ಕುಶಾಲನಗರ, ಮೇ ೨೦: ದುಬಾರೆ ಸಾಕಾನೆ ಶಿಬಿರದಲ್ಲಿ ಇತ್ತೀಚೆಗೆ ಎರಡು ಆನೆಗಳ ಕಾದಾಟದ ವೇಳೆ ಪ್ರವಾಸಿ ಮಹಿಳೆಯ ಮತ್ತು ಆನೆಯ ಸಾವು ಘಟನೆಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ.
ಅರಣ್ಯ ಇಲಾಖೆಯ ಅಪರ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ರಾಜನ್ ಅವರು ಶಿಬಿರಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದರು.
ಇಲಾಖೆಯ ಜಿಲ್ಲಾ ಮತ್ತು ಸ್ಥಳೀಯ ಅಧಿಕಾರಿಗಳ ಜೊತೆ ದುಬಾರೆಯಲ್ಲಿ ಸೋಮವಾರ ನಡೆದ ಘಟನೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಮನೋಜ್ ರಾಜನ್, ಆನೆ ಶಿಬಿರದ ಉಸ್ತುವಾರಿ ಅಧಿಕಾರಿಗಳು ಮಾವುತ, ಕಾವಾಡಿಗರ ಮೂಲಕ ಘಟನೆಯ ಇಂಚಿAಚು ಮಾಹಿತಿ ಕಲೆ ಹಾಕಿದರು. ಪ್ರವಾಸಿ ಮಹಿಳೆಯ ದುರ್ಘಟನೆಗೆ ಕಾರಣ ಮತ್ತು ಎರಡು ಆನೆಗಳ ಕಾಳಗಕ್ಕೆ ಸಂಬAಧಿಸಿದ ವಿಷಯಗಳು, ಗಾಯಗೊಂಡ ಆನೆಯ ಸಾವು ಮತ್ತು ಎರಡು ಆನೆಗಳ ಪೂರ್ವ ಇತಿಹಾಸ ಬಗ್ಗೆ ಅಧಿಕಾರಿಗಳೊಂದಿಗೆ ಸಂಪೂರ್ಣ ವಿವರ ಪಡೆದರು. ಘಟನೆಗೆ ಪ್ರಮುಖ ಕಾರಣ ತನಿಖೆ ನಂತರ ಹೊರಬರಲಿದೆ ಎಂದು ಅವರು ತಿಳಿಸಿದ್ದಾರೆ.
ನಂತರ ಶಿಬಿರದಲ್ಲಿ ಇರುವ ಆನೆಗಳ ಮಾಹಿತಿ ಪಡೆದ ಮನೋಜ್ ರಾಜನ್, ಶಿಬಿರದ ಸಿಬಂದಿಗಳು, ಆನೆಗಳ ಮಾವುತ, ಕಾವಾಡಿಗರಿಗೆ ಶಿಬಿರದ ಕಾರ್ಯವೈಖರಿಗಳ ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಭ ಹಿರಿಯ ಅರಣ್ಯ ಅಧಿಕಾರಿಗಳು ಇದ್ದರು. ಮುಂದಿನ ಆದೇಶದ ತನಕ ದುಬಾರೆ ಶಿಬಿರಕ್ಕೆ ಪ್ರವಾಸಿಗರಿಗೆ ಭೇಟಿ ನಿರ್ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಲ್ಲದೆ ಶಿಬಿರದಲ್ಲಿ ಬಿಕೋ ಅನ್ನುವ ವಾತಾವರಣ ಗೋಚರಿಸಿದೆ.
- ಸಿಂಚು