ಸೋಮವಾರಪೇಟೆ, ಮೇ ೨೦ : ತಾಲೂಕಿನ ಪ್ರವಾಸಿ ತಾಣಗಳಲ್ಲಿ ಒಂದಾದ ಮಕ್ಕಳಗುಡಿ ಬೆಟ್ಟದಲ್ಲಿ ಮೂಲಭೂತ ಸೌಲಭ್ಯಗಳ ಅಳವಡಿಕೆಯೊಂದಿಗೆ ಹೆಚ್ಚುವರಿ ಅಭಿವೃದ್ಧಿ ಕಾರ್ಯಗಳಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ. ಮಂತರ್ ಗೌಡ ತಿಳಿಸಿದರು.
ಮಕ್ಕಳಗುಡಿ ಬೆಟ್ಟದ ಪ್ರದೇಶದಲ್ಲಿ ನಡೆದ ಮಕ್ಕಳಗುಡಿ ಬೆಟ್ಟ ಸಂರಕ್ಷಣಾ ಮತ್ತು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರವಾಸಿ ತಾಣ ಮಕ್ಕಳಗುಡಿ ಬೆಟ್ಟದಲ್ಲಿ ಕೆಲವೊಂದು ಅಭಿವೃದ್ಧಿ ಕೆಲಸಗಳಾಗಿವೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣಬೇಕು. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಉದ್ಯಾನ ಸೇರಿದಂತೆ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಲಾಗುವುದು. ಸಮಿತಿ ಸದಸ್ಯರು ಸಭೆ ಸೇರಿ ಅಭಿವೃದ್ಧಿ ಬಗ್ಗೆ ಸೂಕ್ತ ಯೋಜನೆಗಳನ್ನು ರೂಪಿಸಬೇಕಿದೆ. ಎಲ್ಲಿಯೇ ಅಭಿವೃದ್ಧಿ ಕೆಲಸಗಳಾಗುವ ಸಂದರ್ಭ ಎಲ್ಲರೂ ಆ ಕೆಲಸಗಳಿಗೆ ಕೈ ಜೋಡಿಸಬೇಕೆಂದರು.
ಸಾಕಷ್ಟು ಪ್ರವಾಸಿ ಸ್ಥಳಗಳು ಸ್ಥಳೀಯ ಗ್ರಾಮ ಪಂಚಾಯಿತಿ ಹೆಸರಿನಲ್ಲಿ ದಾಖಲೆಗಳನ್ನು ಮಾಡಿಸಿಕೊಂಡಿವೆ. ಅದರಂತೆ ಮಕ್ಕಳ ಗುಡಿ ಬೆಟ್ಟದ ಪ್ರದೇಶವನ್ನು ಸರ್ವೆ ಮಾಡಿಸಿಕೊಡಬೇಕೆಂದು ಮಕ್ಕಳಗುಡಿ ಬೆಟ್ಟ ಸಂರಕ್ಷಣಾ ಸಮಿತಿ ಅಧ್ಯಕ್ಷ ಸುರೇಶ್ ಮನವಿ ಮಾಡಿದರು. ಈ ಸಂದರ್ಭ ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ, ಮುಂದಿನ ಒಂದು ವಾರದಲ್ಲಿ ಮಕ್ಕಳಗುಡಿ ಬೆಟ್ಟದ ಗಡಿ ಗುರುತಿಸುವ ಕೆಲಸ ಮಾಡಿಸಿಕೊಡಬೇಕೆಂದು ಸೂಚಿಸಿದರು. ಮಕ್ಕಳ ಗುಡಿ ಬೆಟ್ಟದ ಸುತ್ತಲೂ ಸಾಕಷ್ಟು ತ್ಯಾಜ್ಯ ಕಂಡುಬರುತ್ತಿದ್ದು, ಒಂದು ವಾರದಲ್ಲಿ ಸ್ವಚ್ಛ ಮಾಡಿಸುವಂತೆ ಕಿರಗಂದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಅವರಿಗೆ ಸೂಚಿಸಿದರು. ತ್ಯಾಜ್ಯ ಸಂಗ್ರಹಿಸಲು ಅಲ್ಲಲ್ಲಿ ತೊಟ್ಟಿಗಳು, ಆಯ್ದ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಈ ಆವರಣವನ್ನು ಅಶುದ್ಧಗೊಳಿಸಲು ಮುಂದಾಗುವವರ ಮೇಲೆ ಸೂಕ್ತ ಕ್ರಮ ಮತ್ತು ದಂಡ ವಿಧಿಸುವ ಕೆಲಸ ಮಾಡುವ ಮೂಲಕ ಸಾರ್ವಜನಿಕರು ಇಲ್ಲಿನ ಪರಿಸರವನ್ನು ಆಹ್ಲಾದಿಸುವಂತೆ ಮಾಡಬೇಕೆಂದರು.
ಐಗೂರು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಬಿ. ಶಿವಕುಮಾರ್ ಮಾತನಾಡಿ, ಮಕ್ಕಳಗುಡಿ ಬೆಟ್ಟ ಸಮುದ್ರಮಟ್ಟದಿಂದ ೪ ಸಾವಿರ ಅಡಿ ಎತ್ತರದಲ್ಲಿದ್ದು, ಕಣ್ಣು ಹಾಯಿಸಿದಷ್ಟು ದೂರ ಸುಂದರ ಪರಿಸರವನ್ನು ಕಾಣಬಹುದು. ದಾನಿಗಳ ನೆರವಿನಿಂದ ಆಸನಗಳು, ತ್ಯಾಜ್ಯ ಸಂಗ್ರಹಿಸುವ ತೊಟ್ಟಿಗಳನ್ನು ಅಳವಡಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಮಕ್ಕಳಗುಡಿ ಬೆಟ್ಟದ ಭೂಮಿ ಒತ್ತುವರಿಯಾಗದಂತೆ ಗ್ರಾಮಸ್ಥರು ಒಂದು ಸಮಿತಿಯನ್ನು ಮಾಡಿಕೊಂಡು ಜಾಗವನ್ನು ಉಳಿಸಿಕೊಂಡು ಬರುವ ಕೆಲಸ ಮಾಡಿದ್ದಾರೆ. ಇಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸವಾಗಬೇಕಿದೆ ಎಂದು ಮನವಿ ಮಾಡಿದರು. ವೇದಿಕೆಯಲ್ಲಿ ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಚಂಗಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸತೀಶ್, ಸೆಸ್ಕ್ ಎಇಇ ವಿನಯ್ ಇದ್ದರು.