ವರದಿ : ಚಂದ್ರಮೋಹನ್

ಕುಶಾಲನಗರ, ಮೇ ೨೪: ದುಬಾರೆ ಆನೆ ಶಿಬಿರದಲ್ಲಿ ಇತ್ತೀಚೆಗೆ ಎರಡು ಆನೆಗಳ ಕಾದಾಟದಲ್ಲಿ ಪ್ರವಾಸಿ ಮಹಿಳೆ ಮೃತಪಟ್ಟ ಘಟನೆ ಬೆನ್ನಲ್ಲೇ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಪ್ರವಾಸಿಗರ ಸುರಕ್ಷತೆಗೆ ಹಲವು ಮಹತ್ವದ ಆದೇಶ ಹೊರಡಿಸಿದ್ದಾರೆ.

ಪ್ರವಾಸಿಗರ ಸುರಕ್ಷತೆಗೆ ಎಸ್‌ಓಪಿ ನಿಯಮಗಳು ಜಾರಿಗೆ ಬರುವ ತನಕ ದುಬಾರೆ ಆನೆ ಶಿಬಿರ ಸೇರಿದಂತೆ ರಾಜ್ಯದ ಎಲ್ಲಾ ಆನೆ ಶಿಬಿರಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದಾರೆ.

ಈ ನಡುವೆ ತೆರೆದ ವಾಹನ ಸಫಾರಿ ಕಾರ್ಯಕ್ರಮಗಳನ್ನು ಕೂಡ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಆದರೆ ದುಬಾರೆ ಶಿಬಿರದ ಒತ್ತಿನಲ್ಲಿರುವ ಜಂಗಲ್ ಲಾಡ್ಜನ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಪ್ರವಾಸಿಗರನ್ನು ತೆರೆದ ವಾಹನಗಳಲ್ಲಿ ಸಫಾರಿ ಕರೆದುಕೊಂಡು ಹೋಗುತ್ತಿರುವುದು ಮುಂದುವರೆದಿದೆ. ದುಬಾರೆಯ ಜಂಗಲ್ ರೆಸಾರ್ಟ್ನಲ್ಲಿ ಒಟ್ಟು ೧೮ ಕೊಠಡಿಗಳಿದ್ದು, ವಾರಾಂತ್ಯ ಹಿನ್ನೆಲೆಯಲ್ಲಿ ಎಲ್ಲಾ ಕೊಠಡಿಗಳು ಅತಿಥಿಗಳಿಂದ ಭರ್ತಿಗೊಂಡಿರುವುದನ್ನು ಕಾಣಬಹುದು. ಈ ಪ್ರವಾಸಿ ಕೇಂದ್ರದಲ್ಲಿ ಸಫಾರಿ ತೆರಳಲು ಒಟ್ಟು ೮ ತೆರೆದ ಜೀಪ್‌ಗಳು ಲಭ್ಯವಿದ್ದು, ದಿನನಿತ್ಯ ಬೆಳಗ್ಗೆ ಒಂದು ಗಂಟೆಗಳ ಕಾಲ ಮತ್ತು ಸಂಜೆ ವೇಳೆ ೨ ಗಂಟೆಗಳ ಅವಧಿ ಸಫಾರಿ ವಾಹನಗಳ ಮೂಲಕ ಅಂದಾಜು ೨೫ ಕಿಲೋಮೀಟರ್ ದೂರದವರೆಗೆ ವನ್ಯಜೀವಿಗಳ ವೀಕ್ಷಣೆಗಾಗಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಜಂಗಲ್ ಲಾಡ್ಜ್ನಲ್ಲಿ ಉಳಿದುಕೊಂಡಿರುವ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತಿದೆ.

ಈ ಸಂದರ್ಭ ದುಬಾರೆ ಮೀಸಲು ಅರಣ್ಯದಲ್ಲಿ ಹುಲಿ, ಚಿರತೆ, ಕಾಡಾನೆಗಳು ಸೇರಿದಂತೆ ಎಲ್ಲಾ ರೀತಿಯ ವನ್ಯಮೃಗಗಳು ಸಂಚರಿಸುವುದು ವಾಡಿಕೆ. ನಾಗರಹೊಳೆ ಬಂಡೀಪುರ ಅರಣ್ಯಗಳಲ್ಲಿ ಇರುವಂತೆ ಈ ಅರಣ್ಯದಲ್ಲಿ ಕೂಡ ಹುಲಿ, ಆನೆ, ಚಿರತೆ ಸೇರಿದಂತೆ ಹಲವು ಅಪಾಯಕಾರಿ ವನ್ಯಜೀವಿಗಳ ಓಡಾಟ ನಿರಂತರವಾಗಿ ಗೋಚರಿಸುತ್ತಿದೆ ಎನ್ನುವುದು ಅಧಿಕಾರಿಗಳ ಮಾಹಿತಿಯಾಗಿದೆ.

ಸಫಾರಿ ವಾಹನಗಳಿಗೆ ಸರಳು ಅಥವಾ ಗಟ್ಟಿ ಗಾಜು ಕಡ್ಡಾಯ ಎನ್ನುವ ಆದೇಶವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಹೊರಡಿಸಿದ್ದರೂ ದುಬಾರೆಯ ಜಂಗಲ್ ಲಾಡ್ಜ್ ಅಧಿಕಾರಿ, ಸಿಬ್ಬಂದಿಗಳು ಮಾತ್ರ ಯಾವುದೇ ಮುನ್ನೆಚ್ಚರಿಕೆ ವಹಿಸದೆ ದಿವ್ಯ ಮೌನ ವಹಿಸಿರುವುದು ಸ್ಥಳೀಯರಲ್ಲಿ ಅಚ್ಚರಿ ಉಂಟು ಮಾಡಿದೆ. ಈ ಬಗ್ಗೆ ‘ಶಕ್ತಿ’ ದುಬಾರೆ ಜಂಗಲ್ ಲಾಡ್ಜ್ನ ಅಧಿಕಾರಿಗಳನ್ನು ಸಂಪರ್ಕಿಸಿದ ಸಂದರ್ಭ ತಮಗೆ ಯಾವುದೇ ರೀತಿಯ ಆದೇಶ ಬಂದಿರುವುದಿಲ್ಲ. ನಮ್ಮಲ್ಲಿ ಪ್ರವಾಸಿಗರು ಬೆಳಗ್ಗೆ ಮತ್ತು ಸಂಜೆ ವೇಳೆ ದುಬಾರೆ ಮೀಸಲು ಅರಣ್ಯದಲ್ಲಿ ಎಂದಿನAತೆ ತೆರೆದ ಜೀಪುಗಳಲ್ಲಿ ಸಫಾರಿ ತೆರಳುವ ಕಾಯಕ ಮುಂದುವರಿದಿದೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.