ಸುಂಟಿಕೊಪ್ಪ, ಮೇ ೨೯: ಎಲ್ಲರೂ ಒಟ್ಟಾಗಿ ಕನ್ನಡವನ್ನು ಬೆಳೆಸುವಂತಾಗಬೇಕು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು.
ಸುಂಟಿಕೊಪ್ಪದ ಎಸ್.ಎಸ್. ಇಂಟರ್ ನ್ಯಾಷನಲ್ ಹಾಲ್‌ನ ಕವಿಶಿಷ್ಯ ಪಂಜೆ ಮಂಗೇಶರಾಯರ ವೇದಿಕೆಯಲ್ಲಿ ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ಪ್ರಧಾನ ಊರಾಗಿರುವ ಸುಂಟಿಕೊಪ್ಪದಲ್ಲಿ ಸರ್ವರ ಸಹಕಾರದಿಂದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲ್ಪಟ್ಟಿದೆ. ಕೊಡಗಿನಲ್ಲಿ ಸಾಹಿತ್ಯ ಪರವಾದ ಕಾರ್ಯಕ್ರಮಗಳು ಸಾಕಷ್ಟು ನಡೆಯುತ್ತಿದ್ದು, ಇದು ನಿರಂತರವಾಗಿ ಮುಂದುವರೆಯಬೇಕು ಎಂದು ರಮೇಶ್ ಆಶಯ ವ್ಯಕ್ತಪಡಿಸಿದರು.
ಅತಿಥಿಯಾಗಿದ್ದ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಬಹುಭಾಷೆಯ ನಾಡಾದ ಸುಂಟಿಕೊಪ್ಪದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸದ ವಿಚಾರ ಎಂದರಲ್ಲದೆ ಕನ್ನಡ ಕೇವಲ ಭಾಷೆ ಅಲ್ಲ; ಕನ್ನಡ ಎಂಬುದು ಬದುಕು ಮತ್ತು ಭಾವನೆಯಾಗಿದೆ ಎಂದು ಅಭಿಪ್ರಾಯಿಸಿದರು.
ಕ.ಸಾ.ಪ. ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕೆ ಹಾಗೂ ಸ್ವಾತಂತ್ರö್ಯಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಕೊಡಗಿನ ಗೌರಮ್ಮ ಅವರ ಮಣ್ಣಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಡಾ. ರೇಖಾ ವಸಂತ್ ಮಾತನಾಡಿ, ಪ್ರತಿಯೊಬ್ಬರಲ್ಲೂ ಕನ್ನಡ ಭಾಷೆಯ ಬಗ್ಗೆ ಪ್ರೀತಿ, ಅಭಿಮಾನವಿದ್ದರೆ ಕನ್ನಡ ಭಾಷೆಯು ನಿರಂತರವಾಗಿ ಬೆಳವಣಿಗೆ ಕಾಣುತ್ತದೆ ಎಂದರು.
ಹಿರಿಯ ಸಾಹಿತಿ ಎಂ.ಜಿ. ನಾಗರಾಜ್, ಕೊಡಗಿನ ನೆಲ-ಜಲ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನದ ಉದ್ದೇಶ ಹಾಗೂ ಆಶಯದ ಬಗ್ಗೆ ಮಾಹಿತಿಯಿತ್ತರು.
ವೇದಿಕೆಯಲ್ಲಿ ಜಿ.ಪಂ. ಮಾಜಿ ಸದಸ್ಯ ಪಿ.ಎಂ. ಲತೀಫ್, ಕ.ಸಾ.ಪ. ಗೌರವ ಕಾರ್ಯದರ್ಶಿ ರೇವತಿ ರಮೇಶ್, ಮುನೀರ್ ಅಹ್ಮದ್, ಮಡಿಕೇರಿ ತಾಲೂಕು ನಿಕಟ ಪೂರ್ವ ಅಧ್ಯಕ್ಷ ಅಂಬೇಕಲ್ ನವೀನ್, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಸಬಾಸ್ಟಿನ್, ಬೆಳೆಗಾರ ವಿಶಾಲ್ ಶಿವಪ್ಪ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್, ಇಓ ಪರಮೇಶ್, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಸಂತಮೇರಿ ಅಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ನಾಡಗೀತೆ ಗಾಯನ ಹಾಡಿದರೆ, ಕಲಾವಿದ ಬಿ.ಆರ್. ಸತೀಶ್ ಕನ್ನಡಾಂಬೆಯ ಚಿತ್ರ ಬಿಡಿಸಿದರು. ಕುಶಾಲನಗರದ ನಂಜುAಡ ಸ್ವಾಮಿ ತಂಡ ರೈತಗೀತೆ ಹಾಡಿತು. ಸುನಿತಾ ಗಿರೀಶ್, ವಿ.ಜಿ. ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು. ಎ. ಲೋಕೇಶ್ ಕುಮಾರ್ ಸ್ವಾಗತಿಸಿದರು. ಕೆ.ಎಸ್. ನಾಗೇಶ್ ವಂದಿಸಿದರು. ಬಳಿಕ ಕನ್ನಡ ಗೀತ ಗಾಯನ, ವಿಚಾರ ಗೋಷ್ಠಿ ಮತ್ತಿತರ ಕಾರ್ಯಕ್ರಮಗಳು ನಡೆದವು. ತಾ. ೩೦ ರಂದು (ಇಂದು) ಕೂಡ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಹಲವು ಕಾರ್ಯಕ್ರಮಗಳು ಬೆಳಿಗ್ಗಿನಿಂದ ಸಂಜೆಯವರೆಗೂ ನಡೆಯಲಿವೆ.