ಸೋಮವಾರಪೇಟೆ, ಮೇ ೨೯: ಲೋಕೋಪಯೋಗಿ ಇಲಾಖೆ ವತಿಯಿಂದ ಪ್ರಗತಿಯಲ್ಲಿರುವ ಮಾಗಡಿ-ಜಾಲ್ಸೂರು ರಾಜ್ಯ ಹೆದ್ದಾರಿಗೆ ಒಳಪಡುವ ಸೋಮವಾರಪೇಟೆ - ತೋಳೂರುಶೆಟ್ಟಳ್ಳಿ ರಸ್ತೆಯ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿರುವುದರಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ.
ರೂ. ೧೯ ಕೋಟಿ ವೆಚ್ಚದಲ್ಲಿ ಪಟ್ಟಣ ಸಮೀಪದ ಆಲೇಕಟ್ಟೆ ರಸ್ತೆಯಿಂದ ಕೂಡುರಸ್ತೆ, ಕಲ್ಕಂದೂರು, ಹೊಸಬೀಡು, ತೋಳೂರುಶೆಟ್ಟಳ್ಳಿ, ಇನಕನಹಳ್ಳಿವರೆಗಿನ ರಸ್ತೆಯನ್ನು ನೂತನವಾಗಿ ಕೈಗೊಳ್ಳಲಾಗುತ್ತಿದ್ದು, ಡಾಂಬರು ರಸ್ತೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಆಲೇಕಟ್ಟೆಯಿಂದ ಕೂಡುರಸ್ತೆ ಜಂಕ್ಷನ್‌ವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವ ಕಾರ್ಯ ಈಗಾಗಲೇ ವಿಳಂಬವಾಗಿ ಆರಂಭವಾಗಿದೆ.
ಕಾAಕ್ರಿಟ್ ಕಾಮಗಾರಿಗಾಗಿ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಬೇಕೆಂದು ಲೋಕೋಪಯೋಗಿ ಇಲಾಖೆಯ ಅಭಿಯಂತರರು ಮನವಿ ಮಾಡಿದ ಹಿನ್ನೆಲೆ, ಜಿಲ್ಲಾಧಿಕಾರಿಗಳು ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡುವಂತೆ ಆದೇಶ ನೀಡಿದ್ದಾರೆ.
ಏಕಕಾಲಕ್ಕೆ, ಪೂರ್ಣ ಅಗಲಕ್ಕೆ ‘ಪೇವರ್’ ಬಳಸಿ ಕಾಂಕ್ರಿಟಿಕರಣ ಮಾಡುವ ಬಗ್ಗೆ ತೀರ್ಮಾನಿಸಿದ್ದರೂ ಸಹ, ಇದೀಗ ಒಂದು ಬದಿಯಲ್ಲಿ ಮಾತ್ರ ಕಾಂಕ್ರಿಟ್ ಹಾಕಲಾಗುತ್ತಿದೆ. ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪ್ರಮುಖವಾಗಿ ಜಿಲ್ಲಾಧಿಕಾರಿಗಳು ಮೇ ೧೩ ರಿಂದ ಜೂನ್ ೧೨ ರವರೆಗೆ ಈ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಬಂದ್ ಮಾಡುವಂತೆ ಆದೇಶ ನೀಡಿದ್ದಾರೆ. ಈವರೆಗೆ ಒಂದು ಬದಿಯ ರಸ್ತೆಯೇ ನಿರ್ಮಾಣವಾಗಿಲ್ಲ. ಇನ್ನು ಇರುವ ೧೪ ದಿನದಲ್ಲಿ ರಸ್ತೆಯ ಮತ್ತೊಂದು ಬದಿ ನಿರ್ಮಾಣವಾಗಿ ‘ಕ್ಯೂರಿಂಗ್’ ಸಾಧ್ಯವೇ? ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ಈ ರಸ್ತೆಯನ್ನು ಅವಲಂಬಿಸಿರುವವರು ಶಾಂತಳ್ಳಿ, ತೋಳೂರುಶೆಟ್ಟಳ್ಳಿ ಭಾಗಕ್ಕೆ ತೆರಳಲು ಬದಲಿ ಮಾರ್ಗವಾಗಿ ಕಕ್ಕೆಹೊಳೆ ಜಂಕ್ಷನ್‌ನಿAದ ಹಾನಗಲ್ಲು ಮಾರ್ಗ ಹಾಗೂ ಆಲೇಕಟ್ಟೆಯಿಂದ ಹಾನಗಲ್ಲುಬಾಣೆ, ಹಾನಗಲ್ಲು ಶೆಟ್ಟಳ್ಳಿ ಮೂಲಕ ಯಡೂರು ಮಾರ್ಗವಾಗಿ ಸಂಚರಿಸಬಹುದಾಗಿದೆ.
ಈ ಎರಡೂ ರಸ್ತೆಗಳು ಕಿರಿದಾಗಿದ್ದು, ಬೃಹತ್ ವಾಹನಗಳು ಆಗಮಿಸುವ ಸಂದರ್ಭ ಸ್ಥಳಾವಕಾಶ ನೀಡಲು ಸಾಧ್ಯವಾಗದೇ ಅವಘಡಗಳು ಸಂಭವಿಸುತ್ತಿವೆ. ಇದರೊಂದಿಗೆ ಗ್ರಾಮೀಣ ಪ್ರದೇಶದ ರಸ್ತೆಯಾಗಿರುವುದರಿಂದ ನಿರ್ವಹಣೆಯ ಕೊರತೆಯಿಂದಾಗಿ ಈಗಾಗಲೇ ಗುಂಡಿಗಳು ಬಿದ್ದಿವೆ.
ಮಳೆ ಆರಂಭವಾಗುವದರೊಳಗೆ ಕಾಂಕ್ರಿಟೀಕರಣ ಮುಕ್ತಾಯಗೊಳ್ಳದಿದ್ದರೆ ಗ್ರಾಮೀಣ ಭಾಗದ ಈ ಎರಡೂ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಲಿವೆ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.
ಇತ್ತ ಕಾಂಕ್ರಿಟಿಕರಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಮತ್ತೊಂದೆಡೆ ವಾಹನಗಳ ಸಂಚಾರಕ್ಕೂ ಅವಕಾಶ ಮಾಡಿಕೊಡಲಾಗಿದೆ. ಇದರಿಂದಾಗಿ ರಸ್ತೆಯ ಅಕ್ಕಪಕ್ಕ ಇರುವ ಮನೆಗಳು ಧೂಳಿನಿಂದ ಆವೃತ್ತವಾಗುತ್ತಿವೆ. ಲೋಕೋಪಯೋಗಿ ಇಲಾಖೆಯ ಅಭಿಯಂತರರು ಈ ಬಗ್ಗೆ ಗಮನ ಹರಿಸಿ ಕಾಮಗಾರಿಗೆ ವೇಗ ನೀಡಲು ಗುತ್ತಿಗೆದಾರರಿಗೆ ಸೂಚಿಸಬೇಕೆಂದು ಸ್ಥಳೀಯರು ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ.