ಮಡಿಕೇರಿ, ಮೇ ೨೨: ನಗರದ ದಸರಾ ಮಂಟಪ ಸಮಿತಿಯ ೧೦ ದೇವಾಲಯಗಳಿಗೆ ತಲಾ ರೂ. ೫ ಲಕ್ಷ ಅನುದಾನಂತೆ ಒಟ್ಟು ರೂ. ೫೦ ಲಕ್ಷ ಹಣವನ್ನು ಸರಕಾರ ಬಿಡುಗಡೆಗೊಳಿಸಲಿದ್ದು, ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಸದ್ಭಳಕೆ ಮಾಡಿಕೊಳ್ಳುವಂತೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮನವಿ ಮಾಡಿದರು.

ನಗರದ ಕೋಟೆ ಆವರಣದಲ್ಲಿರುವ ಕೋಟೆ ಗಣಪತಿ ದೇವಾಲಯದಲ್ಲಿ ಪೂಜೆ ನೆರವೇರಿಸಿ ಈ ಕುರಿತು ಮಂತರ್ ಮಾಹಿತಿ ಒದಗಿಸಿದರು.

೧೦ ದಸರಾ ಸಮಿತಿ ಹೊಂದಿರುವ ದೇವಾಲಯಗಳ ಅಭಿವೃದ್ಧಿಗೆ ತಲಾ ರೂ. ೫ ಲಕ್ಷ ಹಣ ನೀಡಲಾಗುವುದು. ಅಭಿವೃದ್ಧಿ ಕಾರ್ಯದ ಬಗ್ಗೆ ಈಗಾಗಲೇ ಪಟ್ಟಿ ನೀಡಲಾಗಿದ್ದು, ಅದರಂತೆ ಕಾಮಗಾರಿ ನಡೆಯಲಿದೆ. ಇನ್ನಿತರ ದೇವಾಲಯಗಳಿಗೂ ಹಣ ನೀಡಲಾಗಿದೆ. ಮುಖ್ಯಮಂತ್ರಿ ವಿವೇಚನ ನಿಧಿಯಡಿ ರೂ. ೫೦ ಕೋಟಿ ಹಣ ಬಿಡುಗಡೆಯಾಗಿದೆ. ಈ ಪೈಕಿ ರೂ. ೧೨.೫೦ ಕೋಟಿ ಶಾಸಕರ ನಿಧಿಗೆ ನೀಡಿದ್ದು, ಇದನ್ನು ಬಳಸಿಕೊಂಡು ದೇವಾಲಯ ಅಭಿವೃದ್ಧಿ ಹಣ ವಿನಿಯೋಗಿಸಲಾಗಿದೆ. ಈಗಾಗಲೇ ಧಾರ್ಮಿಕ ದತ್ತಿ ಇಲಾಖೆಗೆ ಈ ಹಣವನ್ನು ಮಂಜೂರಾತಿಗೊಳಿಸಿ ಅಲ್ಲಿಂದ ಕೆಆರ್‌ಡಿಎಲ್‌ಗೆ ಹಣ ಸಂದಾಯವಾಗಿ ಅಭಿವೃದ್ಧಿ ಕಾರ್ಯ ಆ ಮೂಲಕವೇ ನಡೆಯಲಿದೆ ಎಂದು ವಿವರಿಸಿದರು. ಭೇಟಿ ಸಂದರ್ಭ ಮಡಿಕೇರಿ ನಗರಸಭೆ ಅಧ್ಯಕ್ಷೆ ಕಲಾವತಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ದಶಮಂಟಪ ಸಮಿತಿ ಅಧ್ಯಕ್ಷ ಹರೀಶ್ ಅಣ್ವೇಕರ್, ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ, ಪ್ರಮುಖರಾದ ಪ್ರಕಾಶ್ ಆಚಾರ್ಯ, ಜಿ.ಸಿ. ಜಗದೀಶ್, ಬಿ.ಎಂ. ರಾಜೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.