ಮಡಿಕೇರಿ, ಮೇ ೩೧: ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿಯ ಪರಿಣಾಮ ಹಲವಾರು ರೀತಿಯಲ್ಲಿ ಜನಸಾಮಾನ್ಯರ ಬದುಕಿನ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತಿರುವ ಸನ್ನಿವೇಶ ಬಿಗಡಾಯಿಸುತ್ತಿದೆ. ಈಗಾಗಲೇ ಇಂಧನ - ತೈಲ ಬಿಕ್ಕಟ್ಟು ಸಮಸ್ಯೆ ಹೊಡೆತವುಂಟಾಗಿದ್ದು, ಅಡುಗೆ, ಅನಿಲ, ಪೆಟ್ರೋಲ್ - ಡೀಸಲ್ ದರದಲ್ಲಿ ಹೆಚ್ಚಳ ಸಂಕಷ್ಟ ಎದುರಾಗಿದೆ.
ಇದೀಗ ರಸಗೊಬ್ಬರಗಳ ಉತ್ಪಾದನೆ - ಪೂರೈಕೆಯಲ್ಲೂ ಕೆಲವಾರು ಸಮಸ್ಯೆಗಳು ಎದುರಾಗುತ್ತಿದ್ದು, ಇದು ರೈತರಿಗೆ ಹೊರೆಯಾಗುತ್ತಿದೆ. ಈ ತನಕ ರಸಗೊಬ್ಬರಕ್ಕೆ ಹೇಳಿಕೊಳ್ಳುವಷ್ಟರ ಮಟ್ಟಿಗೆ ಕೊರತೆಯಾಗಿರಲಿಲ್ಲವಾದರೂ ಇದೀಗ ರಸಗೊಬ್ಬರಕ್ಕೂ ಸಮಸ್ಯೆ ಎದುರಾಗುತ್ತಿರುವ ಬಗ್ಗೆ ವರದಿಯಾಗುತ್ತಿದೆ. ರಾಜ್ಯದ ಹಲವೆಡೆಗಳಲ್ಲಿ ಈಗಾಗಲೇ ಈ ಸಮಸ್ಯೆ ಉಂಟಾಗಿರುವ ಬಗ್ಗೆ ರೈತಾಪಿ ವರ್ಗಕ್ಕೆ ಅನುಭವವಾಗಿದೆ. ಕೊರತೆಯೊಂದಿಗೆ ಬೆಲೆಯಲ್ಲೂ ಕೆಲವು ಸಮಯದಿಂದ ನಿರಂತರವಾಗಿ ಬದಲಾವಣೆಯಾಗುತ್ತಿದೆ.
ಕೆಲವು ತಿಂಗಳುಗಳ ಹಿಂದೆ ಇದ್ದ ಬೆಲೆಗೂ ಈಗಿನ ಧಾರಣೆಗೂ ಸುಮಾರು ೨೦೦ ರಿಂದ ೫೦೦ ರೂ.ಗಳಿಗೂ ಮೇಲ್ಪಟ್ಟು ವ್ಯತ್ಯಾಸ ಕಂಡುಬರುತ್ತಿದೆ. ವಿವಿಧ ರೀತಿಯ ಗೊಬ್ಬರಗಳು, ಇದರೊಂದಿಗೆ ಹಲವು ರಾಸಾಯನಿಕ (ವಿಡಿಸೈಟ್, ಕಾಪರ್ ಸಲ್ಫೇಟ್ ಇತ್ಯಾದಿ)ಗಳಿಗೂ ದರ ಹೆಚ್ಚಳವಾಗುತ್ತಿದೆ. ಪ್ರಸ್ತುತ ಯೂರಿಯಾ, ಡಿಎಪಿಯಂತಹ ಗೊಬ್ಬರಗಳು ರೈತರಿಗೆ ಅಗತ್ಯಕ್ಕೆ ತಕ್ಕಂತೆ ಸಿಗುತ್ತಿಲ್ಲ. ಅಲ್ಲದೆ ರಸಗೊಬ್ಬರಕ್ಕೆ ಸಂಬAಧಿಸಿದAತೆ ಮಾರಾಟಗಾರರು ಹಾಗೂ ಖರೀದಿದಾರರೂ ಕೆಲವು ಕಠಿಣ ನಿಯಮಗಳನ್ನು ಪಾಲಿಸಬೇಕಾಗಿದೆ. ಅದರಲ್ಲೂ ಯೂರಿಯಾ ಗೊಬ್ಬರಕ್ಕೆ ಸಂಬAಧಿಸಿದAತೆ ಎಫ್ಐಡಿ ಕಡ್ಡಾಯವಾಗಿದೆ. ಒಂದು ಎಕರೆ ಆರ್ಟಿಸಿಗೆ ರೈತರಿಗೆ ಕೇವಲ ಒಂದು ಚೀಲ ಯೂರಿಯಾವನ್ನು ನೀಡಲಾಗುತ್ತಿದೆ. ಯೂರಿಯಾ ಸೇರಿದಂತೆ, ಇತರ ಗೊಬ್ಬರ ಪಡೆಯಲು ರೈತರು ಆಧಾರ್ ನಂಬರ್ ಸೇರಿದಂತೆ ಒಟಿಪಿಗೆ ಕಾಯಬೇಕಿರುವುದು, ಬಿಲ್ಲಿಂಗ್ ವೇಳೆ ಪರದಾಡಬೇಕಾಗಿದೆ. ಮಾರಾಟ ಕೇಂದ್ರಗಳಲ್ಲಿ ಎಫ್ಐಡಿಯಂತೆ ಬಿಲ್ಲಿಂಗ್ಗೆ ಹಲವು ಸಮಯ ಪ್ರಯತ್ನ ನಡೆಸಬೇಕಾಗಿರುವುದು ಸಾಮಾನ್ಯ ಎಂಬAತಾಗಿದೆ. ಯೂರಿಯಾ ಎಕರೆಗೆ ಒಂದು ಚೀಲ ಮಾತ್ರ ಸಿಗುತ್ತಿದ್ದರೆ, ಇದೀಗ ಡಿಎಪಿ ಗೊಬ್ಬರ ಕಂಪೆನಿಗಳಿAದ ಪೂರೈಕೆಯಾಗುತ್ತಿಲ್ಲ.
