ಮಡಿಕೇರಿ, ಮೇ ೩೦: ಹಾಕಿ ಕರ್ನಾಟಕ ವತಿಯಿಂದ ಏರ್ಪಡಿಸಲಾಗಿರುವ ೧೬ ವರ್ಷದೊಳಗಿನ ಬಾಲಕಿಯರ ರಾಜ್ಯಮಟ್ಟದ ಹಾಕಿ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಹಾಸನ ಕ್ರೀಡಾ ಶಾಲಾ ತಂಡ ಚಾಂಪಿಯನ್ ಆಗಿ ಹೊಹೊಮ್ಮಿದೆ.
ಕೂಡಿಗೆ ಕ್ರೀಡಾ ಶಾಲಾ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡರೆ, ಮಡಿಕೇರಿ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯಿ) ತಂಡ ಮೂರನೇ ಸ್ಥಾನ ಗಳಿಸಿದೆ.
ಬೆಂಗಳೂರಿನ ಫೀ.ಮಾ. ಕೆ.ಎಂ. ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ಇಂದು ನಡೆದ ಅಂತಿಮ ಪಂದ್ಯಾವಳಿಯಲ್ಲಿ ಹಾಸನ ಕ್ರೀಡಾ ಶಾಲಾ ತಂಡ ಕೂಡಿಗೆ ಕ್ರೀಡಾಶಾಲಾ ತಂಡವನ್ನು ೩-೨ ಗೋಲುಗಳ ಅಂತರದಿAದ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತು. ಹಾಸನ ತಂಡದ ಪರ ಸರಸ್ವತಿ, ಅರಾಧ್ಯ, ಅನುಷ್ಯ ಗೋಲು ದಾಖಲಿಸಿದರೆ, ಕೂಡಿಗೆ ತಂಡದ ಪರ ದೇಚಮ್ಮ ೨ ಗೋಲು ಬಾರಿಸಿದರು.
ಇದಕ್ಕೂ ಮೊದಲು ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಮಡಿಕೇರಿ ಸಾಯಿ ತಂಡ ಹಾಕಿ ಬೆಳಗಾಂ ತಂಡವನ್ನು ೩-೦ ಗೋಲುಗಳ ಅಂತರದಿAದ ಸೋಲಿಸಿತು. ಸಾಯಿ ತಂಡದ ಪರ ನೀಲಮ್ಮ, ಮಟ್ಟಿ ಯದುಲ ಮೈಥಿಲಿ ಹಾಗೂ ಗೊಲ್ಲ ಸಾಯಿ ಭವ್ಯ ಗೋಲು ದಾಖಲಿಸಿದರು.ಹಾಕಿ ಬೆಳಗಾಂ ತಂಡ ನಾಲ್ಕನೇ ಬಹುಮಾನಕ್ಕೆ ಭಾಜನವಾಯಿತು.
ಪ್ಲೇಯರ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿಯನ್ನು ಕೂಡಿಗೆ ತಂಡದ ಯಶಿಕ ಪಡೆದುಕೊಂಡರೆ, ಬೆಸ್ಟ್ ಗೋಲ್‌ಕೀಪರ್ ಹಾಸನದ ಬಿಂದುಶ್ರೀ, ಬೆಸ್ಟ್ ಡಿಫೆಂಡರ್ ಕೂಡಿಗೆಯ ಸಿಂಚನ, ಬೆಸ್ಟ್ ಮಿಡ್ ಫೀಲ್ಡರ್ ಹಾಕಿ ಬೆಳಗಾಂನ ಅನುಶ್ರೀ, ಬೆಸ್ಟ್ ಫಾರ್ವರ್ಡ್ ಆಗಿ ಸಾಯಿ ಮಡಿಕೇರಿಯ ಶೇಖ್ ಸುಮಿಯ ಪಡೆದುಕೊಂಡರು. ಬೆಂಗಳೂರು ಚಿನ್ಮಯ ವಿದ್ಯಾಲಯ ತಂಡ ಫೇರ್ ಪ್ಲೇ ಪ್ರಶಸ್ತಿಗೆ ಭಾಜನವಾಯಿತು.