ಶನಿವಾರಸಂತೆ, ಮೇ. ೨೮: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಅರಿವು ಕೇಂದ್ರದಲ್ಲಿ ೧೫ ದಿನಗಳಿಂದ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಸಮಾರಂಭವನ್ನು ಉದ್ಘಾಟಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಷಾ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಮಕ್ಕಳನ್ನು ಆಕರ್ಷಿಸಲು ಗ್ರಂಥಾಲಯ ಮತ್ತು ಅರಿವು ಕೇಂದ್ರದಲ್ಲಿ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಚಿಣ್ಣರನ್ನು ಗ್ರಂಥಾಲಯದೆಡೆಗೆ ಆಕರ್ಷಿಸಲು ಗ್ರಂಥಾಲಯದಲ್ಲಿ ಕಲೆ, ಸಾಹಿತ್ಯ, ನೃತ್ಯ, ಜನಪದ ಗೀತೆ, ಗಾಯನ, ಸಂವಿಧಾನ ಪೀಠಿಕೆ, ಗ್ರಾಮೀಣ ಆಟ ಮತ್ತಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದರು. ಗ್ರಂಥಾಲಯ ಮೇಲ್ವಿಚಾರಕಿ ಎಸ್.ಪಿ. ದಿವ್ಯಾ ಮಾರ್ಗದರ್ಶನದಲ್ಲಿ ಮಕ್ಕಳು ಗ್ರಂಥಾಲಯ ಮಾದರಿ, ಪ್ಲವರ್ ವಾಜ್, ಲೈಬ್ರರಿ ಟ್ರೀ, ಚಿತ್ರಕಲೆ, ಗ್ರಾಮೀಣ ಆಟಗಳು, ಗೀತಗಾಯನದಿಂದ ಮೆಚ್ಚುಗೆ ಗಳಿಸಿದರು.ಗಾಯಕಿ ನಳಿನಿ ನಾಗರಾಜ್ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡು ಮಕ್ಕಳಿಗೆ ಭಕ್ತಿಗೀತೆ ಮತ್ತು ಭಾವಗೀತೆಗಳನ್ನು ಕಲಿಸಿದರು.
ಸಮಾರಂಭದಲ್ಲಿ ಅತಿಥಿಗಳು ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಸಿಹಿಹಂಚಿ, ಪ್ರಶಸ್ತಿ ಪತ್ರದ ಜೊತೆಗೆ ಬಹುಮಾನ ವಿತರಿಸಿದರು. ಪಂಚಾಯಿತಿ ಸಿಬ್ಬಂದಿ ಪೂರ್ಣಿಮಾ, ವೀಣಾ, ಶ್ರೀದೇವಿ, ಭಾರತಿ ಇತರರು ಹಾಜರಿದ್ದರು.