ವೀರಾಜಪೇಟೆ, ಮೇ ೨೦: ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರ ಪ್ರಯತ್ನದಿಂದ ಕೆದಮುಳ್ಳೂರು ಗ್ರಾಮದ ತೋರ ನಿವಾಸಿ ಜಯೇಂದ್ರ ಅವರು ಕಳೆದುಕೊಂಡಿದ್ದ ತಮ್ಮ ದೃಷ್ಟಿಯನ್ನು ಮರಳಿ ಪಡೆಯುವಂತಾಗಿದೆ.

ಕಡುಬಡತನದಲ್ಲಿದ್ದ ಕೆದಮುಳ್ಳೂರಿನ ಜಯೇಂದ್ರ-ಚೋಮಕ್ಕಿ ದಂಪತಿ ಪೈಕಿ, ಜಯೇಂದ್ರ ಎಂಬವರು ತಮ್ಮ ಬಾಲ್ಯದಲ್ಲಿ ಕಾಯಿಲೆಗೆ ತುತ್ತಾಗಿ ಸಂಪೂರ್ಣ ದೃಷ್ಟಿ ಹೀನರಾಗಿದ್ದು, ಕಣ್ಣಿನ ಚಿಕಿತ್ಸೆಗೂ ಹಣ ಇಲ್ಲದ ಸಂದರ್ಭ, ಸುಮಾರು ಆರು ತಿಂಗಳ ಹಿಂದೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರನ್ನು ಸಂಪರ್ಕಿಸಿ ತಮ್ಮ ಸಮಸ್ಯೆ ಬಗ್ಗೆ ನಿವೇದಿಸಿಕೊಂಡಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಪೊನ್ನಣ್ಣ ಅವರು ಕಣ್ಣಿನ ಚಿಕಿತ್ಸೆಗೆ ಸಹಕರಿಸುವುದಾಗಿ ಭರವಸೆ ನೀಡಿದ್ದರು. ಬಳಿಕ ತಮಗೆ ಪರಿಚಯವಿದ್ದ ಚೋಕಂಡ ಸಂಜು ಸುಬ್ಬಯ್ಯ ಅವರ ಮೂಲಕ ಜಯೇಂದ್ರ ಅವರ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರು.

ದಂಪತಿಗೆೆ ತಮ್ಮ ವೈಯಕ್ತಿಕ ರೂ.೧೦ ಸಾವಿರ ಧನ ಸಹಾಯ ಮಾಡಿ, ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿ, ಸಂಜು ಸುಬ್ಬಯ್ಯ ಅವರಿಗೆ ಜವಾಬ್ದಾರಿಯನ್ನು ವಹಿಸಿದ್ದರು. ಇದೀಗ ಜಯೇಂದ್ರ ತಮ್ಮ ಒಂದು ಕಣ್ಣಿನ ದೃಷ್ಟಿಯನ್ನು ಚಿಕಿತ್ಸೆಯ ಬಳಿಕ ಬಹುತೇಕ ಮರಳಿ ಪಡೆದುಕೊಂಡಿದ್ದಾರೆ. ಶಾಸಕರ ಕಚೇರಿಗೆ ಆಗಮಿಸಿದ ಜಯೇಂದ್ರ ಅವರು, ಶಾಸಕರು ಹಾಗೂ ಸಂಜು ಸುಬ್ಬಯ್ಯ ಅವರ ಸಹಾಯವನ್ನು ಸ್ಮರಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು, ಈ ದಂಪತಿಯ ಆತ್ಮಸ್ಥೆöÊರ್ಯ ಎಲ್ಲರಿಗೂ ಮಾದರಿಯಾಗಲಿ ಎಂದರಲ್ಲದೆ ಸರಕಾರಿ ಆಸ್ಪತ್ರೆಗಳಲ್ಲೂ ಉಚಿತವಾಗಿ ಅತ್ಯುತ್ತಮ ಚಿಕಿತ್ಸಾ ಸೌಲಭ್ಯಗಳು ಲಭಿಸುತ್ತಿದ್ದು, ಪ್ರತಿಯೊಬ್ಬರೂ ಇಂತಹ ಸೌಲಭ್ಯಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.