧: ಮಡಿಕೇರಿ ಹೊರವಲಯದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳೀರ್ವರ ನಡುವೆ ಮಾರಾಮಾರಿ ನಡೆದಿದ್ದು, ಓರ್ವ ಮತ್ತೊಬ್ಬನಿಗೆ ಚೂರಿಯಿಂದ ಇರಿದ ಪರಿಣಾಮ ಗಂಭೀರ ಗಾಯಗೊಂಡಿರುವ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಟಿ. ಶೆಟ್ಟಿಗೇರಿಯ ನಾಲ್ವರು ಸಿವಿಲ್ ಪ್ರಕರಣದಲ್ಲಿ ಬಂದಿಗಳಾಗಿ ಕಾರಾಗೃಹ ಸೇರಿದ್ದರು. ಈ ಪೈಕಿ ಇಂದು ಹೇಮಂತ್ ಹಾಗೂ ರಾಜೇಶ್ ಎಂಬವರುಗಳ ನಡುವೆ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಜಗಳವೇರ್ಪಟ್ಟು ಮಾರಾಮಾರಿಯಾಗಿದೆ. ಈ ಸಂದರ್ಭ ರಾಜೇಶ್ ಚೂರಿಯಿಂದ ಹೇಮಂತ್‌ಗೆ ಇರಿದಿದ್ದಾನೆ. ಗಂಭೀರ ಗಾಯಕ್ಕೊಳಗಾಗಿರುವ ಹೇಮಂತ್‌ನನ್ನು ಕಾರಾಗೃಹದ ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.