ಫ್ಯಾಕ್ಟಂಪಾಸ್, ೧೫:೧೫:೧೫, ೧೬:೧೬:೧೬, ೨೦:೨೦:೨೦, ಪೊಟ್ಸಾಷ್, ರಾಕ್ ಸಲ್ಫೇಟ್ನಂತಹ ಗೊಬ್ಬರಗಳು ಸದ್ಯಕ್ಕೆ ಲಭ್ಯವಿದೆಯಾದರೂ ಮಾರ್ಚ್ನಿಂದ ಬೆಲೆಯಲ್ಲಿ ಹೆಚ್ಚಳವಾಗುತ್ತಿರುವುದು ಮುಂದುವರಿದಿದೆ. ಪೆಟ್ರೋಲ್ - ಡೀಸೆಲ್ ದರದಲ್ಲೂ ಏರಿಕೆಯಾಗಿರುವುದರಿಂದ, ಸಾಗಾಟ ವೆಚ್ಚವೂ ಅಧಿಕವಾಗುತ್ತಿದೆ. ಇದು ಮಾತ್ರವಲ್ಲದೆ ಲೋಡಿಂಗ್, ಅನ್ಲೋಡಿಂಗ್ನಲ್ಲೂ ಕಾರ್ಮಿಕರ ಕೊರತೆ, ಹೆಚ್ಚಿನ ವೇತನದ ಬೇಡಿಕೆ ಕಂಡುಬರುತ್ತಿರುವ ಪರಿಸ್ಥಿತಿಯನ್ನೂ ರೈತರು ಎದುರಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗಲಿದೆಯೇ ವಿನಹ ಕಡಿಮೆಯಂತೂ ಆಗುವುದಿಲ್ಲ ಎಂದು ವಹಿವಾಟುದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ದರದಲ್ಲಿನ ವ್ಯತ್ಯಾಸ ಇನ್ನಿತರ ವೆಚ್ಚಗಳ ಕಾರಣ ಮಾರಾಟಗಾರರಿಗೆ ಸಿಗುತ್ತಿದ್ದ ಲಾಭಾಂಶವೂ ಕಡಿಮೆಯಾಗುತ್ತಿದೆ. ಜತೆಗೆ ಹಲವಾರು ನಿಯಮಗಳಿಂದ ಮಾರಾಟ ವ್ಯವಸ್ಥೆಗೂ ಸಮಸ್ಯೆಯಾಗುತ್ತಿದೆ ಎಂದು ಹಲವು ರಸಗೊಬ್ಬರ ವ್ಯಾಪಾರಿಗಳು ತಮ್ಮ ಅನುಭವ ಹಂಚಿಕೊAಡಿದ್ದಾರೆ. ಗೊಬ್ಬರ ಉತ್ಪಾದನೆಗೆ ಬೇಕಾದ ಕಚ್ಛಾವಸ್ತುಗಳು ಹೆಚ್ಚಾಗಿ ದೇಶಕ್ಕೆ ಆಮದಾಗಬೇಕಿರುವುದು ಈಗಿನ ಯುದ್ಧ ಪರಿಸ್ಥಿತಿಯಿಂದ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿರುವುದಾಗಿ ವಿಶ್ಲೇಷಿಸಲಾಗುತ್ತಿದೆ. ಪಶ್ಚಿಮ ಏಷ್ಯಾ ಸಂಘರ್ಷ ಹಾಗೂ ಈ ಹಿಂದಿನ ರಷ್ಯಾ - ಉಕ್ರೇನ್ ಯುದ್ಧದಿಂದಾಗಿ ಜಾಗತಿಕ ಅಡೆತಡೆಗಳು ಹೆಚ್ಚಾಗಿವೆ.