ಕುಶಾಲನಗರ, ಮೇ ೩೦: ಯಕ್ಷ ಮಿತ್ರ ಬಳಗ ಕುಶಾಲನಗರ, ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಉಡುಪಿ ಜಿಲ್ಲೆ ಸಿದ್ದಾಪುರದ ಯಕ್ಷ ರಾಘವ ಜನಸಾಲೆ ಪ್ರತಿಷ್ಠಾನದ ಸುಪ್ರಸಿದ್ಧ ಕಲಾವಿದರಿಂದ ನಾಲ್ಕನೇ ವರ್ಷದ ಯಕ್ಷಪ್ರದರ್ಶನ “ಪಾಪಣ್ಣ ವಿಜಯ ಗುಣ ಸುಂದರಿ ಮೀನಾಕ್ಷಿ ಕಲ್ಯಾಣ” ಪ್ರಸಂಗ ಕುಶಾಲನಗರದ ಕಲಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಬಿ.ಆರ್ ನಾಗೇಂದ್ರ ಪ್ರಸಾದ್, ಕಲೆ ಎನ್ನುವುದು ಬೇರೆ ಬೇರೆ ಪ್ರದೇಶಗಳಲ್ಲಿ, ಬೇರೆ ಬೇರೆ ಹೆಸರಿನಲ್ಲಿ ಪ್ರಾತಿನಿಧ್ಯ ವಹಿಸುತ್ತದೆ. ಆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಕರಾವಳಿ ಪ್ರದೇಶಗಳಲ್ಲಿ ಯಕ್ಷಗಾನ ಜನರ ಪ್ರೋತ್ಸಾಹದೊಂದಿಗೆ ಪ್ರಭಾವ ಬೀರುತ್ತಿದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ರಂಗ ಪ್ರಯೋಗಗಳ ಸಂಖ್ಯೆ ಪ್ರಮಾಣ ಕ್ಷೀಣಗೊಳ್ಳುತ್ತಿರುವುದು ಅದರ ನಡುವೆ ಇಂತಹ ಯಕ್ಷಗಾನ ಪ್ರದರ್ಶನವು ಕುಶಾಲನಗರ ಹಾಗೂ ಸುತ್ತಮುತ್ತಲ ಕಲೋಪಾಸಕರಿಗೆ ರಸದೌತಣವನ್ನು ನೀಡಿದಂತಾಗಿದೆ ಎಂದರು.
ದಿನನಿತ್ಯದ ಜಂಜಾಟದ ಜೀವನದ ನಡುವೆ ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳ ಅಗತ್ಯತೆ ಇದೆ ಎಂದು ಅವರು ಹೇಳಿದರು. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ನಾಗೇಶ್ ಕೆ.ಎಸ್ ವಹಿಸಿದ್ದರು. ಯಕ್ಷ ಮಿತ್ರ ಬಳಗದ ಗಿರೀಶ್ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಯಕ್ಷ ರಾಘವ ಜನಸಾಲೆ ಪ್ರತಿಷ್ಠಾನದ ನಿರ್ದೇಶಕರು, ಭಾಗವತರು ಆದ ರಾಘವೇಂದ್ರ ಆಚಾರ್ಯ, ರಾಮಕೃಷ್ಣ ಹೆಗಡೆ ಹಿಲ್ಲೂರು, ಕಥಾಪ್ರಸಂಗದ ನಾಯಕ ನಟ ನೀಲ್ಕೋಡು ಶಂಕರ ಹೆಗಡೆ, ಕುಶಾಲನಗರದ ಮಹಿಳಾ ಉದ್ಯಮಿ ಚಿತ್ರ ರಮೇಶ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಾಪಣ್ಣ ವಿಜಯ ಗುಣಸುಂದರಿ ಮತ್ತು ಮೀನಾಕ್ಷಿ ಕಲ್ಯಾಣ ಯಕ್ಷಗಾನ ಪ್ರಸಂಗದ ಕಲಾವಿದರು ಸುಮಾರು ಐದು ಗಂಟೆಗಳ ಕಾಲ ಪ್ರೇಕ್ಷಕ ಸಮುದಾಯವನ್ನು ತಮ್ಮ ನಟನೆಯ ಮೂಲಕ ರಂಜಿಸಿದರು.
ವಿಶೇಷವಾಗಿ ಕುರೂಪಿ, ಅಷ್ಟಾವಕ್ರ ಪಾತ್ರದ ಪಾಪಣ್ಣನಾಗಿ ರವೀಂದ್ರನಾಥ ದೇವಾಡಿಗ ಸಂದರ್ಭೋಚಿತ ಉತ್ತಮ ಪ್ರದರ್ಶನ ತೋರಿದರು. ಮಾತಿನ ಚಾತುರ್ಯದ ಗುಣಸುಂದರಿ ಪಾತ್ರಧಾರಿ ಸುಬ್ರಮಣ್ಯ ಹೆಗಡೆ, ದೂತ, ಹಾಸ್ಯ ಪಾತ್ರಧಾರಿ ಪುರಂದರ ಮೂಡ್ಕಣಿ ಅವರ ಅಭಿನಯ ಮತ್ತು ಮಾತುಗಾರಿಕೆ ಹಾಸ್ಯದ ಹೊನಲು ಸಹೃದಯ ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಿತು.
ದುರ್ಮುಖ- ದುರ್ಮತಿ ಪಾತ್ರಧಾರಿಗಳಾದ ಕಾರ್ತಿಕ ಕಣ್ಣಿಮನೆ, ಪವನ್ ಸಾಣ್ಮನೆ ಅವರ ರಂಜನೀಯ ವಿವಿಧ ಭಂಗಿಗಳ ನೃತ್ಯ ಅವರ ವೇಷಭೂಷಣಗಳು, ಶಶಾಂಕ ಆಚಾರ್ಯ ಅವರ ಮದ್ದಳೆ, ಪ್ರಜ್ವಲ್ ಮುಂಡಾಡಿ ಅವರ ಚಂಡೆ ವಾದ್ಯಗಳು ಪ್ರಸಂಗಕ್ಕೆ ಕಳೆ ತಂದವು.