ಮಡಿಕೇರಿ, ಮೇ ೨೧: ದೇಶವ್ಯಾಪಿಯಾಗಿ ಪ್ರಸ್ತುತ ಪೆಟ್ರೋಲ್-ಡೀಸೆಲ್ ಲಭ್ಯತೆಯಲ್ಲಿ ಸಮಸ್ಯೆ ಕಂಡುಬರುತ್ತಿದ್ದು, ಇದರ ಪರಿಣಾಮ ಜಿಲ್ಲೆಯಲ್ಲೂ ಕೊರತೆ ಎದುರಾಗುತ್ತಿದೆ. ಪೆಟ್ರೋಲ್ ಬಂಕ್‌ಗಳಿಗೆ ಅವರು ಕೇಳುವಷ್ಟು ಸರಕು ಪೂರೈಕೆಯಾಗುತ್ತಿಲ್ಲ. ಬದಲಿಗೆ ಆಯಾ ಕಂಪೆನಿಯಿAದ ಎಷ್ಟು ಪ್ರಮಾಣ ದಲ್ಲಿ ಕಳುಹಿಸಲಾಗುತ್ತಿದೆಯೋ ಅದರಲ್ಲೇ ಪರಿಸ್ಥಿತಿ ನಿಭಾಯಿಸಬೇಕಾಗಿದೆ ಎಂದು ಮಡಿಕೇರಿಯಲ್ಲಿ ಬಂಕ್ ವಹಿವಾಟು ನಡೆಸುತ್ತಿರುವ ಮಣಿ ಅವರು ತಿಳಿಸಿದ್ದಾರೆ.

ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ಪೆಟ್ರೋಲ್ - ಡೀಸೆಲ್ ಬರುತ್ತಿರುವುದರಿಂದ ಇದು ತ್ವರಿತವಾಗಿ ಖಾಲಿಯಾಗುತ್ತಿವೆ. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿನ ಬಂಕ್ ಇಂದು ‘ನೋಸ್ಟಾಕ್’ ಆಗಿ ಮುಚ್ಚಲ್ಪಟ್ಟಿತ್ತು. ಮಂಗಳೂರು ರಸ್ತೆಯ ಬಂಕ್‌ನಲ್ಲಿ ಮಧ್ಯಾಹ್ನದ ವೇಳೆಗೆ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದವು. ಸದ್ಯಕ್ಕೆ ಇರುವ ಸಂಗ್ರಹ ಮುಗಿದೊಡನೆ ನಾವೂ ಮುಚ್ಚಬೇಕಾಗುತ್ತದೆ. ಮತ್ತೆ ಕಂಪೆನಿಯಿAದ ಲಭ್ಯವಾದರಷ್ಟೇ ಪೂರೈಕೆ ಸಾಧ್ಯ ಎಂದು ಮಾಲೀಕರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು. ಜಿಲ್ಲೆಯ ಇನ್ನಿತರ ಹಲವು ಭಾಗಗಳಲ್ಲೂ ಇದೇ ರೀತಿಯ ಪರಿಸ್ಥಿತಿ ಆಗಾಗ್ಗೆ ಎದುರಾಗುತ್ತಿದೆ ಎನ್ನಲಾಗಿದೆ.